Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 137
ಬಾಬಿಲೋನಿನ ನದಿಗಳ ಹತ್ತಿರ ನಾವು ಕುಳಿತುಕೊಂಡು,
ಚೀಯೋನನ್ನು ಜ್ಞಾಪಕ ಮಾಡಿಕೊಂಡಾಗ ಅತ್ತೆವು.
ಅದರ ನಡುವೆ ಇರುವ ನೀರವಂಜಿ ಮರಗಳ ಮೇಲೆ
ನಮ್ಮ ಕಿನ್ನರಿಗಳನ್ನು ತೂಗು ಹಾಕಿದೆವು.
ಏಕೆಂದರೆ ಅಲ್ಲಿ ನಮ್ಮನ್ನು ಸೆರೆಹಿಡಿದು ಬಂಧಿಸಿದವರು,
ನಮಗೆ ಹಾಡನ್ನು ಹಾಡಲು ಹೇಳಿದ್ದರು;
ನಮ್ಮನ್ನು ಪೀಡಿಸುವವರು ವಿನೋದಕ್ಕಾಗಿ ಹಾಡನ್ನು ಕೇಳಲು ಬಯಸಿದ್ದರು;
“ಚೀಯೋನಿನ ಹಾಡುಗಳಲ್ಲಿ ಒಂದು ನಮಗೆ ಹಾಡಿರಿ,” ಎಂದರು.
ಅನ್ಯದೇಶದಲ್ಲಿ ನಾವು
ಯೆಹೋವ ದೇವರ ಹಾಡುಗಳನ್ನು ಹಾಡುವುದು ಹೇಗೆ?
ಯೆರೂಸಲೇಮೇ, ನಾನು ನಿನ್ನನ್ನು ಮರೆತುಬಿಟ್ಟರೆ,
ನನ್ನ ಬಲಗೈಯ ಕೌಶಲ್ಯ ಮರೆತು ಹೋಗಲಿ.
ನಾನು ನಿನ್ನನ್ನು ಜ್ಞಾಪಕಮಾಡಿಕೊಳ್ಳದಿದ್ದರೆ,
ಯೆರೂಸಲೇಮನ್ನು ನನ್ನ ಎಲ್ಲಾ ಸಂತೋಷಕ್ಕಿಂತಲೂ ಹೆಚ್ಚಾಗಿಡದಿದ್ದರೆ,
ನನ್ನ ನಾಲಿಗೆಯು ಸೇದಿಹೋಗಲಿ.
ಯೆರೂಸಲೇಮು ಬಿದ್ದುಹೋದ ದಿವಸದಲ್ಲಿ,
“ಹಾಳುಮಾಡಿರಿ, ಅದರ ಅಸ್ತಿವಾರದವರೆಗೆ ಹಾಳುಮಾಡಿರಿ,”
ಎಂದು ಹೇಳಿದ ಎದೋಮಿನವರನ್ನು
ಯೆಹೋವ ದೇವರೇ ಜ್ಞಾಪಕಮಾಡಿಕೊಳ್ಳಿರಿ.
ಹಾಳಾಗಲಿಕ್ಕಿರುವ ಬಾಬಿಲೋನ್ ನಗರವೇ,
ನೀನು ನಮಗೆ ಮಾಡಿದ್ದಕ್ಕೆ ಪ್ರತೀಕಾರವನ್ನು
ನಿನಗೆ ಸಲ್ಲಿಸುವವನು ಧನ್ಯನು.
ನಿಮ್ಮ ಚಿಕ್ಕ ಕೂಸುಗಳನ್ನು ಹಿಡಿದು,
ಬಂಡೆಗಳ ಮೇಲೆ ಅಪ್ಪಳಿಸಿ ಬಿಡುವವನು ಧನ್ಯನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.