Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಕೀರ್ತನೆಗಳು 104
ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು.
ನನ್ನ ದೇವರಾದ ಯೆಹೋವ ದೇವರೇ, ನೀವು ಬಹಳ ದೊಡ್ಡವರಾಗಿದ್ದೀರಿ; ಘನತೆಯಿಂದಲೂ,
ಪ್ರಭಾವದಿಂದಲೂ ಭೂಷಿತನಾಗಿರುವೆ.
ದೇವರು ವಸ್ತ್ರದ ಹಾಗೆ ಬೆಳಕನ್ನು ಧರಿಸಿಕೊಳ್ಳುತ್ತಾರೆ,
ಆಕಾಶವನ್ನು ಗುಡಾರದ ಹಾಗೆ ಹರಡಿಸಿದ್ದಾರೆ.
ದೇವರು ನೀರಿನ ಮೇಲೆ ತನ್ನ ಉಪ್ಪರಿಗೆಗಳ ತೊಲೆಗಳನ್ನು ಇರಿಸುತ್ತಾರೆ.
ಮೋಡಗಳನ್ನು ತಮ್ಮ ರಥವಾಗಿ ಮಾಡುತ್ತಾರೆ.
ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡುತ್ತಾರೆ.
ಅವರು ಗಾಳಿಗಳನ್ನು ತಮ್ಮ ದೂತರಾಗಿ ಮಾಡಿದ್ದಾರೆ,
ಅಗ್ನಿ ಜ್ವಾಲೆಯನ್ನು ತಮ್ಮ ಸೇವಕರಾಗಿಯೂ ಮಾಡಿಕೊಂಡಿದ್ದಾರೆ.
ಯುಗಯುಗಾಂತರಗಳಿಗೂ ಅದು ಕದಲದ ಹಾಗೆ,
ದೇವರು ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಸ್ಥಾಪಿಸಿದ್ದಾರೆ.
ಜಲಗಾಧವು ವಸ್ತ್ರದ ಹಾಗೆ ಅದನ್ನು ಮುಚ್ಚಿದೆ;
ಬೆಟ್ಟಗಳ ಮೇಲೆ ಜಲರಾಶಿಗಳು ನಿಂತವು.
ನಿಮ್ಮ ಗದರಿಕೆಯಿಂದ ಜಲರಾಶಿ ಓಡಿ ಹೋದವು;
ನಿಮ್ಮ ಗುಡುಗಿನ ಶಬ್ದದಿಂದ ಅವು ಓಡಿ ಹೋದವು.
ಜಲರಾಶಿಗಳು ಬೆಟ್ಟಗಳಿಗೆ ಏರಿ,
ತಗ್ಗುಗಳಿಗೆ ಇಳಿದು,
ನೀವು ಅವುಗಳಿಗೆ ಸ್ಥಾಪಿಸಿದ ಸ್ಥಳಕ್ಕೆ ಹೋದವು.
ಅವು ದಾಟದ ಹಾಗೆಯೂ,
ಭೂಮಿಯನ್ನು ಮುಚ್ಚುವುದಕ್ಕೆ ತಿರುಗಿ ಬಾರದ ಹಾಗೆಯೂ ನೀವು ಮೇರೆಯನ್ನು ಇಟ್ಟಿದ್ದೀರಿ.
ಬುಗ್ಗೆಗಳನ್ನು ಹಳ್ಳಗಳಿಗೆ ಕಳುಹಿಸುತ್ತೀರಿ.
ಅವು ಬೆಟ್ಟಗಳ ನಡುವೆ ಹರಿಯುತ್ತವೆ.
ಅವು ಕಾಡಿನ ಮೃಗಗಳಿಗೆಲ್ಲಾ ನೀರು ಕುಡಿಸುತ್ತವೆ;
ಕಾಡುಕತ್ತೆಗಳು ತಮ್ಮ ದಾಹವನ್ನು ತೀರಿಸಿಕೊಳ್ಳುತ್ತವೆ.
ಆಕಾಶದ ಪಕ್ಷಿಗಳು, ಅವುಗಳ ಹತ್ತಿರ ವಾಸವಾಗಿದ್ದು,
ಕೊಂಬೆಗಳ ಮಧ್ಯದಲ್ಲಿಂದ ಹಾಡುತ್ತವೆ.
ದೇವರು ಬೆಟ್ಟಗಳಿಗೆ ತಮ್ಮ ಉಪ್ಪರಿಗೆಗಳೊಳಗಿಂದ ನೀರು ಹಾಕುತ್ತಾರೆ.
ಅವರ ಕೆಲಸಗಳ ಫಲದಿಂದ ಭೂಮಿಯು ತೃಪ್ತಿಯಾಗುತ್ತದೆ.
ದೇವರು ಪಶುಗಳಿಗೋಸ್ಕರ ಹುಲ್ಲನ್ನೂ,
ಮನುಷ್ಯನ ವ್ಯವಸಾಯಕ್ಕೋಸ್ಕರ ಪಲ್ಯಗಳನ್ನೂ ಮೊಳೆಸುತ್ತಾರೆ.
ಹೀಗೆ ಭೂಮಿಯೊಳಗಿಂದ ಆಹಾರವನ್ನು ಬರಮಾಡುತ್ತಾರೆ.
ದ್ರಾಕ್ಷಾರಸವು ಮನುಷ್ಯ ಹೃದಯವನ್ನು ಸಂತೋಷಪಡಿಸುತ್ತದೆ;
ಎಣ್ಣೆಯು ಮಾನವನ ಮುಖವನ್ನು ಪ್ರಕಾಶಿಸುವಂತೆ ಮಾಡುತ್ತದೆ;
ರೊಟ್ಟಿಯು ಮನುಷ್ಯನ ಪ್ರಾಣಕ್ಕೆ ಆಧಾರವಾಗುತ್ತದೆ.
ಯೆಹೋವ ದೇವರು ನೆಟ್ಟ ಮರಗಳಾದ ಲೆಬನೋನಿನ
ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.
ಅಲ್ಲಿ ಹಕ್ಕಿಗಳು ಗೂಡು ಕಟ್ಟುತ್ತವೆ;
ತುರಾಯಿ ಗಿಡಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.
ಎತ್ತರವಾದ ಬೆಟ್ಟಗಳು ಕಾಡುಮೇಕೆಗಳಿಗೆ,
ಬೆಟ್ಟದ ಮೊಲಗಳಿಗೆ ಬಂಡೆಗಳು ಆಶ್ರಯವಾಗಿವೆ.
ದೇವರೇ, ಕಾಲಗಳ ಸೂಚನೆಗಾಗಿ ಚಂದ್ರನನ್ನು ಸೃಷ್ಟಿಸಿದ್ದೀರಿ,
ಸೂರ್ಯನು ತನ್ನ ಅಸ್ತಮಾನವನ್ನು ತಿಳಿದಿದ್ದಾನೆ.
ನೀವು ಕತ್ತಲನ್ನು ಬರಮಾಡುತ್ತೀರಿ, ಆಗ ರಾತ್ರಿಯಾಗುತ್ತದೆ;
ಅದರಲ್ಲಿ ಅಡವಿಯ ಮೃಗಗಳೆಲ್ಲಾ ಸಂಚರಿಸುತ್ತವೆ.
ಸಿಂಹದ ಮರಿಗಳು ಬೇಟೆಗೋಸ್ಕರವೂ,
ದೇವರಿಂದ ತಮ್ಮ ಆಹಾರವನ್ನು ಹುಡುಕುವುದಕ್ಕೋಸ್ಕರವೂ ಗರ್ಜಿಸುತ್ತವೆ.
ಸೂರ್ಯೋದಯವಾಗಲು ಅವು ಕೂಡಿಬಂದು
ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.
ಮನುಷ್ಯನು ತನ್ನ ಕೆಲಸಕ್ಕೆ ಹೊರಟುಹೋಗಿ
ಸಾಯಂಕಾಲದವರೆಗೆ ದುಡಿಯುತ್ತಾನೆ.
ಯೆಹೋವ ದೇವರೇ, ನಿಮ್ಮ ಕೆಲಸಗಳು ಎಷ್ಟೋ ಇವೆ!
ಅವುಗಳನ್ನೆಲ್ಲಾ ಜ್ಞಾನದಿಂದ ಉಂಟುಮಾಡಿದ್ದೀರಿ,
ಭೂಮಿಯು ನಿಮ್ಮ ಸಂಪತ್ತಿನಿಂದ ತುಂಬಿದೆ.
ದೊಡ್ಡದೂ, ವಿಶಾಲವಾದದ್ದೂ ಆದ ಸಮುದ್ರವಿದೆ;
ಅದರಲ್ಲಿ ಲೆಕ್ಕವಿಲ್ಲದಷ್ಟು ಜೀವಜಂತುಗಳೂ,
ಸಣ್ಣ ದೊಡ್ಡ ಜಲಚರಗಳೂ ಇವೆ.
ಅದರಲ್ಲಿ ಹಡಗುಗಳು ಹೋಗುತ್ತವೆ;
ಅದರಲ್ಲಿ ಆಡುವುದಕ್ಕೆ ನೀವು ರೂಪಿಸಿದ ಲಿವ್ಯಾತಾನ ತಿಮಿಂಗಲವು ಇದೆ.
ದೇವರೇ, ನೀವು ಅವುಗಳ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುವ ಹಾಗೆ,
ಅವುಗಳೆಲ್ಲಾ ನಿಮ್ಮನ್ನು ಕಾದುಕೊಂಡಿರುತ್ತವೆ.
ನೀವು ಅವುಗಳಿಗೆ ಕೊಡಲು
ಅವು ಕೂಡಿ ಬರುತ್ತವೆ;
ನೀವು ನಿಮ್ಮ ಕೈ ತೆರೆಯಲು,
ಒಳ್ಳೆಯವುಗಳಿಂದ ತೃಪ್ತಿ ಹೊಂದುತ್ತವೆ.
ನೀವು ನಿಮ್ಮ ಮುಖವನ್ನು ಮರೆಮಾಡಲು,
ಅವು ಹೆದರುತ್ತವೆ.
ನೀವು ಅವುಗಳ ಶ್ವಾಸವನ್ನು ತೆಗೆದುಬಿಡಲು,
ಸತ್ತು ಹೋಗಿ, ಮಣ್ಣುಪಾಲಾಗುತ್ತವೆ.
ನೀವು ನಿಮ್ಮ ಶ್ವಾಸವನ್ನು ಕಳುಹಿಸಲು,
ಜೀವಜಂತುಗಳು ಹುಟ್ಟುತ್ತವೆ;
ಹೀಗೆ ನೀವು ಭೂಮಿಯನ್ನು ನೂತನಗೊಳಿಸುತ್ತೀರಿ.
ಯೆಹೋವ ದೇವರ ಮಹಿಮೆಯು ಯುಗಯುಗಕ್ಕೂ ಇರಲಿ;
ಯೆಹೋವ ದೇವರು ತಮ್ಮ ಕೆಲಸಗಳಲ್ಲಿ ಸಂತೋಷಪಡಲಿ.
ಅವರು ಭೂಮಿಯನ್ನು ದೃಷ್ಟಿಸಲು, ಅದು ನಡುಗುತ್ತದೆ;
ಬೆಟ್ಟಗಳನ್ನು ಮುಟ್ಟಲು, ಅವು ಹೊಗೆ ಹಾಯುತ್ತವೆ.
ನಾನು ಜೀವಿತ ಕಾಲವೆಲ್ಲಾ ಯೆಹೋವ ದೇವರಿಗೆ ಹಾಡುತ್ತಿರುವೆನು.
ನಾನು ಬದುಕಿರುವವರೆಗೆ ದೇವರನ್ನು ಸ್ತುತಿಸುತ್ತಿರುವೆನು.
ದೇವರ ವಿಷಯವಾದ ನನ್ನ ಧ್ಯಾನವು ಮಧುರವಾಗಿರುವುದು;
ನಾನು ಯೆಹೋವ ದೇವರಲ್ಲಿ ಸಂತೋಷ ಪಡುವೆನು.
ಪಾಪಿಗಳು ಭೂಮಿಯೊಳಗಿಂದ ಮುಗಿದು ಹೋಗಲಿ;
ದುಷ್ಟರು ಇಲ್ಲದೆ ಹೋಗಲಿ.
ನನ್ನ ಮನವೇ, ಯೆಹೋವ ದೇವರನ್ನು ಸ್ತುತಿಸು.
ಯೆಹೋವ ದೇವರಿಗೆ ಸ್ತೋತ್ರವಾಗಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.