Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೋಬ 36

ಎಲೀಹು ಮುಂದುವರಿದು ಹೇಳಿದ್ದೇನೆಂದರೆ:

“ನನ್ನನ್ನು ಸ್ವಲ್ಪ ತಾಳಿಕೋ, ನಾನು ನಿನಗೆ ತೋರಿಸಿಕೊಡುತ್ತೇನೆ.

ಏಕೆಂದರೆ ದೇವರ ಪರವಾಗಿ ಇನ್ನೂ ಹೇಳತಕ್ಕ ಮಾತುಗಳು ಇವೆ.

ನಾನು ನನ್ನ ತಿಳುವಳಿಕೆಯನ್ನು ದೂರದಿಂದ ಪಡೆದುಕೊಳ್ಳುತ್ತೇನೆ.

ನನ್ನ ಸೃಷ್ಟಿಕರ್ತ ನ್ಯಾಯವಂತರು ಎಂದು ನಿರೂಪಿಸುವೆನು.

ನಿಜವಾಗಿ ನನ್ನ ಮಾತುಗಳು ಸುಳ್ಳಲ್ಲ;

ತಿಳುವಳಿಕೆಯಲ್ಲಿ ಸಂಪೂರ್ಣನಾದ ಒಬ್ಬನಾಗಿ ನಾನು ನಿನ್ನ ಬಳಿಯಲ್ಲಿಯೇ ಇದ್ದೇನೆ.

“ನೋಡು, ದೇವರು ಸರ್ವಶಕ್ತರು,

ಆದರೂ ಯಾರನ್ನೂ ತಿರಸ್ಕಾರ ಮಾಡುವುದಿಲ್ಲ.

ಶಕ್ತಿವಂತರಾದ ದೇವರು ತಮ್ಮ ಉದ್ದೇಶದಲ್ಲಿ ದೃಢವಾಗಿದ್ದಾರೆ.

ದುಷ್ಟರು ಬಹುಕಾಲ ಬಾಳಲು ದೇವರು ಅನುಮತಿಸುವುದಿಲ್ಲ;

ಆದರೆ ದೇವರು ಬಾಧೆಪಡುವವರಿಗೆ ಅವರ ಹಕ್ಕುಗಳನ್ನು ಕೊಡುತ್ತಾರೆ.

ದೇವರು ನೀತಿವಂತರಿಂದ ತಮ್ಮ ಕಣ್ಣುಗಳನ್ನು ತೊಲಗಿಸುವುದಿಲ್ಲ;

ದೇವರು ನೀತಿವಂತರನ್ನು ಅರಸುಗಳ ಸಂಗಡ ಸಿಂಹಾಸನದಲ್ಲಿ ಕುಳ್ಳಿರಿಸುವರು;

ಹೌದು, ದೇವರು ಅವರನ್ನು ಎಂದೆಂದಿಗೂ ಉನ್ನತಕ್ಕೇರಿಸುವರು.

ಒಂದು ವೇಳೆ ಜನರು ಸಂಕಟದ ಸಂಕೋಲೆಗಳಿಂದ ಬಂಧಿತರಾಗಿ,

ಬಾಧೆಯ ಹಗ್ಗಗಳಿಂದ ಹಿಡಿಯಲಾಗಿದ್ದರೆ,

ದೇವರು ಅವರ ಕೃತ್ಯವನ್ನೂ

ಸೊಕ್ಕಿನ ದ್ರೋಹಗಳನ್ನೂ ಅವರಿಗೆ ಹೇಳುವರು.

ದೇವರು ಅವರ ಕಿವಿಯನ್ನು ತಿದ್ದುವಿಕೆಗಾಗಿ ತೆರೆದು,

ಜನರು ದುಷ್ಟತನವನ್ನು ಬಿಟ್ಟು ತಿರುಗಿಕೊಳ್ಳುವಂತೆ ಅವರಿಗೆ ಆಜ್ಞಾಪಿಸುವರು.

ಒಂದು ವೇಳೆ, ಜನರು ವಿಧೇಯರಾಗಿ ದೇವರನ್ನು ಸೇವಿಸಿದರೆ,

ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿ ಕಳೆಯುವರು.

ತಮ್ಮ ವರ್ಷಗಳನ್ನು ಸಂತೃಪ್ತಿಯಲ್ಲಿಯೂ ಪೂರೈಸುವರು.

ಅವರು ವಿಧೇಯರಾಗದಿದ್ದರೆ,

ಸಂಕಟದ ಸಾಗರದಲ್ಲಿ ಸಾಗಿಹೋಗುವರು;

ತಿಳುವಳಿಕೆಯಿಲ್ಲದ ಬಾಳನ್ನು ಬಾಳುವರು.

“ಹೃದಯದಲ್ಲಿ ಭಕ್ತಿಹೀನರಾಗಿರುವವರು ಕೋಪವನ್ನು ಕೂಡಿಸುವರು;

ದೇವರು ಅವರನ್ನು ಬಂಧಿಸಿದರೂ, ಅವರು ದೇವರಿಗೆ ಮೊರೆ ಇಡುವುದಿಲ್ಲ.

ಅವರು ತಮ್ಮ ಯೌವನದಲ್ಲಿ,

ಪುರುಷಗಾಮಿಗಳ ಮಂದಿರದಲ್ಲಿ ಗತಿಸಿಹೋಗುವರು.

ಶ್ರಮೆ ಪಡುವವರನ್ನು ದೇವರು ಅವರ ಶ್ರಮೆಯ ಮೂಲಕವೇ ಬಿಡುಗಡೆ ಮಾಡುವರು;

ದೇವರು ಅವರ ಹಿಂಸೆಯ ಮೂಲಕವೇ ಅವರೊಂದಿಗೆ ಮಾತನಾಡುವರು.

“ದೇವರು ನಿನ್ನನ್ನು ಇಕ್ಕಟ್ಟಿನೊಳಗಿಂದ ಬಿಡಿಸುವರು;

ಇಕ್ಕಟ್ಟಿಲ್ಲದ ವಿಶಾಲ ಸ್ಥಳವು ನಿನಗೆ ದೊರೆಯುವುದು;

ನಿನ್ನ ಆದರಣೆಗಾಗಿ ನಿನ್ನ ಮೇಜು ಉತ್ತಮ ಆಹಾರಗಳಿಂದ ತುಂಬಿರುವುದು.

ಆದರೆ ಈಗ ನೀನು ದುಷ್ಟರಿಗೆ ಬರಬೇಕಾದ ತೀರ್ಪಿನಿಂದ ತುಂಬಿರುವೆ.

ನ್ಯಾಯವಿಚಾರಣೆಯೂ, ತೀರ್ಪೂ ನಿನ್ನನ್ನು ಹಿಡಿದಿರುತ್ತವೆ.

ಯಾರೂ ನಿನ್ನನ್ನು ಸಂಪತ್ತಿನಿಂದ ಆಕರ್ಷಿಸದಂತೆ ಜಾಗರೂಕನಾಗಿರು;

ದೊಡ್ಡ ಲಂಚತನವು ನಿನ್ನನ್ನು ವಂಚಿಸಬಾರದು.

ನಿನ್ನ ಐಶ್ವರ್ಯವೂ, ಶಕ್ತಿಸಾಮರ್ಥ್ಯವೂ

ಕಷ್ಟಾನುಭವವಿಲ್ಲದೆ ಸಾಗಿಸಲು ಸಾಧ್ಯವೇ?

ಜನರನ್ನು ಅವರ ಮನೆಗಳಿಂದ ಎಳೆದುಕೊಂಡು

ಹೋಗುವುದಕ್ಕೆ ರಾತ್ರಿಯನ್ನು ಬಯಸಬೇಡ.

ಅಕ್ರಮದ ಕರೆಗೆ ಕಾಲಿಡಬೇಡ, ಎಚ್ಚರಿಕೆ!

ನೀನು ಕಷ್ಟಕ್ಕಿಂತಲೂ ಕೇಡನ್ನು ಆರಿಸಿಕೊಂಡಿದ್ದೀ.

“ದೇವರು ತಮ್ಮ ಶಕ್ತಿಯಲ್ಲಿ ಉನ್ನತರಾಗಿದ್ದಾರೆ.

ದೇವರಂಥ ಬೋಧಕರು ಯಾರಿದ್ದಾರೆ?

ದೇವರ ಮಾರ್ಗವನ್ನು ದೇವರಿಗೆ ನೇಮಿಸಿದವರ‍್ಯಾರು?

‘ನೀವು ಮಾಡಿರುವುದು ಅನ್ಯಾಯ,’ ಎಂದು ದೇವರಿಗೆ ಹೇಳುವವರು ಯಾರು?

ಮನುಷ್ಯರು ಹೊಗಳಿ ಹಾಡುವ ಹಾಡುಗಳಿಂದ,

ದೇವರ ಕೃತ್ಯಗಳನ್ನು ಉನ್ನತಪಡಿಸಲು ನೆನಸಿಕೋ.

ಎಲ್ಲಾ ಮನುಷ್ಯರು ದೇವರ ಕೃತ್ಯಗಳನ್ನು ಕಂಡಿದ್ದಾರೆ;

ಹೌದು, ಮನುಷ್ಯರು ದೂರದಿಂದ ನೋಡುತ್ತಾರೆ.

ದೇವರು ಮಹೋನ್ನತರು; ದೇವರು ನಮ್ಮ ಅರಿವಿಗೆ ನಿಲುಕರು.

ದೇವರ ವರ್ಷಗಳು ಅಸಂಖ್ಯಾತವಾಗಿವೆ.

“ದೇವರು ನೀರಿನ ಹನಿಗಳನ್ನು ಕೂಡಿಸಿದಾಗ,

ಮಂಜಿನಿಂದ ತಿಳಿಮಳೆ ಸುರಿಯುತ್ತವೆ.

ಮೋಡಗಳು ಮಳೆಗರೆಯುತ್ತವೆ.

ಮನುಷ್ಯರ ಮೇಲೆ ಸಮೃದ್ಧಿಯಾಗಿ ಚಿಮುಕಿಸುತ್ತವೆ.

ಮೋಡಗಳ ವಿಸ್ತೀರ್ಣತೆಯನ್ನೂ,

ದೇವರ ಗುಡಾರದಿಂದ ಗುಡುಗುವುದನ್ನೂ ಗ್ರಹಿಸಿಕೊಳ್ಳುವವರು ಯಾರು?

ಇಗೋ, ದೇವರು ಮಿಂಚನ್ನು ತಮ್ಮ ಸುತ್ತಲು ಚದರಿಸುತ್ತಾರೆ.

ಸಮುದ್ರದ ಆಳವನ್ನು ಸಹ ಆವರಿಸುತ್ತಾರೆ.

ಈ ರೀತಿಯಾಗಿ ದೇವರು ದೇಶಗಳನ್ನು ಆಳುತ್ತಾರೆ1

ಸಮೃದ್ಧಿಯಾಗಿ ದೇವರು ಆಹಾರ ಕೊಡುತ್ತಾರೆ.

ದೇವರು ತಮ್ಮ ಕೈಯಲ್ಲಿ ಮಿಂಚನ್ನು ಹಿಡಿದುಕೊಂಡು,

ಅದನ್ನು ಗುರಿಮುಟ್ಟುವಂತೆ ಆಜ್ಞಾಪಿಸುತ್ತಾರೆ.

ಬಿರುಗಾಳಿಯು ಬರುತ್ತಿದೆ ಎಂದು ದೇವರ ಸಿಡಿಲು ತಿಳಿಸುತ್ತದೆ;

ದನಕರುಗಳು ಸಹ ದೇವರ ಆಗಮನವನ್ನು ತಿಳಿಸುತ್ತವೆ.

Source notes (1)
  1. Footnote ಆಳುತ್ತಾರೆ ಅಥವಾ ಪೋಷಿಸುತ್ತಾರೆ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.