Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 147

ಯೆಹೋವ ದೇವರನ್ನು ಸ್ತುತಿಸಿರಿ.

ಏಕೆಂದರೆ ನಮ್ಮ ದೇವರನ್ನು ಸ್ತುತಿಸುವುದು ಒಳ್ಳೆಯದು;

ದೇವರನ್ನು ಸ್ತುತಿಸುವುದು ರಮ್ಯವೂ, ಯೋಗ್ಯವೂ ಆಗಿದೆ.

ಯೆಹೋವ ದೇವರು ಯೆರೂಸಲೇಮನ್ನು ಕಟ್ಟುತ್ತಾರೆ,

ಚದರಿಹೋದ ಇಸ್ರಾಯೇಲನ್ನು ಕೂಡಿಸುತ್ತಾರೆ.

ದೇವರು ಮುರಿದ ಹೃದಯದವರನ್ನು ಸ್ವಸ್ಥಮಾಡಿ,

ಅವರ ಗಾಯಗಳನ್ನು ಕಟ್ಟುತ್ತಾರೆ.

ದೇವರು ನಕ್ಷತ್ರಗಳ ಸಂಖ್ಯೆಯನ್ನು ನಿರ್ಧರಿಸುತ್ತಾರೆ;

ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆಯುತ್ತಾರೆ.

ನಮ್ಮ ಯೆಹೋವ ದೇವರು ದೊಡ್ಡವರು, ಬಹು ಶಕ್ತರು;

ಅವರ ವಿವೇಕಕ್ಕೆ ಎಣೆಯಿಲ್ಲ.

ಯೆಹೋವ ದೇವರು ಸಾತ್ವಿಕರನ್ನು ಉದ್ಧರಿಸುತ್ತಾರೆ;

ದುಷ್ಟರನ್ನು ದಂಡಿಸುತ್ತಾರೆ.

ಯೆಹೋವ ದೇವರಿಗೆ ಸ್ತೋತ್ರಗೀತೆ ಹಾಡಿರಿ,

ನಮ್ಮ ದೇವರನ್ನು ಕಿನ್ನರಿಯಿಂದ ಸ್ತುತಿಸಿರಿ.

ದೇವರು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾರೆ;

ಭೂಮಿಗೆ ಮಳೆಯನ್ನು ಸುರಿಸುತ್ತಾರೆ;

ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾರೆ.

ದೇವರು ಪಶುಗಳಿಗೂ,

ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾರೆ.

ಕುದುರೆಯ ಶಕ್ತಿಯಲ್ಲಿ ಅವರಿಗೆ ಇಷ್ಟವಿಲ್ಲ;

ಶೂರನ ಕಾಲ್ಬಲವನ್ನು ಮೆಚ್ಚುವುದಿಲ್ಲ.

ಯೆಹೋವ ದೇವರು ತಮಗೆ ಭಯಪಡುವವರಲ್ಲಿ ಆನಂದಿಸುತ್ತಾರೆ,

ತಮ್ಮ ಒಡಂಬಡಿಕೆಯ ಪ್ರೀತಿಯನ್ನು ಎದುರು ನೋಡುವವರಲ್ಲಿ ಹರ್ಷಿಸುತ್ತಾರೆ.

ಯೆರೂಸಲೇಮೇ, ಯೆಹೋವ ದೇವರನ್ನು ಸ್ತುತಿಸು;

ಚೀಯೋನೇ, ನಿಮ್ಮ ದೇವರನ್ನು ಸ್ತುತಿಸು.

ನಿಮ್ಮ ಬಾಗಿಲುಗಳ ಅಗುಳಿಗಳನ್ನು ಬಲಗೊಳಿಸಿ,

ದೇವರು ನಿಮ್ಮ ಜನರನ್ನು ಆಶೀರ್ವದಿಸುತ್ತಾರೆ.

ದೇವರು ನಿಮ್ಮ ಮೇರೆಗಳನ್ನು ಸಮಾಧಾನಪಡಿಸುತ್ತಾರೆ;

ಉತ್ತಮವಾದ ಗೋಧಿಯಿಂದ ನಿಮ್ಮನ್ನು ತೃಪ್ತಿಪಡಿಸುತ್ತಾರೆ.

ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾರೆ;

ದೇವರ ವಾಕ್ಯವು ಬಹು ತೀವ್ರವಾಗಿ ಓಡುತ್ತದೆ.

ದೇವರು ಹಿಮವನ್ನು ಉಣ್ಣೆಯ ಹಾಗೆ ಹರಡುತ್ತಾರೆ;

ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

ದೇವರು ನೀರುಗಡ್ಡೆಯನ್ನು ಕಲ್ಲು ಹರಳುಗಳಂತೆ ಸುರಿದು ಹಾಕುತ್ತಾರೆ;

ಅವರು ಕಳುಹಿಸುವ ಚಳಿಯ ಮುಂದೆ ಯಾರು ನಿಲ್ಲುವರು?

ದೇವರು ತಮ್ಮ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾರೆ;

ದೇವರು ಗಾಳಿಯನ್ನು ಬೀಸುವಂತೆ ಮಾಡುತ್ತಾರೆ; ನೀರು ಹರಿಯುತ್ತದೆ.

ದೇವರು ಯಾಕೋಬ್ಯರಿಗೆ ತಮ್ಮ ವಾಕ್ಯವನ್ನು ಪ್ರಕಟಿಸುತ್ತಾರೆ,

ಇಸ್ರಾಯೇಲರಿಗೆ ತಮ್ಮ ತೀರ್ಪುಗಳನ್ನೂ, ತನ್ನ ನ್ಯಾಯವಿಧಿಗಳನ್ನೂ ಪ್ರಕಟಿಸುತ್ತಾರೆ.

ಬೇರೆ ಯಾವ ಜನಾಂಗಕ್ಕಾದರೂ ದೇವರು ಹೀಗೆ ಮಾಡಲಿಲ್ಲ;

ದೇವರ ನ್ಯಾಯವಿಧಿಗಳನ್ನು ಜನರು ತಿಳಿದುಕೊಳ್ಳುವುದಿಲ್ಲ.

ಯೆಹೋವ ದೇವರನ್ನು ಸ್ತುತಿಸಿರಿ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.