Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಯೋಬ 16
ಯೋಬನ ಉತ್ತರ
ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ:
“ನಾನು ಇವುಗಳ ಹಾಗೆ ಅನೇಕ ಮಾತುಗಳನ್ನು ಕೇಳಿದ್ದೇನೆ;
ನೀವೆಲ್ಲರೂ ಆದರಣೆ ಕೊಡುವವರಲ್ಲ, ಬಾಧಿಸುವವರೇ.
ನಿಮ್ಮ ವ್ಯರ್ಥ ಮಾತುಗಳಿಗೆ ಅಂತ್ಯ ಇಲ್ಲವೋ?
ನನ್ನೊಂದಿಗೆ ವಾದಿಸಲು ನಿಮ್ಮನ್ನು ಒತ್ತಾಯಪಡಿಸಿದ್ದೇನು?
ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ,
ನಾನು ಸಹ ನಿಮ್ಮ ಹಾಗೆ ಮಾತಾಡುತ್ತಿದ್ದೆ;
ನಾನು ನಿಮ್ಮ ವಿರುದ್ಧ ಪದಪ್ರಯೋಗಿಸಿ ಮಾತಾಡಬಹುದಾಗಿತ್ತು;
ಹೌದು, ನಿಮ್ಮ ವಿಷಯದಲ್ಲಿ ಗೇಲಿ ಮಾಡುತ್ತಾ, ನಾನು ನನ್ನ ತಲೆಯಾಡಿಸಬಹುದಾಗಿತ್ತು.
ಆದರೆ, ನಾನು ನನ್ನ ಬಾಯಿಮಾತಿನಿಂದ ನಿಮ್ಮನ್ನು ಪ್ರೋತ್ಸಾಹಿಸುವೆನು;
ನನ್ನ ಆದರಣೆಯ ಮಾತುಗಳು ನಿಮಗೆ ಉಪಶಮನ ಮಾಡುವುದು.
“ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ;
ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ.
ದೇವರೇ, ನೀವು ನನ್ನನ್ನು ಬಲಹೀನಪಡಿಸಿದ್ದೀರಿ;
ನೀವು ನನ್ನ ಕುಟುಂಬದವರನ್ನೆಲ್ಲಾ ಇಲ್ಲದಂತೆ ಮಾಡಿದ್ದೀರಿ.
ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ;
ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ;
ದೇವರು ತಮ್ಮ ಬೇಸರದಲ್ಲಿ ನನ್ನನ್ನು ದಂಡಿಸಿದ್ದಾರೆ;
ನನ್ನ ದೇವರು ನನ್ನ ಮೇಲೆ ಅತೃಪ್ತರಾಗಿದ್ದಾರೆ;
ನನ್ನ ವೈರಿಯು ನನ್ನನ್ನು ದ್ವೇಷದಿಂದ ನೋಡುತ್ತಿದ್ದಾನೆ.
ನನ್ನ ಮೇಲೆ ಜನರು ತಮ್ಮ ಬಾಯಿ ಕಿಸಿಯುತ್ತಾರೆ;
ನಿಂದಿಸಿ ನನ್ನ ಕೆನ್ನೆಗಳನ್ನು ಬಡಿಯುತ್ತಾರೆ,
ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ.
ದೇವರು ನನ್ನನ್ನು ದುಷ್ಟರ ಕೈಗೆ ಒಪ್ಪಿಸಿಬಿಟ್ಟಿದ್ದಾರೆ;
ಹೌದು, ದುಷ್ಟರ ಕೈಗೆ ನನ್ನನ್ನು ಎಸೆದುಬಿಟ್ಟಿದ್ದಾರೆ.
ನಾನು ನೆಮ್ಮದಿಯಿಂದ ಇದ್ದಾಗ ದೇವರು ನನ್ನನ್ನು ಚದರಿಸಿದ್ದಾರೆ;
ನಾನು ಮಡಕೆ ಒಡೆದುಬಿದ್ದಂತೆ ಇದ್ದೇನೆ.
ನನ್ನನ್ನು ತಮಗೆ ಗುರಿ ಹಲಗೆಯಾಗಿ ನಿಲ್ಲಿಸಿಕೊಂಡಿದ್ದಾರೆ.
ದೇವರ ಬಾಣಗಳು ನನ್ನನ್ನು ಸುತ್ತುವರಿದಿವೆ;
ನಾನು ಕರುಣೆಯಿಲ್ಲದೆ ನೆಲದ ಮೇಲೆ ಪಿತ್ತವನ್ನು ಸುರಿದು ಬಿದ್ದವನಂತೆ ಇದ್ದೇನೆ.
ನನ್ನ ಪಿತ್ತವನ್ನು ಭೂಮಿಗೆ ಚೆಲ್ಲುತ್ತಾರೆ.
ದೇವರು ಮತ್ತೆ ಮತ್ತೆ ನನ್ನನ್ನು ಮುರಿಯುತ್ತಿದ್ದಾರೆ;
ಅದು ಶೂರನು ಓಡಿಬಂದು ನನ್ನ ಮೇಲೆ ದಾಳಿಮಾಡಿದಂತಿದೆ.
“ನಾನು ಗೋಣಿತಟ್ಟು ಹೊಲಿದು ನನ್ನ ಮೈಮೇಲೆ ಹಾಕಿಕೊಂಡಿದ್ದೇನೆ;
ನನ್ನ ಗೌರವವನ್ನು ಧೂಳಿನಲ್ಲಿ ಮರೆಮಾಡಿದ್ದೇನೆ.
ನನ್ನ ಮುಖವು ಅಳುವುದರಿಂದ ಕೆಂಪಾಯಿತು;
ನನ್ನ ರೆಪ್ಪೆಗಳ ಮೇಲೆ ಮರಣದ ಅಂಧಕಾರವು ಕವಿದಿದೆ.
ಆದರೂ ನನ್ನ ಕೈಗಳಲ್ಲಿ ಹಿಂಸಾಚಾರವಿಲ್ಲ;
ನನ್ನ ಪ್ರಾರ್ಥನೆಯು ಶುದ್ಧವಾಗಿದೆ.
“ಭೂಮಿಯೇ, ನನ್ನ ರಕ್ತವನ್ನು ಮುಚ್ಚಬೇಡ,
ನನ್ನ ಕೂಗು ವಿಶ್ರಾಂತಿ ಹೊಂದದಿರಲಿ!
ಈಗಲೂ ಪರಲೋಕದಲ್ಲಿ ನನಗೆ ಒಬ್ಬ ಸಾಕ್ಷಿ ಇದ್ದಾರೆ;
ಹೌದು, ನನ್ನ ವಕೀಲರು ಉನ್ನತದಲ್ಲಿದ್ದಾರೆ.
ಆದರೆ ನನ್ನ ಮಿತ್ರ ನನಗಾಗಿ ವಿಜ್ಞಾಪನೆಮಾಡುತ್ತಿದ್ದಾರೆ;
ನನ್ನ ಕಣ್ಣುಗಳು ದೇವರ ಮುಂದೆ ಕಣ್ಣೀರು ಸುರಿಸುತ್ತವೆ.
ಒಬ್ಬ ಮನುಷ್ಯನು ತನ್ನ ಮಿತ್ರನಿಗೋಸ್ಕರ ಬೇಡಿಕೊಳ್ಳುವಂತೆ,
ಅವರು ಸಹ ಮನುಷ್ಯನಿಗಾಗಿ ದೇವರ ಮುಂದೆ ವಾದಿಸುತ್ತಿದ್ದಾರೆ.
“ನಾನು ಹಿಂದಿರುಗಿ ಬಾರದ ದಾರಿಯನ್ನು ಹಿಡಿಯಲು,
ಇನ್ನೂ ಕೆಲವೇ ವರ್ಷಗಳು ಉಳಿದಿವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.