Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 118
ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ; ಅವರು ಒಳ್ಳೆಯವರು.
ಅವರ ಪ್ರೀತಿ ಶಾಶ್ವತವಾಗಿರುವುದು.
“ದೇವರ ಪ್ರೀತಿಯು ಯುಗಯುಗಕ್ಕೂ ಇದೆ,”
ಎಂದು ಇಸ್ರಾಯೇಲ್ ಹೇಳಲಿ.
“ದೇವರ ಪ್ರೀತಿಯು ಸದಾಕಾಲವೂ ಇರುವುದು,”
ಎಂದು ಆರೋನನ ಮನೆಯವರು ಹೇಳಲಿ.
“ದೇವರ ಪ್ರೀತಿಯು ಸದಾಕಾಲವೂ ಇರುವುದು,”
ಎಂದು ಯೆಹೋವ ದೇವರಿಗೆ ಭಯಪಡುವವರು ಹೇಳಲಿ.
ಇಕ್ಕಟ್ಟಿನೊಳಗಿಂದ ಯೆಹೋವ ದೇವರಿಗೆ ಕೂಗಿದೆನು;
ಯೆಹೋವ ದೇವರು ಉತ್ತರಕೊಟ್ಟು, ನನ್ನನ್ನು ವಿಶಾಲವಾದ ಸ್ಥಳಕ್ಕೆ ತಂದರು.
ಯೆಹೋವ ದೇವರು ನನ್ನ ಪರವಾಗಿದ್ದಾರೆ, ನಾನು ಭಯಪಡೆನು.
ಮನುಷ್ಯನು ನನಗೆ ಏನು ಮಾಡಬಲ್ಲನು?
ಯೆಹೋವ ದೇವರು ನನ್ನೊಂದಿಗಿದ್ದಾರೆ, ಅವರು ನನಗೆ ಸಹಾಯಕರು;
ನಾನು ವೈರಿಗಳ ಮೇಲೆ ಜಯ ಸಾಧಿಸುವೆನು.
ಮನುಷ್ಯರಲ್ಲಿ ಭರವಸೆ ಇಡುವುದಕ್ಕಿಂತ
ಯೆಹೋವ ದೇವರಲ್ಲಿ ಆಶ್ರಯ ಪಡೆಯುವುದು ಒಳ್ಳೆಯದು.
ಅಧಿಪತಿಗಳಲ್ಲಿ ಭರವಸೆ ಇಡುವುದಕ್ಕಿಂತ
ಯೆಹೋವ ದೇವರ ಆಶ್ರಯ ಪಡೆಯುವುದು ಒಳ್ಳೆಯದು.
ಎಲ್ಲಾ ರಾಷ್ಟ್ರದವರು ನನ್ನನ್ನು ಸುತ್ತಿಕೊಂಡರು;
ಆದರೆ ನಾನು ಯೆಹೋವ ದೇವರ ಹೆಸರಿನಲ್ಲಿ ಅವರನ್ನು ದಂಡಿಸುವೆನು.
ಅವರು ನನ್ನನ್ನು ಎಲ್ಲಾ ದಿಕ್ಕುಗಳಿಂದ ಸುತ್ತಿಕೊಂಡರು;
ಯೆಹೋವ ದೇವರ ಹೆಸರಿನಲ್ಲಿ ಅವರನ್ನು ಸೋಲಿಸುವೆನು.
ಜೇನುನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ,
ಅವರು ಮುಳ್ಳಿನ ಬೆಂಕಿಯ ಹಾಗೆ ಕ್ಷಣಮಾತ್ರದಲ್ಲಿ ಇಲ್ಲವಾಗಿ ಹೋದರು;
ಯೆಹೋವ ದೇವರ ಹೆಸರಿನಲ್ಲಿ ನಾನು ಅವರನ್ನು ಸೋಲಿಸುವೆನು.
ನಾನು ಬೀಳುವ ಹಾಗೆ ವೈರಿಯು ನನ್ನನ್ನು ನೂಕಿದನು;
ಆದರೆ ಯೆಹೋವ ದೇವರು ನನಗೆ ಸಹಾಯ ಮಾಡಿದರು.
ನನ್ನ ಬಲವೂ, ಬೆಂಬಲವೂ ಯೆಹೋವ ದೇವರೇ;
ಅವರೇ ನನಗೆ ರಕ್ಷಣೆಯಾದರು.
ಜಯಘೋಷವೂ ಹರ್ಷಧ್ವನಿಯೂ
ನೀತಿವಂತರ ಗುಡಾರಗಳಲ್ಲಿ ಪ್ರತಿಧ್ವನಿಸುತ್ತಿರುವುದು;
ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
ಯೆಹೋವ ದೇವರ ಬಲಗೈ ಎತ್ತರವಾಗಿ ಎತ್ತಲಾಗಿದೆ;
ಯೆಹೋವ ದೇವರ ಬಲಗೈ ಪರಾಕ್ರಮವನ್ನು ನಡೆಸಿದೆ.
ನಾನು ಸಾಯದೆ ಬದುಕಿರುವೆನು,
ಯೆಹೋವ ದೇವರು ಮಾಡಿದ್ದನ್ನು ಸಾರುವೆನು.
ಏಕೆಂದರೆ ಯೆಹೋವ ದೇವರು ನನ್ನನ್ನು ಕಠಿಣವಾಗಿ ಶಿಕ್ಷಿಸಿದರು;
ಆದರೆ ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
ನೀತಿಯ ಬಾಗಿಲುಗಳನ್ನು ನನಗೆ ತೆರೆಯಿರಿ;
ಅವುಗಳೊಳಗೆ ಪ್ರವೇಶಿಸಿ ಯೆಹೋವ ದೇವರಿಗೆ ಧನ್ಯವಾದ ಸಲ್ಲಿಸು.
ಇದೇ ಯೆಹೋವ ದೇವರ ಬಾಗಿಲು;
ನೀತಿವಂತರು ಇದರಲ್ಲಿ ಪ್ರವೇಶಿಸುವರು.
ನಿಮಗೆ ಕೃತಜ್ಞತಾವಂದನೆ ಸಲ್ಲಿಸುವೆನು;
ಏಕೆಂದರೆ ನನಗೆ ನೀವು ಉತ್ತರಕೊಟ್ಟು, ನನಗೆ ರಕ್ಷಣೆಯಾದಿರಿ.
ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು.
ಇದು ಯೆಹೋವ ದೇವರಿಂದಲೇ ಉಂಟಾಯಿತು;
ಇದು ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಯಿತು.
ಯೆಹೋವ ದೇವರು ಮಾಡಿದ ದಿನವು ಇದೇ;
ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡೋಣ.
ಯೆಹೋವ ದೇವರೇ ನಮ್ಮನ್ನು ರಕ್ಷಿಸಿರಿ,
ಯೆಹೋವ ದೇವರೇ ನಮಗೆ ಜಯಕೊಡಿರಿ.
ಯೆಹೋವ ದೇವರ ಹೆಸರಿನಲ್ಲಿ ಬರುವವನು ಧನ್ಯನು;
ಯೆಹೋವ ದೇವರ ಆಲಯದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸುವೆವು.
ಯೆಹೋವ ದೇವರು ದೇವರಾಗಿದ್ದಾನೆ;
ನಮ್ಮ ಮೇಲೆ ಅವರ ಬೆಳಕನ್ನು ಪ್ರಕಾಶಿಸುವಂತೆ ಮಾಡಿದ್ದಾರೆ.
ಕೊಂಬೆಗಳನ್ನು ಕೈಯಲ್ಲಿ ಹಿಡಿದುಕೊಂಡು
ಬಲಿಪೀಠದ ಕೊಂಬುಗಳವರೆಗೆ ಮೆರವಣಿಗೆಯಾಗಿ ಬನ್ನಿರಿ.
ನೀವು ನನ್ನ ದೇವರಾಗಿದ್ದೀರಿ, ನಿಮಗೆ ಉಪಕಾರ ಸಲ್ಲಿಸುವೆನು;
ನೀವು ನನ್ನ ದೇವರು; ನಿಮ್ಮನ್ನು ನಾನು ಉನ್ನತಪಡಿಸುವೆನು.
ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ; ಅವರು ಒಳ್ಳೆಯವರು;
ಅವರ ಪ್ರೀತಿ ಶಾಶ್ವತವಾಗಿರುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.