Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 144

ದಾವೀದನ ಕೀರ್ತನೆ.

ನನ್ನ ಬಲವಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.

ದೇವರು ನನ್ನ ಕೈಗಳಿಗೆ ಕಾಳಗವನ್ನು,

ನನ್ನ ಬೆರಳುಗಳಿಗೆ ಯುದ್ಧವಿದ್ಯೆಯನ್ನು ಕಲಿಸಿದ್ದಾರೆ.

ಅವರು ನನ್ನನ್ನು ಪ್ರೀತಿಸುವ ದೇವರು,

ಅವರು ನನ್ನ ಕೋಟೆಯೂ, ನನ್ನ ಬಲವಾದ ಆಶ್ರಯವೂ,

ನನ್ನನ್ನು ತಪ್ಪಿಸುವವರೂ, ನನ್ನ ಭರವಸೆಯೂ, ನನ್ನ ಗುರಾಣಿಯೂ,

ಜನಾಂಗಗಳನ್ನು ನನಗೆ ವಶಮಾಡುವವರೂ ಆಗಿದ್ದಾರೆ.

ಯೆಹೋವ ದೇವರೇ, ನೀವು ಮಾನವನನ್ನು ಲಕ್ಷವಿಡುವ ಹಾಗೆ ಅವನು ಎಷ್ಟರವನು?

ನೀವು ಅವನನ್ನು ನೆನಸುವ ಹಾಗೆ ಮಾನವನು ಎಷ್ಟರವನು?

ಮನುಷ್ಯನು ಕೇವಲ ಉಸಿರಿನಂತಿದ್ದಾನೆ;

ಅವನ ದಿವಸಗಳು ಅಳಿದು ಹೋಗುವ ನೆರಳಿನ ಹಾಗಿವೆ.

ಯೆಹೋವ ದೇವರೇ, ನಿಮ್ಮ ಆಕಾಶಗಳನ್ನು ಒಡೆದು ಇಳಿದು ಬನ್ನಿರಿ;

ಬೆಟ್ಟಗಳನ್ನು ಮುಟ್ಟಿರಿ, ಆಗ ಅವುಗಳಿಂದ ಹೊಗೆ ಹೊರಹೊಮ್ಮುವುದು.

ಮಿಂಚಿನಿಂದ ವೈರಿಗಳನ್ನು ಚದರಿಸಿರಿ.

ನಿಮ್ಮ ಬಾಣಗಳನ್ನು ಎಸೆದು, ಅವರನ್ನು ದಂಡಿಸಿರಿ.

ನಿಮ್ಮ ಕೈಯನ್ನು ಉನ್ನತದಿಂದ ಚಾಚಿ,

ಮಹಾ ಜಲದಿಂದಲೂ,

ಪರದೇಶದವರ ಕೈಯಿಂದಲೂ

ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ.

ಅವರ ಬಾಯಿ ಸುಳ್ಳನ್ನು ನುಡಿಯುತ್ತಿದೆ,

ಅವರ ಬಲಗೈ ಮೋಸದ ಬಲಗೈ ಆಗಿದೆ.

ಓ ದೇವರೇ, ನಾನು ಹೊಸಹಾಡನ್ನು ನಿಮಗೆ ಹಾಡುವೆನು;

ಹತ್ತು ತಂತಿಗಳ ವಾದ್ಯದಿಂದ ನಿಮ್ಮನ್ನು ಕೀರ್ತಿಸುವೆನು.

ಅರಸರಿಗೆ ಜಯವನ್ನು ಕೊಡುವ ದೇವರೇ,

ನಿಮ್ಮ ಸೇವಕನಾದ ದಾವೀದನನ್ನೂ ಭಯಂಕರ ಖಡ್ಗದಿಂದ ಬಿಡಿಸಿದ್ದೀರಿ.

ಪರದೇಶದವರ ಕೈಯಿಂದ ನನ್ನನ್ನು ತಪ್ಪಿಸಿರಿ, ನನ್ನನ್ನು ಬಿಡಿಸಿರಿ;

ಅವರ ಬಾಯಿ ವಂಚನೆಯನ್ನು ನುಡಿಯುತ್ತಿದೆ.

ಅವರ ಬಾಯಿ ಸುಳ್ಳನ್ನೇ ನುಡಿಯುತ್ತಿದೆ.

ನಮ್ಮ ಗಂಡು ಮಕ್ಕಳು ಸಸಿಗಳ ಹಾಗೆ

ಯೌವನದಲ್ಲಿ ಉತ್ತಮವಾಗಿ ಬೆಳೆದವರಾಗಿರಲಿ;

ನಮ್ಮ ಹೆಣ್ಣುಮಕ್ಕಳು ಅರಮನೆಯ ಶೃಂಗಾರಕ್ಕಾಗಿ

ಕೆತ್ತಿದ ಸುಂದರ ಸ್ತಂಭಗಳ ಹಾಗಿರಲಿ.

ನಮ್ಮ ಉಗ್ರಾಣಗಳು

ನಾನಾ ವಿಧವಾದ ಧಾನ್ಯಗಳನ್ನು ತುಂಬಿರಲಿ.

ನಮ್ಮ ಕುರಿಮಂದೆಗಳು ಸಹಸ್ರ ಸಹಸ್ರವಾಗಿ

ನಮ್ಮ ಹೊಲಗಳಲ್ಲಿ ಹತ್ತು ಸಹಸ್ರವಾಗಿ ಹೆಚ್ಚಲಿ.

ನಮ್ಮ ಎತ್ತುಗಳು ಪ್ರಯಾಸ ಪಡುವುದಕ್ಕೆ ಬಲವುಳ್ಳವುಗಳಾಗಲಿ;

ವೈರಿಗಳು ಒಳಗೆ ನುಗ್ಗುವುದಾಗಲಿ,

ನಮ್ಮವರನ್ನು ಸೆರೆ ಹಿಡಿಯುವುದಾಗಲಿ ಇರುವುದಿಲ್ಲ.

ನಮ್ಮ ಬೀದಿಗಳಲ್ಲಿ ಗೋಳಾಟವು ಇಲ್ಲದಿರಲಿ.

ಹೀಗಿರುವ ಜನರು ಧನ್ಯರು;

ಯೆಹೋವ ದೇವರು ಯಾರಿಗೆ ದೇವರಾಗಿದ್ದಾರೋ, ಅವರು ಧನ್ಯರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.