Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಯೆಹೋಶುವ 20
ಆಶ್ರಯ ಪಟ್ಟಣಗಳು
ಯೆಹೋವ ದೇವರು ಯೆಹೋಶುವನಿಗೆ, “ನಾನು ಮೋಶೆಯ ಮುಖಾಂತರ ನಿನಗೆ ಹೇಳಿದ ಆಶ್ರಯದ ಪಟ್ಟಣಗಳನ್ನು ಗೊತ್ತುಮಾಡಿಕೊಳ್ಳುವಂತೆ ನೀನು ಇಸ್ರಾಯೇಲರಿಗೆ ಹೇಳು. ಯಾವನಾದರು ಅರಿಯದೆ ಅಕಸ್ಮಾತ್ತಾಗಿ ಕೈತಪ್ಪಿ ಕೊಂದುಹಾಕಿದರೆ, ಅಂಥವನು ಅಲ್ಲಿಗೆ ಓಡಿಹೋಗಲಿ. ಅವನಿಗೆ ರಕ್ತದ ಸೇಡು ತೀರಿಸುವವನಿಂದ ತಪ್ಪಿಸಿಕೊಳ್ಳುವ ಆಶ್ರಯವಾಗಿರಲಿ. ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿ ಬಂದವನು, ಪಟ್ಟಣದ ಬಾಗಿಲ ದ್ವಾರದಲ್ಲಿ ನಿಂತುಕೊಂಡು, ಆ ಪಟ್ಟಣದ ಹಿರಿಯರ ಮುಂದೆ ತನ್ನ ವ್ಯಾಜ್ಯವನ್ನು ತಿಳಿಸಬೇಕು. ಅವರು ಅವನನ್ನು ಪಟ್ಟಣದೊಳಗೆ ಸೇರಿಸಿಕೊಳ್ಳಲಿ. ಅವರು ತಮ್ಮ ಬಳಿಯಲ್ಲಿ ವಾಸವಾಗಿರಲು ಅವನಿಗೆ ಸ್ಥಳವನ್ನು ಕೊಡಲಿ. ರಕ್ತದ ಸೇಡು ತೀರಿಸಿಕೊಳ್ಳುವವನು ಅವನನ್ನು ಹಿಂದಟ್ಟಿ ಬಂದರೆ, ಕೊಲೆ ಮಾಡಿದವನನ್ನು ಅವನ ಕೈಗೆ ಒಪ್ಪಿಸಿಕೊಡಬಾರದು. ಏಕೆಂದರೆ ಅವನು ತನ್ನ ನೆರೆಯವನನ್ನು ಅಕಸ್ಮಾತ್ತಾಗಿ ಕೊಂದನು ಮತ್ತು ಪೂರ್ವದಲ್ಲಿ ಅವನ ಬಗ್ಗೆ ದ್ವೇಷ ಇರಲಿಲ್ಲ. ಇದಲ್ಲದೆ ಅವನು ನ್ಯಾಯ ವಿಚಾರಣೆಗೋಸ್ಕರ ಸಭೆಯ ಮುಂದೆ ಬಂದು ನಿಲ್ಲುವವರೆಗೂ ಆ ದಿವಸಗಳಲ್ಲಿ ಇರುವ ಮಹಾಯಾಜಕನು ಮರಣ ಹೊಂದುವವರೆಗೂ ಆ ಪಟ್ಟಣದಲ್ಲೇ ವಾಸವಾಗಿರಬೇಕು. ತರುವಾಯ ಕೊಂದವನು ತಾನು ಬಿಟ್ಟು ಓಡಿ ಹೋದ ತನ್ನ ಪಟ್ಟಣಕ್ಕೂ, ತನ್ನ ಮನೆಗೂ ತಿರುಗಿಬರಬಹುದು,” ಎಂದು ಹೇಳಿದರು.
ಅದರಂತೆ ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ, ಎಫ್ರಾಯೀಮನ ಬೆಟ್ಟಗಳಲ್ಲಿರುವ ಶೆಕೆಮನ್ನೂ, ಯೆಹೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯತ್ ಅರ್ಬವನ್ನೂ ನೇಮಿಸಿದರು. ಯೆರಿಕೋವಿನ ಪೂರ್ವದಲ್ಲಿರುವ ಯೊರ್ದನ್ ನದಿ ಆಚೆ ರೂಬೇನನ ಗೋತ್ರಕ್ಕಿರುವ ಸಮ ಭೂಮಿಯ ಅರಣ್ಯದಲ್ಲಿರುವ ಬೆಚೆರನ್ನು ಗಾದನ ಗೋತ್ರಕ್ಕೆ ಗಿಲ್ಯಾದಿನ ರಾಮೋತನ್ನೂ, ಮನಸ್ಸೆಯ ಗೋತ್ರಕ್ಕೆ ಬಾಷಾನಿನಲ್ಲಿರುವ ಗೋಲಾನನ್ನೂ ಕೊಟ್ಟರು. ಕೈತಪ್ಪಿ ಅರಿಯದೆ ಅಕಸ್ಮಾತ್ತಾಗಿ ಕೊಂದವನು ಯಾವನಾದರೂ ನ್ಯಾಯಸಭೆಯ ಮುಂದೆ ಬಂದು ನಿಲ್ಲುವ ತನಕ, ಸೇಡು ತೀರಿಸಿಕೊಳ್ಳುವವನ ಕೈಯಿಂದ ಸಾಯದ ಹಾಗೆ ಅಲ್ಲಿ ಓಡಿಹೋಗುವುದಕ್ಕೆ ಇಸ್ರಾಯೇಲರೆಲ್ಲರಿಗೂ, ಅವರ ಮಧ್ಯದಲ್ಲಿ ವಾಸವಾಗಿರುವ ಪರಕೀಯರಿಗೂ ನೇಮಿಸಲಾದ ಪಟ್ಟಣಗಳು ಇವೇ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.