Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಮೀಕ 3
ನಾಯಕರನ್ನು ಪ್ರವಾದಿಗಳನ್ನು ಗದರಿಸಿದ್ದು
ಆಗ ನಾನು,
“ಯಾಕೋಬಿನ ಮುಖ್ಯಸ್ಥರೇ,
ಇಸ್ರಾಯೇಲಿನ ಮನೆತನದ ಪ್ರಧಾನರೇ,
ಈಗ ಕೇಳಿರಿ. ನೀವು ನ್ಯಾಯವನ್ನು ಪ್ರೀತಿಸಬಾರದೇ.
ಒಳ್ಳೆಯದನ್ನು ದ್ವೇಷಮಾಡಿ ಕೆಟ್ಟದ್ದನ್ನು ಪ್ರೀತಿ ಮಾಡುವವರೇ,
ಅವರ ಮೇಲಿನಿಂದ ಅವರ ಚರ್ಮವನ್ನೂ ನನ್ನ ಜನರ
ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತು ಕೊಳ್ಳುವವರೇ,
ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ.
ಅವರ ಚರ್ಮವನ್ನು ಸುಲಿದುಹಾಕುತ್ತಾರೆ.
ಅವರ ಎಲುಬುಗಳನ್ನು ಮುರಿದುಹಾಕುತ್ತೀರಿ.
ಹಂಡೆಯಲ್ಲಿನ ತುಂಡುಗಳಂತೆ, ಮಡಕೆಯಲ್ಲಿನ ಮಾಂಸದ ಚೂರುಗಳಂತೆ
ನನ್ನ ಪ್ರಜೆಯನ್ನು ಚೂರುಚೂರಾಗಿ ಕತ್ತರಿಸಿಹಾಕಿದ್ದೀರಿ.”
ಆಗ ಅವರು ಯೆಹೋವ ದೇವರಿಗೆ ಮೊರೆಯಿಡುವರು;
ಆದರೆ ಅವರು ಅವರಿಗೆ ಉತ್ತರ ಕೊಡುವುದಿಲ್ಲ.
ಅವರು ಕೆಟ್ಟ ಕ್ರಿಯೆಗಳನ್ನು ಮಾಡಿದ ಪ್ರಕಾರವೇ,
ಆ ಕಾಲದಲ್ಲಿ ಅವರಿಗೆ ತಮ್ಮ ಮುಖವನ್ನು ಮರೆಮಾಡುವರು.
ಯೆಹೋವ ದೇವರು ಹೇಳುವುದೇನೆಂದರೆ,
“ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವ ಪ್ರವಾದಿಗಳಿಗೆ
ತಿನ್ನಲು ಕೊಟ್ಟರೆ ‘ಸಮಾಧಾನವಾಗಲಿ’ ಎನ್ನುವರು.
ಆದರೆ ಅವರಿಗೆ ತಿನ್ನಲು ಏನೂ ಕೊಡದವನ
ವಿರೋಧವಾಗಿ ಯುದ್ಧಕ್ಕೂ ಅವರು ಸಿದ್ಧರಾಗುವರು.
ದರ್ಶನವಿಲ್ಲದೆ, ನಿಮಗೆ ರಾತ್ರಿಯಾಗುವುದು;
ಶಕುನವಿಲ್ಲದೆ ನಿಮಗೆ ಕತ್ತಲಾಗುವುದು.
ಪ್ರವಾದಿಗಳಿಗೆ ಸೂರ್ಯ ಮುಳುಗುವುದು.
ಅವರ ಮೇಲೆ ಹಗಲು ಕತ್ತಲೆಯಾಗುವುದು.
ಆಗ ದರ್ಶಿಗಳು ನಾಚಿಕೆಪಡುವರು,
ಶಕುನಗಾರರು ಅವಮಾನಗೊಳ್ಳುವರು.
ದೇವರಿಂದ ಉತ್ತರವಿಲ್ಲದ ಕಾರಣ,
ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿಕೊಳ್ಳುವರು.”
ಆದರೆ ನಿಶ್ಚಯವಾಗಿ ನಾನು ಯಾಕೋಬಿನ ಅವನ ಅಪರಾಧವನ್ನೂ
ಇಸ್ರಾಯೇಲಿಗೆ ಅವನ ಪಾಪವನ್ನೂ ತಿಳಿಸುವುದಕ್ಕೆ
ಯೆಹೋವ ದೇವರ ಆತ್ಮದ ಮುಖಾಂತರ ಶಕ್ತಿಯಿಂದಲೂ
ನ್ಯಾಯದಿಂದಲೂ ತ್ರಾಣದಿಂದಲೂ ತುಂಬಿದ್ದೇನೆ.
ಯಾಕೋಬನ ಮನೆತನದವರ ಪ್ರಧಾನರೇ,
ಇಸ್ರಾಯೇಲಿನ ಮನೆತನದವರ
ನ್ಯಾಯಾಧಿಪತಿಗಳೇ, ನ್ಯಾಯವನ್ನು ನಿಂದಿಸಿ
ಸರಿಯಾದದ್ದನ್ನೆಲ್ಲಾ ಡೊಂಕುಮಾಡುವವರೇ,
ಚೀಯೋನನ್ನು ರಕ್ತದಿಂದಲೂ
ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ.
ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ.
ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ.
ಅದರ ಪ್ರವಾದಿಗಳು ಹಣಕ್ಕೆ ಶಕುನ ಹೇಳುತ್ತಾರೆ.
ಆದರೂ ಯೆಹೋವ ದೇವರ ಮೇಲೆ ಆತುಕೊಂಡು,
“ಯೆಹೋವ ದೇವರು ನಮ್ಮ ಮಧ್ಯದಲ್ಲಿ ಇಲ್ಲವೋ?
ನಮ್ಮ ಮೇಲೆ ಕೇಡು ಬರುವುದಿಲ್ಲ,” ಎನ್ನುತ್ತಾರೆ.
ಆದಕಾರಣ ನಿಮ್ಮ ನಿಮಿತ್ತವೇ,
ಚೀಯೋನನ್ನು ಹೊಲದ ಹಾಗೆ ಉಳಲಾಗುವುದು.
ಯೆರೂಸಲೇಮು ಹಾಳುದಿಬ್ಬಗಳಾಗುವುದು.
ಆಲಯದ ಬೆಟ್ಟವೂ ಕಾಡುಗುಡ್ಡಗಳಂತಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.