Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಯೋಬ 23
ಯೋಬನ ಉತ್ತರ
ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
“ಇಂದಿಗೂ ನನ್ನ ದೂರು ಕಹಿಯಾಗಿದೆ;
ನಾನು ನಿಟ್ಟುಸಿರಿಟ್ಟರೂ ದೇವರ ಹಸ್ತವು ಭಾರವಾಗಿದೆ.
ದೇವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ಎಷ್ಟೋ ಒಳ್ಳೆಯದು!
ಸಾಧ್ಯವಾದರೆ ನಾನು ದೇವರು ವಾಸಿಸುವ ಸ್ಥಳದ ತನಕ ಹೋಗುತ್ತಿದ್ದೆ.
ನನ್ನ ನ್ಯಾಯವನ್ನು ದೇವರ ಮುಂದೆ ವಿವರಿಸುತ್ತಿದ್ದೆ;
ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುತ್ತಿದ್ದೆ.
ದೇವರು ನನಗೆ ಉತ್ತರವಾಗಿ ಕೊಡುವ ಮಾತುಗಳನ್ನು ಕಂಡುಹಿಡಿದು,
ದೇವರು ನನಗೆ ಹೇಳುವುದನ್ನು ಪರಿಗಣಿಸುತ್ತಿದ್ದೆ.
ದೇವರು ನನ್ನನ್ನು ಕಠಿಣವಾಗಿ ವಿರೋಧಿಸುತ್ತಾರೋ?
ಇಲ್ಲ, ಖಂಡಿತವಾಗಿ ಅವರು ನನ್ನ ವಿರುದ್ಧ ಆರೋಪಗಳನ್ನು ಹೊರಿಸುವುದಿಲ್ಲ.
ದೇವರ ಸನ್ನಿಧಿಯಲ್ಲಿ ಯಥಾರ್ಥವಂತನು ತಾನು ನಿರಪರಾಧಿ ಎಂದು ದೃಢಪಡಿಸಲು ಸಾಧ್ಯ;
ಅಲ್ಲಿ ನನಗೆ ನನ್ನ ನ್ಯಾಯಾಧಿಪತಿಯಿಂದ ಶಾಶ್ವತವಾಗಿ ಬಿಡುಗಡೆಯಾಗುವುದು.
“ಒಂದು ವೇಳೆ ನಾನು ಪೂರ್ವದೆಡೆಗೆ ಹೋದರೂ ದೇವರು ನನಗೆ ಕಾಣಿಸುವುದಿಲ್ಲ;
ಪಶ್ಚಿಮದೆಡೆಗೆ ಹೋದರೂ ದೇವರು ಕಾಣಿಸುವುದಿಲ್ಲ.
ಉತ್ತರದಲ್ಲಿ ಹುಡುಕಿದರೂ ದೇವರನ್ನು ನೋಡಲಾರೆನು;
ದಕ್ಷಿಣದೆಡೆಗೆ ತಿರುಗಿಕೊಂಡರೂ ದೇವರು ಕಾಣಿಸುವುದಿಲ್ಲ.
ಆದರೆ ದೇವರು ನಾನು ಹೋಗುವ ಮಾರ್ಗವನ್ನು ತಿಳಿದಿದ್ದಾರೆ;
ದೇವರು ನನ್ನನ್ನು ಪರೀಕ್ಷಿಸಿದಾಗ, ನಾನು ಚೊಕ್ಕ ಬಂಗಾರವಾಗಿ ಹೊರಗೆ ಬರುವೆನು.
ನನ್ನ ಪಾದಗಳು ದೇವರ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಅನುಸರಿಸಿವೆ;
ದೇವರ ಮಾರ್ಗವನ್ನು ಬಿಟ್ಟು ನಾನು ತೊಲಗದಂತೆ ನೋಡಿಕೊಂಡೆನು.
ದೇವರ ತುಟಿಗಳ ಆಜ್ಞೆಯಿಂದ ನಾನು ಹಿಂಜರಿಯಲಿಲ್ಲ;
ನನ್ನ ದೈನಂದಿನ ಆಹಾರಕ್ಕಿಂತ ದೇವರ ಬಾಯಿಯ ಮಾತುಗಳನ್ನು
ನನ್ನೆದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ.
“ಆದರೆ ದೇವರು ಬದಲಾಗದವರು; ದೇವರನ್ನು ಬದಲಾಯಿಸುವವರು ಯಾರು?
ದೇವರು ತಾವು ಬಯಸಿದ್ದನ್ನು ಮಾಡುತ್ತಾರೆ.
ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ.
ಇಂಥ ಅನೇಕ ಯೋಜನೆಗಳು ದೇವರಲ್ಲಿವೆ.
ಆದ್ದರಿಂದ ನಾನು ದೇವರ ಮುಂದೆ ಗಾಬರಿಗೊಳ್ಳುತ್ತೇನೆ;
ಇದನ್ನೆಲ್ಲಾ ಗ್ರಹಿಸಿಕೊಳ್ಳುವಾಗ ನಾನು ದೇವರಿಗೆ ಭಯಪಡುತ್ತೇನೆ.
ದೇವರು ನನ್ನ ಹೃದಯವನ್ನು ಹೆದರಿಸಿದ್ದಾರೆ;
ಸರ್ವಶಕ್ತರು ನನ್ನನ್ನು ಗಾಬರಿಪಡಿಸಿದ್ದಾರೆ.
ಆದರೂ ನಾನು ಅಂಧಕಾರದಿಂದ ಮೌನವಾಗಲಿಲ್ಲ;
ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲಿನ ನಿಮಿತ್ತ ನಾನು ಮಾತಾಡದೆ ಇರುವುದಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.