Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಅರಣ್ಯಕಾಂಡ 1

ಮೊದಲನೆ ಜನಗಣತಿ

ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು: “ಇಸ್ರಾಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು. ಇಸ್ರಾಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು ಅಂದರೆ, ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚಾದ ವಯಸ್ಸುಳ್ಳ ಎಲ್ಲರನ್ನು ಸೈನ್ಯಸೈನ್ಯವಾಗಿ ನೀನು ಮತ್ತು ಆರೋನನು ಪಟ್ಟಿಮಾಡಬೇಕು. ಪ್ರತಿಯೊಂದು ಗೋತ್ರದ ಒಬ್ಬೊಬ್ಬ ಮುಖ್ಯಸ್ಥನು ನಿಮಗೆ ಸಹಾಯಕನಾಗಿರಲಿ.

“ನಿಮಗೆ ಸಹಾಯ ಮಾಡಬೇಕಾದ ಪುರುಷರ ಹೆಸರುಗಳು:

“ರೂಬೇನ್ ಗೋತ್ರದಿಂದ ಶೆದೇಯೂರನ ಮಗ ಎಲೀಚೂರ್,

ಸಿಮೆಯೋನ್ ಗೋತ್ರದಿಂದ ಚುರೀಷದ್ದೈಯನ ಮಗ ಶೆಲುಮೀಯೇಲ್,

ಯೆಹೂದ ಗೋತ್ರದಿಂದ ಅಮ್ಮೀನಾದಾಬನ ಮಗ ನಹಶೋನ್,

ಇಸ್ಸಾಕರ್ ಗೋತ್ರದಿಂದ ಚೂವಾರನ ಮಗ ನೆತನೆಯೇಲ್,

ಜೆಬುಲೂನ್ ಗೋತ್ರದಿಂದ ಹೇಲೋನನ ಮಗ ಎಲೀಯಾಬ್,

ಯೋಸೇಫನ ಗೋತ್ರದಲ್ಲಿ,

ಎಫ್ರಾಯೀಮ್‌ನಿಂದ ಅಮ್ಮೀಹೂದನ ಮಗ ಎಲೀಷಾಮಾ,

ಮನಸ್ಸೆ ಗೋತ್ರದಿಂದ ಪೆದಾಚೂರನ ಮಗನಾದ ಗಮಲಿಯೇಲ್,

ಬೆನ್ಯಾಮೀನ್ ಗೋತ್ರದಿಂದ ಗಿದ್ಯೋನಿನ ಮಗನಾದ ಅಬೀದಾನ,

ದಾನ್ ಗೋತ್ರದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್,

ಆಶೇರ್ ಗೋತ್ರದಿಂದ ಒಕ್ರಾನನ ಮಗ ಪಗೀಯೇಲ್,

ಗಾದ್ ಗೋತ್ರದಿಂದ ದೆವುಯೇಲನ ಮಗ ಎಲ್ಯಾಸಾಫ್,

ನಫ್ತಾಲಿ ಗೋತ್ರದಿಂದ ಏನಾನನ ಮಗ ಅಹೀರನು.”

ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.

ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆ ಮತ್ತು ಆರೋನನು ತಮ್ಮ ಜೊತೆ ತೆಗೆದುಕೊಂಡರು. ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಜನರು ತಮ್ಮ ಗೋತ್ರ ಮತ್ತು ಕುಟುಂಬಗಳ ಅನುಸಾರವಾಗಿ ತಮ್ಮ ವಂಶಾವಳಿಯನ್ನು ನೊಂದಾಯಿಸಿದರು. ಹಾಗೂ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಾದ ವಯಸ್ಸಿನವರ ಹೆಸರುಗಳನ್ನು ಒಬ್ಬೊಬ್ಬರಾಗಿ ಪಟ್ಟಿಮಾಡಲಾಯಿತು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.

ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ರೂಬೇನನ ಗೋತ್ರದಲ್ಲಿ ಎಣಿಕೆಯಾದವರು 46,500 ಜನರು.

ಸಿಮೆಯೋನನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದವರು 59,300 ಜನರು.

ಗಾದನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಗಾದನ ಗೋತ್ರದಲ್ಲಿ ಎಣಿಕೆಯಾದವರು 45,650 ಜನರು.

ಯೆಹೂದ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಯೆಹೂದ ಗೋತ್ರದಲ್ಲಿ ಎಣಿಕೆಯಾದವರು 74,600 ಜನರು.

ಇಸ್ಸಾಕಾರನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಇಸ್ಸಾಕಾರನ ಗೋತ್ರದಲ್ಲಿ ಎಣಿಕೆಯಾದವರು 54,400 ಜನರು.

ಜೆಬುಲೂನನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಜೆಬುಲೂನ್ ಗೋತ್ರದಲ್ಲಿ ಎಣಿಕೆಯಾದವರು 57,400 ಜನರು.

ಯೋಸೇಫನ ಮಕ್ಕಳಾದ

ಎಫ್ರಾಯೀಮನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಎಫ್ರಾಯೀಮನ ಗೋತ್ರದಲ್ಲಿ ಎಣಿಕೆಯಾದವರು 40,500 ಜನರು.

ಮನಸ್ಸೆಯ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಮನಸ್ಸೆಯ ಗೋತ್ರದಲ್ಲಿ ಎಣಿಕೆಯಾದವರು 32,200 ಜನರು.

ಬೆನ್ಯಾಮೀನ್ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.

ದಾನನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ದಾನನ ಗೋತ್ರದಲ್ಲಿ ಎಣಿಕೆಯಾದವರು 62,700 ಜನರು.

ಆಶೇರನ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ಆಶೇರನ ಗೋತ್ರದಲ್ಲಿ ಎಣಿಕೆಯಾದವರು 41,500 ಜನರು.

ನಫ್ತಾಲಿಯ ಸಂತತಿಯವರಲ್ಲಿ:

ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು. ನಫ್ತಾಲಿಯ ಗೋತ್ರದಲ್ಲಿ ಎಣಿಕೆಯಾದವರು 53,400 ಜನರು.

ಮೋಶೆ, ಆರೋನ್ ಮತ್ತು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರು. ಹೀಗೆ ಇಸ್ರಾಯೇಲರಲ್ಲಿ ಎಣಿಕೆಯಾದವರೆಲ್ಲರೂ ಅವರ ಕುಟುಂಬಗಳ ಪ್ರಕಾರ ಇಪ್ಪತ್ತು ವರ್ಷದವರೂ, ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳವರೂ, ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಶಕ್ತರಾದವರೂ ಆಗಿದ್ದರು. ಎಣಿಕೆಯಾದವರು ಒಟ್ಟು 6,03,550 ಮಂದಿಯಾಗಿದ್ದರು.

ಲೇವಿಯರ ತಂದೆಗಳ ಗೋತ್ರವನ್ನು ಇತರರೊಂದಿಗೆ ಎಣಿಸಲಿಲ್ಲ. ಇದಲ್ಲದೆ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ: “ನೀವು ಲೇವಿಯ ಕುಲವನ್ನು ಎಣಿಸಬಾರದು ಅಥವಾ ಇತರ ಇಸ್ರಾಯೇಲರ ಜನಗಣತಿಯಲ್ಲಿ ಅವರನ್ನು ಸೇರಿಸಬಾರದು. ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು. ದೇವದರ್ಶನ ಗುಡಾರವು ಹೊರಡುವಾಗ ಲೇವಿಯರು ಅದನ್ನು ತೆಗೆಯಲಿ. ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ. ಬೇರೆ ಯಾವನಾದರೂ ಸಮೀಪಿಸಿದರೆ ಅವನು ಸಾಯಬೇಕು. ಇಸ್ರಾಯೇಲರು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಧ್ವಜದ ಬಳಿ ಇಳಿದುಕೊಳ್ಳಬೇಕು. ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”

ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.