Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಯೆಹೋಶುವ 14
ಯೊರ್ದನ್ ನದಿಯ ಪಶ್ಚಿಮದ ಪ್ರದೇಶವನ್ನು ಹಂಚಿಕೊಟ್ಟದ್ದು
ಯಾಜಕನಾದ ಎಲಿಯಾಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಮುಖ್ಯಸ್ಥರೂ ಜನರಿಗೆ ಸೊತ್ತಾಗಿ ಕೊಡಲು ಕಾನಾನ್ ದೇಶದಲ್ಲಿ ಇಸ್ರಾಯೇಲರು ಬಾಧ್ಯವಾಗಿ ಪ್ರದೇಶಗಳನ್ನು ಹೊಂದಿದರು. ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ ಹಾಗೆಯೇ ಒಂಬತ್ತುವರೆ ಗೋತ್ರಗಳಿಗೆ ಚೀಟುಗಳನ್ನು ಹಾಕಿ ಸೊತ್ತಾಗಿ ಪಾಲು ಹಂಚಿದರು. ಏಕೆಂದರೆ ಮೋಶೆಯು ಯೊರ್ದನ್ ನದಿ ಆಚೆ ಎರಡೂವರೆ ಗೋತ್ರಗಳಿಗೆ ಸೊತ್ತನ್ನು ಕೊಟ್ಟಿದ್ದನು. ಆದರೆ ಲೇವಿಯರಿಗೆ ಯಾವ ಸೊತ್ತನ್ನೂ ಕೊಡಲಿಲ್ಲ, ಯೋಸೇಫನ ಮಕ್ಕಳಾದ ಮನಸ್ಸೆಯೂ, ಎಫ್ರಾಯೀಮನೂ ಎರಡು ಗೋತ್ರಗಳಾಗಿದ್ದರು. ಲೇವಿಯರಿಗೆ ದೇಶದಲ್ಲಿ ಪಾಲುಕೊಡಲಿಲ್ಲ. ಆದರೆ ವಾಸಮಾಡುವ ಪಟ್ಟಣಗಳನ್ನೂ, ದನಕುರಿಗಳಿಗೋಸ್ಕರವಾಗಿ ಹುಲ್ಲುಗಾವಲುಗಳನ್ನೂ, ಪ್ರಾಂತಗಳನ್ನೂ ಮಾಡಿಕೊಟ್ಟರು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರಮಾಡಿ, ದೇಶವನ್ನು ಹಂಚಿಕೊಡಲಾಯಿತು.
ಕಾಲೇಬನಿಗೆ ಹೆಬ್ರೋನು ಕೊಟ್ಟಿದ್ದು
ಯೆಹೂದದ ಗೋತ್ರದವರು ಗಿಲ್ಗಾಲಿನಲ್ಲಿ ಯೆಹೋಶುವನ ಬಳಿಗೆ ಬಂದರು. ಆಗ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಅವನಿಗೆ, “ಕಾದೇಶ್ ಬರ್ನೇಯದಲ್ಲಿ ಯೆಹೋವ ದೇವರು ನನ್ನನ್ನೂ, ನಿನ್ನನ್ನೂ ಕುರಿತು ದೇವರ ಮನುಷ್ಯನಾದ ಮೋಶೆಗೆ ಹೇಳಿದ ಮಾತನ್ನು ನೀನು ಬಲ್ಲೆ. ದೇಶವನ್ನು ಸಂಚರಿಸಿ ನೋಡಲು ಯೆಹೋವ ದೇವರ ಸೇವಕನಾದ ಮೋಶೆಯು ನನ್ನನ್ನು ಕಾದೇಶ್ ಬರ್ನೇಯದಿಂದ ಕಳುಹಿಸುವಾಗ ನಾನು ನಾಲ್ವತ್ತು ವರ್ಷ ಪ್ರಾಯದವನಾಗಿದ್ದೆನು. ನನ್ನ ಮನಸ್ಸಿಗೆ ಬಂದಿದ್ದ ವರದಿಯನ್ನು ತಂದು ತಿಳಿಸಿದೆನು. ಆದರೂ ನನ್ನ ಸಂಗಡ ಹೋಗಿ ಬಂದ ನನ್ನ ಸಹೋದರರು ಜನರ ಹೃದಯವನ್ನು ಕರಗಿಸಿದರು. ಆದರೆ ನಾನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದೆನು. ಆ ದಿವಸದಲ್ಲಿ ಮೋಶೆಯು ನನಗೆ, ‘ನೀನು ನನ್ನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ನಿನ್ನ ಪಾದ ಮೆಟ್ಟಿದ ದೇಶವು ನಿನಗೂ, ನಿನ್ನ ಮಕ್ಕಳಿಗೂ ಎಂದೆಂದಿಗೂ ಬಾಧ್ಯತೆಯಾಗಿರುವುದು,’1 ಎಂದು ಆಣೆ ಇಟ್ಟು ಹೇಳಿದನು.
“ಈಗ ಯೆಹೋವ ದೇವರು ಮೋಶೆಗೆ ಈ ವಾಕ್ಯವನ್ನು ಹೇಳಿದಂದಿನಿಂದ ಇಸ್ರಾಯೇಲರು ಮರುಭೂಮಿಯಲ್ಲಿ ಸಂಚರಿಸಿದ ನಾಲ್ವತ್ತೈದು ವರ್ಷ ಯೆಹೋವ ದೇವರು ಹೇಳಿದ ಹಾಗೆಯೇ ನನ್ನನ್ನು ಜೀವದಿಂದ ಇಟ್ಟಿದ್ದಾರೆ. ಈಗ ನಾನು ಇಂದು ಎಂಬತ್ತೈದು ವರ್ಷ ಪ್ರಾಯದವನಾಗಿದ್ದೇನೆ. ಮೋಶೆ ನನ್ನನ್ನು ಕಳುಹಿಸಿದ ದಿವಸದಲ್ಲಿ ನಾನು ಹೇಗೆ ಬಲಿಷ್ಠನಾಗಿ ಇದ್ದೆನೋ, ಹಾಗೆಯೇ ಈಗಲೂ ಬಲಿಷ್ಠನಾಗಿದ್ದೇನೆ. ನಾನು ಯುದ್ಧ ಮಾಡುವದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನನಗೆ ಆಗ ಇದ್ದ ಶಕ್ತಿಯ ಹಾಗೆಯೇ ಈಗಲೂ ಶಕ್ತಿಯುಳ್ಳವನಾಗಿದ್ದೇನೆ. ಆದ್ದರಿಂದ ಯೆಹೋವ ದೇವರು ಆ ದಿವಸದಲ್ಲಿ ಹೇಳಿದ ಈ ಬೆಟ್ಟವನ್ನು ಈಗ ನನಗೆ ಕೊಡು; ಏಕೆಂದರೆ ಅಲ್ಲಿ ಅನಾಕ್ಯರು ಇದ್ದಾರೆಂದೂ, ಗೋಡೆಗಳುಳ್ಳ ದೊಡ್ಡ ಪಟ್ಟಣಗಳುಂಟೆಂದೂ ನೀನು ಆ ದಿವಸದಲ್ಲಿ ಕೇಳಿದ್ದಿ. ಯೆಹೋವ ದೇವರು ಹೇಳಿದ ಪ್ರಕಾರವೇ ನಾನು ಅವರನ್ನು ಹೊರಡಿಸಲು ಯೆಹೋವ ದೇವರು ನನಗೆ ಸಹಾಯ ಮಾಡುವರೆಂದು ನಂಬಿಕೊಂಡಿದ್ದೇನೆ,” ಎಂದನು.
ಆಗ ಯೆಹೋಶುವನು ಯೆಫುನ್ನೆಯ ಮಗ ಕಾಲೇಬನನ್ನು ಆಶೀರ್ವದಿಸಿ, ಅವನಿಗೆ ಹೆಬ್ರೋನನ್ನು ಸೊತ್ತಾಗಿ ಕೊಟ್ಟನು. ಹೀಗೆಯೇ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನು ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಪೂರ್ಣಹೃದಯದಿಂದ ಹಿಂಬಾಲಿಸಿದ ಕಾರಣ, ಹೆಬ್ರೋನು ಇಂದಿನವರೆಗೂ ಅವನ ಸೊತ್ತಾಗಿದೆ. ಹೆಬ್ರೋನಿನ ಮೊದಲಿನ ಹೆಸರು ಕಿರ್ಯತ್ ಅರ್ಬ. “ಅರ್ಬ” ಎಂಬುವವನು ಅನಾಕ್ಯರಲ್ಲಿ ಪ್ರಮುಖನಾಗಿದ್ದನು.
ದೇಶವು ಯುದ್ಧವಿಲ್ಲದೆ ಶಾಂತವಾಗಿತ್ತು.
Source notes (1)
- Footnote ಧರ್ಮೋ 1:36
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.