Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಅರಣ್ಯಕಾಂಡ 31
ಇಸ್ರಾಯೇಲರು ಮಿದ್ಯಾನ್ಯರನ್ನು ಸಂಹರಿಸಿದ್ದು
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನು ಇಸ್ರಾಯೇಲರಿಂದ ಮಿದ್ಯಾನ್ಯರಿಗೆ ಮುಯ್ಯನ್ನು ತೀರಿಸಬೇಕು. ತರುವಾಯ ನೀನು ನಿನ್ನ ಪೂರ್ವಜರ ಬಳಿಗೆ ಸೇರಬೇಕು,” ಎಂದರು.
ಆಗ ಮೋಶೆಯು ಜನರ ಸಂಗಡ ಮಾತನಾಡಿ, “ನಿಮ್ಮೊಳಗಿಂದ ಜನರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳಲಿ. ಅವರು ಮಿದ್ಯಾನ್ಯರಿಗೆ ವಿರೋಧವಾಗಿ ಹೋಗಿ, ಯೆಹೋವ ದೇವರ ಪ್ರತೀಕಾರವನ್ನು ಅವರಿಗೆ ತೀರಿಸಬೇಕು. ಇಸ್ರಾಯೇಲರ ಸಮಸ್ತ ಗೋತ್ರಗಳೊಳಗೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯನ್ನು ಯುದ್ಧಕ್ಕೆ ಕಳುಹಿಸಬೇಕು,” ಎಂದನು. ಆಗ ಇಸ್ರಾಯೇಲರ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿ ಯುದ್ಧಕ್ಕೆ ಸಿದ್ಧವಾದ ಹನ್ನೆರಡು ಸಾವಿರ ಮಂದಿಯನ್ನು ಲೆಕ್ಕಿಸಿಕೊಟ್ಟರು. ಮೋಶೆ ಒಂದೊಂದು ಗೋತ್ರದಿಂದ ಸಾವಿರ ಮಂದಿಯಾಗಿರುವ ಅವರನ್ನೂ ಯಾಜಕನಾದ ಎಲಿಯಾಜರನ ಮಗ ಫೀನೆಹಾಸನನ್ನೂ ಪರಿಶುದ್ಧ ಸಲಕರಣೆಗಳ ಸಂಗಡವೂ ಸೂಚಿಸುವದಕ್ಕೋಸ್ಕರ ತುತೂರಿಗಳ ಸಂಗಡವೂ ಯುದ್ಧಕ್ಕೆ ಕಳುಹಿಸಿದನು.
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಮಿದ್ಯಾನ್ಯರ ಮೇಲೆ ಯುದ್ಧಮಾಡಿ, ಗಂಡಸರೆಲ್ಲರನ್ನು ಕೊಂದುಹಾಕಿದರು. ಈ ಹತರಾದವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದುಹಾಕಿದರು. ಅವರು ಮಿದ್ಯಾನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗ ಬಿಳಾಮನನ್ನೂ ಖಡ್ಗದಿಂದ ಕೊಂದುಹಾಕಿದರು. ಇಸ್ರಾಯೇಲರು ಮಿದ್ಯಾನ್ಯರ ಸ್ತ್ರೀಯರನ್ನೂ, ಅವರ ಮಕ್ಕಳನ್ನೂ ಸೆರೆಹಿಡಿದು, ಅವರ ಸಮಸ್ತ ಪಶುಗಳನ್ನೂ, ಅವರ ಸಮಸ್ತ ಹಿಂಡುಗಳನ್ನೂ, ಅವರ ಸಮಸ್ತ ಸಲಕರಣೆಗಳನ್ನೂ ಸುಲಿಗೆ ಮಾಡಿದರು. ಅವರು ವಾಸಮಾಡಿದ ಸಮಸ್ತ ಪಟ್ಟಣಗಳನ್ನೂ, ಅವರ ಸಮಸ್ತ ಕೋಟೆಗಳನ್ನೂ ಬೆಂಕಿಯಿಂದ ಸುಟ್ಟರು. ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಸಮಸ್ತ ಸುಲಿಗೆಯನ್ನೂ, ಸಮಸ್ತ ಲೂಟಿಯನ್ನೂ ತೆಗೆದುಕೊಂಡರು. ಅವರು ಸೆರೆಯವರನ್ನೂ, ಲೂಟಿಯನ್ನೂ, ಸುಲಿಗೆಯನ್ನೂ ಮೋಶೆ, ಯಾಜಕನಾದ ಎಲಿಯಾಜರನು, ಇಸ್ರಾಯೇಲರ ಸಭೆ ಇವರ ಬಳಿಗೆ ಯೆರಿಕೋ ಪಟ್ಟಣಕ್ಕೆ ಎದುರಾಗಿ ಯೊರ್ದನ್ ನದಿಯ ಮೇಲೆ ಇರುವ ಮೋವಾಬಿನ ಬಯಲುಗಳಲ್ಲಿ ಇದ್ದ ಪಾಳೆಯದೊಳಗೆ ತಂದರು.
ಮೋಶೆಯೂ, ಯಾಜಕನಾದ ಎಲಿಯಾಜರನೂ, ಸಮೂಹದ ಪ್ರಧಾನರೆಲ್ಲರೂ ಅವರಿಗೆ ಎದುರಾಗಿ ಪಾಳೆಯದ ಹೊರಗೆ ಹೋದರು. ಆದರೆ ಮೋಶೆಯು ಯುದ್ಧದಿಂದ ಬಂದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಆಗಿರುವ ಪಾಳೆಯದ ಮೇಲೆ ಕೋಪಮಾಡಿಕೊಂಡರು.
ಮೋಶೆಯು ಅವರಿಗೆ, “ಹೆಂಗಸರನ್ನೆಲ್ಲಾ ಉಳಿಸಿದರೋ? ಇವರೇ ಬಿಳಾಮನ ಮಾತಿನಿಂದ ಪೆಯೋರನ ಕಾರ್ಯದಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹ ಮಾಡುವುದಕ್ಕೆ ಇಸ್ರಾಯೇಲರಿಗೆ ಕಾರಣವಾಗಿದ್ದರು. ಯೆಹೋವ ದೇವರ ಸಭೆಯೊಳಗೆ ಇವರಿಂದಲೇ ವ್ಯಾಧಿಯಾಯಿತು. ಆದಕಾರಣ ಈಗ ಬಾಲಕರನ್ನೂ, ಎಲ್ಲಾ ಪುರುಷನನ್ನು ಅರಿತಿರುವ ಎಲ್ಲಾ ಸ್ತ್ರೀಯರನ್ನು ಕೊಂದುಹಾಕಿರಿ. ಆದರೆ ಪುರುಷನನ್ನು ಅರಿಯದ ಎಲ್ಲಾ ಹೆಣ್ಣು ಮಕ್ಕಳನ್ನು ನಿಮಗಾಗಿ ಉಳಿಸಿಕೊಳ್ಳಿರಿ.
“ಇದಲ್ಲದೆ ನಿಮ್ಮಲ್ಲಿ ಪ್ರಾಣ ತೆಗೆದವರು ಮತ್ತು ಶವವನ್ನು ಮುಟ್ಟಿದವರು ಏಳು ದಿವಸ ಪಾಳೆಯದ ಹೊರಗೆ ಇರಬೇಕು. ನೀವೂ, ನಿಮ್ಮ ಸೆರೆಯವರೂ ಮೂರನೆಯ ಹಾಗೂ ಏಳನೆಯ ದಿವಸಗಳಲ್ಲಿ ನಿಮ್ಮನ್ನು ಶುದ್ಧ ಮಾಡಿಕೊಳ್ಳಬೇಕು. ಎಲ್ಲಾ ಬಟ್ಟೆಗಳನ್ನೂ, ಎಲ್ಲಾ ಚರ್ಮದ ಸಲಕರಣೆಗಳನ್ನೂ, ಮೇಕೆ ಕೂದಲಿಂದ ಮಾಡಿದ್ದೆಲ್ಲವನ್ನೂ, ಕಟ್ಟಿಗೆ ಸಲಕರಣೆಗಳೆಲ್ಲವನ್ನೂ ಶುದ್ಧಮಾಡಬೇಕು,” ಎಂದು ಹೇಳಿದನು.
ಯಾಜಕನಾದ ಎಲಿಯಾಜರನು ಯುದ್ಧಕ್ಕೆ ಹೋದ ಪಾಳೆಯದ ಜನರಿಗೆ, “ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ನ್ಯಾಯದ ಕಟ್ಟಳೆಯು ಇದೇ: ಬೆಂಕಿ ತಾಳುವ ಬಂಗಾರ, ಬೆಳ್ಳಿ, ಕಂಚು, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ನೀವು ಬೆಂಕಿಯಿಂದ ದಾಟಿಸಬೇಕು. ಆಗ ಅವು ಶುದ್ಧವಾಗುವುವು. ಶುದ್ಧೀಕರಣದ ನೀರಿನಲ್ಲಿ ಅದ್ದಿ ಶುದ್ಧಮಾಡಬೇಕು. ಆಗ ಅವು ಶುದ್ಧವಾಗುವುವು. ಆದರೆ ಬೆಂಕಿ ತಾಳದ ಸಮಸ್ತವನ್ನು ನೀವು ನೀರಿನಿಂದ ತೊಳೆಯಬೇಕು. ಏಳನೆಯ ದಿವಸದಲ್ಲಿ ನೀವು ನಿಮ್ಮ ಬಟ್ಟೆಗಳನ್ನು ಒಗೆದುಕೊಂಡು ಶುದ್ಧರಾಗಬೇಕು. ತರುವಾಯ ಪಾಳೆಯದೊಳಗೆ ಬರಬೇಕು,” ಎಂದು ಹೇಳಿದನು.
ಸುಲಿಗೆಯನ್ನು ಪಾಲು ಮಾಡಿಕೊಂಡದ್ದು
ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ, “ನೀನೂ, ಯಾಜಕನಾದ ಎಲಿಯಾಜರನೂ, ಕುಲಾಧಿಪತಿಗಳೂ ಸೈನಿಕರ ಕೈಗೆ ಸಿಕ್ಕಿರುವ ಮನುಷ್ಯರನ್ನೂ ಪಶುಗಳನ್ನೂ ಲೆಕ್ಕಮಾಡಿ ಒಟ್ಟು ಎಷ್ಟೆಂದು ತಿಳಿದುಕೊಳ್ಳಿರಿ. ಆ ಸುಲಿಗೆಯನ್ನು ಯುದ್ಧಕ್ಕೆ ಹೊರಟ ಯುದ್ಧಭಟರಿಗೂ, ಸಮಸ್ತ ಸಭೆಗೂ ಎರಡು ಪಾಲನ್ನು ಮಾಡಬೇಕು. ಜನರಿಂದಲೂ, ಪಶುಗಳಿಂದಲೂ, ಕತ್ತೆಗಳಿಂದಲೂ, ಕುರಿಗಳಿಂದಲೂ ಐನೂರರಲ್ಲಿ ಒಂದು ಪ್ರಾಣವನ್ನು ಯುದ್ಧಕ್ಕೆ ಹೊರಟ ಯುದ್ಧಭಟರ ಕಡೆಯಿಂದ ಯೆಹೋವ ದೇವರಿಗೆ ಕಪ್ಪವಾಗಿ ಎತ್ತಬೇಕು. ಅವರ ಅರ್ಧ ಪಾಲಿನಿಂದ ಅದನ್ನು ತೆಗೆದುಕೊಂಡು, ಯೆಹೋವ ದೇವರಿಗೆ ಅರ್ಪಣೆಯಾಗಿ, ಯಾಜಕನಾದ ಎಲಿಯಾಜರನಿಗೆ ಕೊಡಬೇಕು. ಇಸ್ರಾಯೇಲರ ಅರ್ಧ ಪಾಲಿನಿಂದ ಜನರಿಂದಲೂ, ಕತ್ತೆಗಳಿಂದಲೂ, ಮಂದೆಗಳಿಂದಲೂ, ಸಮಸ್ತ ಪಶುಗಳಿಂದಲೂ ಐವತ್ತರಲ್ಲಿ ಒಂದು ಪಾಲು ತೆಗೆದುಕೊಂಡು, ಅವುಗಳನ್ನು ಯೆಹೋವ ದೇವರ ಗುಡಾರವನ್ನು ನಿರ್ವಹಿಸುವ ಲೇವಿಯರಿಗೆ ಕೊಡಬೇಕು,” ಎಂದರು. ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮಾಡಿದರು.
ಯುದ್ಧಭಟರು ತೆಗೆದುಕೊಂಡು ಬಂದ ಲೂಟಿಯಲ್ಲಿ ಉಳಿದ ಸುಲಿಗೆ ಎಷ್ಟೆಂದರೆ 6,75,000 ಕುರಿಗಳು. 72,000 ಪಶುಗಳು; ಕತ್ತೆಗಳು 61,000; ಪುರುಷರನ್ನು ಅರಿಯದ ಸ್ತ್ರೀಯರು 32,000 ಮಂದಿ.
ಯುದ್ಧಕ್ಕೆ ಹೊರಟವರ ಅರ್ಧ ಭಾಗದ ಲೆಕ್ಕವಿದು:
3,37,500 ಕುರಿಗಳಿಂದ ಯೆಹೋವ ದೇವರಿಗೆ ಕೊಡಲಾದ ಕಪ್ಪವು 675;
ಹಾಗೆಯೇ ಅವರಿಗೆ ದೊರಕಿದ 36,000 ದನಕರುಗಳಲ್ಲಿ ಯೆಹೋವ ದೇವರಿಗೆ ಉಂಟಾದ ಕಪ್ಪವು 72 ದನಕರುಗಳು;
30,500 ಕತ್ತೆಗಳು; ಅವುಗಳಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 61;
16,000 ಜನರು, ಅವರಿಂದ ಯೆಹೋವ ದೇವರಿಗೆ ಉಂಟಾದ ಕಪ್ಪವು 32 ಜನ.
ಮೋಶೆಯು ಯೆಹೋವ ದೇವರಿಗೆ ಪಡೆಯುವ ಕಪ್ಪವನ್ನು ಯಾಜಕನಾದ ಎಲಿಯಾಜರನಿಗೆ ಯೆಹೋವ ದೇವರು ಆಜ್ಞಾಪಿಸಿದ ಪ್ರಕಾರ ಕೊಟ್ಟನು.
ಮೋಶೆಯು ಯುದ್ಧಕ್ಕೆ ಹೋದ ಜನರಿಂದ ತೆಗೆದುಕೊಂಡು ಇಸ್ರಾಯೇಲರಿಗೆ ಹಂಚಿದ ಅರ್ಧ ಭಾಗದ ವಿವರ: ಕುರಿಗಳಿಂದ ಸಭೆಯ ಅರ್ಧ 3, 37,500 ಕುರಿಗಳು; 36,000 ಪಶುಗಳು; 30,500 ಕತ್ತೆಗಳು; 16,000 ಜನರು; ಮೋಶೆಯು ಇಸ್ರಾಯೇಲರ ಅರ್ಧದಿಂದ ಮನುಷ್ಯರಲ್ಲಿಯೂ ಪಶುಗಳಲ್ಲಿಯೂ ಐವತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರ ಯೆಹೋವ ದೇವರ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು.
ಆಗ ಸೈನ್ಯದ ಅಧಿಕಾರಿಗಳಾದ ಸಹಸ್ರಾಧಿಪತಿಗಳೂ ಶತಾಧಿಪತಿಗಳೂ ಮೋಶೆಯ ಬಳಿಗೆ ಬಂದು, ಮೋಶೆಗೆ ಅವರು, “ನಿನ್ನ ಸೇವಕರಾದ ನಾವು ನಮ್ಮ ಕೈಯಲ್ಲಿದ್ದ ಯುದ್ಧಭಟರ ಲೆಕ್ಕವನ್ನು ತೆಗೆದುಕೊಂಡೆವು. ಅವರೊಳಗೆ ಒಬ್ಬನಾದರೂ ಕಡಿಮೆಯಾಗಲಿಲ್ಲ. ಆದ್ದರಿಂದ ಯೆಹೋವ ದೇವರ ಸಮ್ಮುಖದಲ್ಲಿ ನಮ್ಮ ಪ್ರಾಣಗಳಿಗೋಸ್ಕರ ಪ್ರಾಯಶ್ಚಿತ್ತಕ್ಕಾಗಿ ನಾವು ಒಬ್ಬೊಬ್ಬನಿಗೆ ಸಿಕ್ಕಿದಂಥ ಬಂಗಾರದ ವಸ್ತುಗಳಾದ ಸರಪಣಿಗಳನ್ನೂ, ಕಡಗಗಳನ್ನೂ, ಉಂಗುರಗಳನ್ನೂ, ವಾಲೆಗಳನ್ನೂ, ಪದಕಗಳನ್ನೂ ಯೆಹೋವ ದೇವರಿಗೆ ಕಾಣಿಕೆಯಾಗಿ ತಂದಿದ್ದೇವೆ,” ಎಂದು ಹೇಳಿದರು.
ಮೋಶೆಯೂ, ಯಾಜಕನಾದ ಎಲಿಯಾಜರನೂ ವಿಚಿತ್ರ ಕೆಲಸವಾಗಿರುವ ಬಂಗಾರವನ್ನೆಲ್ಲಾ ಅದರಿಂದ ತೆಗೆದುಕೊಂಡರು. ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವ ದೇವರಿಗೆ ಅರ್ಪಿಸಿದ ಕಾಣಿಕೆಯ ಒಟ್ಟು ತೂಕ 16,750 ಶೆಕೆಲ್ಗಳು1. ಯುದ್ಧದ ಜನರು ಒಬ್ಬೊಬ್ಬನು ಸ್ವಂತವಾಗಿ ಸುಲಿದುಕೊಂಡಿದ್ದನು. ಆಗ ಮೋಶೆಯೂ, ಯಾಜಕನಾದ ಎಲಿಯಾಜರನೂ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಕೈಯಿಂದ ಬಂಗಾರವನ್ನು ತೆಗೆದುಕೊಂಡು, ಯೆಹೋವ ದೇವರ ಸಮ್ಮುಖದಲ್ಲಿ ಇಸ್ರಾಯೇಲರಿಗೆ ಜ್ಞಾಪಕಕ್ಕಾಗಿ ದೇವದರ್ಶನ ಗುಡಾರದೊಳಗೆ ತಂದರು.
Source notes (1)
- Footnote ಸುಮಾರು 190 ಕಿಲೋಗ್ರಾಂ
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.