Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯಾಜಕಕಾಂಡ 9

ಆರೋನನು ಮಾಡಿದ ಪ್ರಥಮ ಯಜ್ಞ

ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಮತ್ತು ಇಸ್ರಾಯೇಲಿನ ಹಿರಿಯರನ್ನೂ ಕರೆದನು. ಅವನು ಆರೋನನಿಗೆ, “ನೀನು ಪಾಪ ಪರಿಹಾರದ ಬಲಿಗಾಗಿ ಒಂದು ಎಳೆಯ ಕರುವನ್ನೂ ಮತ್ತು ದಹನಬಲಿಗಾಗಿ ಕಳಂಕರಹಿತ ಟಗರನ್ನೂ ತೆಗೆದುಕೊಂಡು ಅವುಗಳನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಸಮರ್ಪಿಸು. ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ: ‘ಪಾಪ ಪರಿಹಾರದ ಬಲಿಗಾಗಿ ಹೋತವನ್ನೂ ದಹನಬಲಿಗಾಗಿ ಕಳಂಕರಹಿತ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿಯನ್ನೂ ತೆಗೆದುಕೊಳ್ಳಬೇಕು. ಯೆಹೋವ ದೇವರ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಾಗಿ ಒಂದು ಹೋರಿಯನ್ನು ಮತ್ತು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆಹಾರದ ಬಲಿ ಎಣ್ಣೆಯೊಂದಿಗೆ ಬೆರೆತಿರಬೇಕು. ಏಕೆಂದರೆ ಈ ದಿನವೇ ಯೆಹೋವ ದೇವರು ನಿಮಗೆ ಕಾಣಿಸಿಕೊಳ್ಳುವರು,’ ” ಎಂದನು.

ಅವರು ಮೋಶೆಯು ಆಜ್ಞಾಪಿಸಿದವುಗಳನ್ನು ದೇವದರ್ಶನದ ಗುಡಾರದ ಮುಂದೆ ತಂದರು. ಸಮೂಹವೆಲ್ಲವೂ ಹತ್ತಿರ ಬಂದು ಯೆಹೋವ ದೇವರ ಮುಂದೆ ನಿಂತಿತು. ಮೋಶೆ ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ ಸಂಗತಿಯು ಇದೇ. ಇದನ್ನು ನೀವು ಮಾಡಿರಿ. ಯೆಹೋವ ದೇವರ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವುದು,” ಎಂದನು.

ಮೋಶೆಯು ಆರೋನನಿಗೆ, “ಬಲಿಪೀಠದ ಕಡೆಗೆ ಹೋಗಿ, ಯೆಹೋವ ದೇವರು ಆಜ್ಞಾಪಿಸಿದಂತೆಯೇ ನಿನ್ನ ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಅರ್ಪಿಸು. ನಿನಗಾಗಿ ಪ್ರಾಯಶ್ಚಿತ್ತವನ್ನು ಮಾಡು, ಜನರ ಸಮರ್ಪಣೆಗಳನ್ನು ಸಮರ್ಪಿಸಿ, ಅವರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು,” ಎಂದನು.

ಆದ್ದರಿಂದ ಆರೋನನು ಬಲಿಪೀಠದ ಕಡೆಗೆ ಹೋಗಿ, ತನಗಾಗಿ ಪಾಪ ಪರಿಹಾರದ ಬಲಿಯಾದ ಕರುವನ್ನು ವಧಿಸಿದನು. ಆಗ ಆರೋನನ ಪುತ್ರರು ಅವನ ಬಳಿಗೆ ರಕ್ತವನ್ನು ತಂದರು. ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ, ಬಲಿಪೀಠದ ಕೊಂಬುಗಳಿಗೆ ಹಚ್ಚಿ, ಬಲಿಪೀಠದ ಅಡಿಯಲ್ಲಿ ಉಳಿದ ರಕ್ತವನ್ನು ಹೊಯ್ದನು. ಅದರ ಪಾಪ ಪರಿಹಾರದ ಬಲಿಯ ಕೊಬ್ಬು, ಮೂತ್ರಪಿಂಡಗಳು ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬು, ಇವುಗಳನ್ನು ಅವನು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ, ಬಲಿಪೀಠದ ಮೇಲೆ ಸುಟ್ಟನು. ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.

ಅವನು ದಹನಬಲಿಯನ್ನು ವಧಿಸಿದಾಗ, ಆರೋನನ ಪುತ್ರರು ಅವನಿಗೆ ರಕ್ತವನ್ನು ತಂದು ಕೊಟ್ಟರು. ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು. ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದು ಕೊಡಲು, ಅವನು ಅವುಗಳನ್ನು ಬಲಿಪೀಠದ ಮೇಲೆ ಸುಟ್ಟನು. ಅವನು ಕರುಳುಗಳನ್ನು ಮತ್ತು ಕಾಲುಗಳನ್ನು ತೊಳೆದು, ಅವುಗಳನ್ನು ದಹನಬಲಿಯ ಜೊತೆ ಮೇಲಿನ ಬಲಿಪೀಠದ ಮೇಲೆ ಸುಟ್ಟನು.

ಅದಾದ ಮೇಲೆ ಆರೋನನು ಜನರಿಗಾಗಿ ಅರ್ಪಿಸಿದ ಬಲಿಯನ್ನು ತಂದು, ಹೋತವನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಪರಿಹಾರದ ಬಲಿಯಾಗಿರುವುದನ್ನು ವಧಿಸಿ, ಮೊದಲನೆಯದರ ಹಾಗೆ ಅದನ್ನು ಸಮರ್ಪಿಸಿದನು.

ಅವನು ದಹನಬಲಿಯನ್ನು ತಂದು, ಅದನ್ನು ವಿಧಿಬದ್ಧವಾಗಿ ಸಮರ್ಪಿಸಿದನು. ಅವನು ಧಾನ್ಯ ಸಮರ್ಪಣೆಯ ಬಲಿಯನ್ನು ತಂದು, ಅದರಲ್ಲಿ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಬೆಳಗಿನ ದಹನಬಲಿ ಯಜ್ಞದ ಬಳಿಯಲ್ಲಿ ಅದನ್ನು ಹೋಮ ಮಾಡಿದನು.

ಅವನು ಜನರಿಗಾಗಿದ್ದ ಹೋರಿ ಮತ್ತು ಟಗರನ್ನು ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು. ಆರೋನನ ಪುತ್ರರು ರಕ್ತವನ್ನು ಅವನ ಬಳಿಗೆ ತರಲು, ಅದನ್ನು ಅವನು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಿದನು. ಹೋರಿಯ ಮತ್ತು ಟಗರಿನ ಕೊಬ್ಬನ್ನೂ ಹಿಂಭಾಗದ ಕೊಬ್ಬನ್ನೂ ಮತ್ತು ಕರುಳುಗಳ ಸುತ್ತಲಿನ ಕೊಬ್ಬನ್ನೂ ಮೂತ್ರಪಿಂಡಗಳ ಮತ್ತು ಕಾಳಿಜದ ಹತ್ತಿರವಿರುವ ಕೊಬ್ಬನ್ನೂ ಕೊಬ್ಬನ್ನು ಎದೆಯ ಭಾಗಗಳ ಮೇಲೆ ಇಡಲು, ಆರೋನನು ಆ ಕೊಬ್ಬನ್ನು ಬಲಿಪೀಠದ ಮೇಲೆ ಸುಟ್ಟನು. ಎದೆಯ ಭಾಗಗಳನ್ನು, ಬಲತೊಡೆಗಳನ್ನು ಆರೋನನು, ಮೋಶೆ ಆಜ್ಞಾಪಿಸಿದಂತೆ ಯೆಹೋವ ದೇವರ ಸನ್ನಿಧಿಯಲ್ಲಿ ನೈವೇದ್ಯವಾಗಿ ನಿವಾಳಿಸಿದನು.

ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸಿದನು. ಪಾಪ ಪರಿಹಾರದ ಬಲಿಯನ್ನೂ ದಹನಬಲಿಯನ್ನೂ ಮತ್ತು ಸಮಾಧಾನದ ಬಲಿಯನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.

ಮೋಶೆಯೂ ಆರೋನನೂ ದೇವದರ್ಶನದ ಗುಡಾರದ ಒಳಗೆ ಹೋಗಿ, ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವ ದೇವರ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು. ಆಗ ಅಲ್ಲಿ ಬೆಂಕಿಯು ಯೆಹೋವ ದೇವರ ಸನ್ನಿಧಿಯಿಂದ ಬಂದು, ಬಲಿಪೀಠದ ಮೇಲಿದ್ದ ದಹನಬಲಿಯನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಇದನ್ನು ಜನರೆಲ್ಲರೂ ಕಂಡಾಗ, ಅವರು ಆನಂದದಿಂದ ಜಯಘೋಷ ಮಾಡಿ ಅಡ್ಡಬಿದ್ದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.