Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಕೀರ್ತನೆಗಳು 102

ದುಃಖಿತನಾಗಿ ಯೆಹೋವ ದೇವರ ಮುಂದೆ ತನ್ನ ಚಿಂತೆಗಳನ್ನು ಹೇಳಿಕೊಳ್ಳುವ ಬಾಧಿತನ ಪ್ರಾರ್ಥನೆ.

ಯೆಹೋವ ದೇವರೇ, ನನ್ನ ಪ್ರಾರ್ಥನೆಯನ್ನು ಕೇಳಿರಿ;

ನನ್ನ ಮೊರೆಯು ನಿಮಗೆ ಮುಟ್ಟಲಿ.

ನನಗೆ ಇಕ್ಕಟ್ಟು ಇರುವ ದಿವಸದಲ್ಲಿ

ನಿಮ್ಮ ಮುಖವನ್ನು ನನಗೆ ಮರೆಮಾಡಬೇಡಿರಿ, ಸಹಾಯಮಾಡಿರಿ;

ನಾನು ಕರೆಯುವಾಗ ನನ್ನ ಕಡೆಗೆ ತಿರುಗಿರಿ,

ಬೇಗನೇ ನನಗೆ ಉತ್ತರಕೊಡಿರಿ.

ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗುತ್ತವೆ;

ನನ್ನ ಎಲುಬುಗಳು ಬೂದಿ ಮುಚ್ಚಿದ ಕೆಂಡದಂತೆ ಸುಟ್ಟುಹೋಗಿವೆ.

ನನ್ನ ಹೃದಯವು ಬಾಡಿಹೋಗಿ ಹುಲ್ಲಿನ ಹಾಗೆ ಒಣಗಿಹೋಗಿದೆ;

ನಾನು ಊಟಮಾಡುವುದಕ್ಕೆ ಸಹ ಮರೆತುಬಿಡುತ್ತೇನೆ.

ನಾನು ನನ್ನ ನಿಟ್ಟುಸಿರಿನಿಂದ ಮೊರೆಯಿಡುತ್ತಿದ್ದೇನೆ.

ನನ್ನಲ್ಲಿ ಎಲುಬು ತೊಗಲು ಮಾತ್ರ ಉಳಿದಿರುತ್ತವೆ.

ನಾನು ಅರಣ್ಯದ ಗೂಬೆಗೆ ಸಮಾನನಾಗಿದ್ದೇನೆ;

ನಾನು ಹಾಳೂರಿನ ಗೂಬೆಯ ಹಾಗಿದ್ದೇನೆ.

ನಿದ್ರೆಯಿಲ್ಲದೆ ಬಳಲುತ್ತಿದ್ದೇನೆ;

ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ.

ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ;

ನನ್ನ ಮೇಲೆ ಕೋಪಿಸಿಕೊಳ್ಳುವವರೆಲ್ಲರು ನನಗೆ ವಿರೋಧವಾಗಿ ಶಪಿಸುತ್ತಾರೆ.

ನಿಮ್ಮ ದುಃಖ ಬೇಸರದ ನಿಮಿತ್ತ, ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ;

ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿದ್ದೇನೆ.

ಇದಕ್ಕೆ ಕಾರಣ ನೀವು ಗಮನ ಕೊಡದಿರುವುದೇ.

ನೀವು ನನಗೆ ಲಕ್ಷ್ಯಕೊಡುತ್ತಾಯಿಲ್ಲ.

ನನ್ನ ದಿವಸಗಳು ಸಾಯಂಕಾಲದ ನೆರಳಿನ ಹಾಗಿವೆ;

ನಾನು ಹುಲ್ಲಿನ ಹಾಗೆ ಒಣಗುತಿದ್ದೇನೆ.

ಆದರೆ ನೀವು ಯೆಹೋವ ದೇವರೇ, ಎಂದೆಂದಿಗೂ ಇರುತ್ತೀರಿ;

ನಿಮ್ಮ ಪ್ರಸಿದ್ಧ ಕಾರ್ಯಗಳು ತಲತಲಾಂತರಕ್ಕೂ ಇರುತ್ತವೆ.

ನೀವು ಎದ್ದು ಚೀಯೋನನ್ನು ಕನಿಕರಿಸುವಿರಿ;

ಅದನ್ನು ಕರುಣಿಸುವ ಕಾಲ ಇದೇ;

ಹೌದು, ನೀವು ನಿರ್ಣಯಿಸಿದ ಸಮಯವು ಬಂದಿದೆ.

ಅದು ಕಲ್ಲು ಕುಪ್ಪೆಯಾಗಿ ಹೋಗಿದ್ದರೂ, ನಿಮ್ಮ ಸೇವಕರಿಗೆ ಅತಿ ಪ್ರಿಯವಾಗಿದೆ;

ಅದರ ಧೂಳಿಗೆ ಅವರು ಮರಗುತ್ತಾರೆ.

ಜನಾಂಗಗಳು ಯೆಹೋವ ದೇವರ ಹೆಸರಿಗೂ,

ಭೂರಾಜರೆಲ್ಲರೂ ನಿಮ್ಮ ಮಹಿಮೆಗೂ ಭಯಪಡುವರು.

ಏಕೆಂದರೆ ಯೆಹೋವ ದೇವರು ಚೀಯೋನನ್ನು ಮರಳಿ ಕಟ್ಟುವರು;

ಅವರು ತಮ್ಮ ಮಹಿಮೆಯಲ್ಲಿ ಕಾಣಿಸಿಕೊಳ್ಳುವರು.

ಅವರು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾರೆ;

ದೇವರು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.

ಇದು ಮುಂದಿನ ಸಂತತಿಗೋಸ್ಕರ ಲಿಖಿತವಾಗಿರಲಿ;

ಹುಟ್ಟಲಿಕ್ಕಿರುವ ಜನರು ಯೆಹೋವ ದೇವರನ್ನು ಸ್ತುತಿಸಲಿ.

ಯೆಹೋವ ದೇವರು ಉನ್ನತವಾದ ಪವಿತ್ರ ಸ್ಥಾನದಿಂದ ಕೆಳಕ್ಕೆ ನೋಡಿದ್ದಾರೆ;

ಅವರು ಪರಲೋಕದಿಂದ ಭೂಮಿಯನ್ನು ದೃಷ್ಟಿಸಿದ್ದಾರೆ.

ಅವರು ಸೆರೆಯವರ ಗೋಳಾಟವನ್ನು ಕೇಳಿ,

ಮರಣದಂಡನೆಗೆ ಪಾತ್ರನಾದವರನ್ನು ಬಿಡಿಸುವರು,

ಬಿಡುಗಡೆಯಾದವರು ಚೀಯೋನಿನಲ್ಲಿ ಯೆಹೋವ ದೇವರ ನಾಮವನ್ನು ಸಾರುವಂತೆಯೂ,

ಯೆರೂಸಲೇಮಿನಲ್ಲಿ ತಮ್ಮ ಸ್ತೋತ್ರವನ್ನು ಪ್ರಕಟಿಸುವಂತೆಯೂ ಮಾಡಿದ್ದಾರೆ.

ಜನಾಂಗಗಳೂ, ರಾಜ್ಯಗಳೂ ಕೂಡಿಬಂದು

ಇವರೊಡನೆ ಯೆಹೋವ ದೇವರನ್ನು ಸೇವಿಸುತ್ತವೆ, ಎಂದು ಹೇಳಲಾಗುವುದು.

ದೇವರು ನನ್ನ ಜೀವಮಾನದ ಬಲವನ್ನು ಕುಂದಿಸಿದ್ದಾರೆ,

ನನ್ನ ದಿನಗಳನ್ನೂ ಕಡಿಮೆ ಮಾಡಿದ್ದಾರೆ.

ಆದ್ದರಿಂದ ನಾನು, “ನನ್ನ ದೇವರೇ,

ನನ್ನ ಆಯುಷ್ಯದ ಮಧ್ಯದಲ್ಲಿ ನನ್ನನ್ನು ತೆಗೆದುಕೊಳ್ಳಬೇಡಿರಿ;

ನಿಮ್ಮ ವರ್ಷಗಳು ತಲತಲಾಂತರಗಳಿಗೂ ಇವೆ.

ಆದಿಯಲ್ಲಿ ನೀವು ಭೂಮಿಗೆ ಅಸ್ತಿವಾರವನ್ನು ಹಾಕಿದ್ದೀರಿ;

ಆಕಾಶಗಳು ನಿಮ್ಮ ಕೈಕೆಲಸಗಳಾಗಿವೆ.

ಅವು ನಾಶವಾಗುವುವು; ಆದರೆ ನೀವು ಸದಾಕಾಲವೂ ಜೀವಿಸುತ್ತೀರಿ.

ಅವುಗಳೆಲ್ಲಾ ವಸ್ತ್ರದ ಹಾಗೆ ಹಳೆಯದಾಗುವುದು;

ಅಂಗಿಯ ಹಾಗೆ ಅವುಗಳನ್ನು ಬದಲಾಯಿಸುವಿರಿ;

ಅವು ತೆಗೆದುಹಾಕಲಾಗುವುದು.

ಆದರೆ ನೀವು ಏಕರೀತಿಯಾಗಿದ್ದೀರಿ.

ನಿಮ್ಮ ವರ್ಷಗಳು ಮುಗಿದುಹೋಗುವುದಿಲ್ಲ.

ನಿಮ್ಮ ಸೇವಕರ ಮಕ್ಕಳು ನಿಮ್ಮ ಸನ್ನಿಧಿಯಲ್ಲಿ ಬದುಕುವರು;

ಅವರ ಸಂತತಿಯು ನಿಮ್ಮ ಮುಂದೆ ನೆಲೆಯಾಗಿರುವುದು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.