Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೋಬ 13

“ಇಗೋ, ನನ್ನ ಕಣ್ಣು ಎಲ್ಲವನ್ನು ನೋಡಿದೆ;

ನನ್ನ ಕಿವಿ ಕೇಳಿ ಅದನ್ನು ಗ್ರಹಿಸಿಕೊಂಡಿದೆ.

ನೀವು ತಿಳಿದುಕೊಳ್ಳುವ ಪ್ರಕಾರ ನಾನೂ ತಿಳಿದುಕೊಂಡಿದ್ದೇನೆ;

ನಾನು ನಿಮಗಿಂತ ಕಡಿಮೆಯಾದವನಲ್ಲ.

ನಾನು ಸರ್ವಶಕ್ತರ ಸಂಗಡ ಖಂಡಿತವಾಗಿ ಮಾತನಾಡುವೆನು;

ದೇವರ ಸಂಗಡ ವಾದಿಸಲು ನನಗೆ ಮನಸ್ಸುಂಟು.

ಆದರೆ ನೀವು ಸುಳ್ಳನ್ನು ಕಲ್ಪಿಸುವವರು;

ನೀವೆಲ್ಲರು ವ್ಯರ್ಥ ವೈದ್ಯರೇ.

ನೀವು ಮೌನವಾಗಿಯೇ ಇದ್ದರೆ ಎಷ್ಟೋ ಒಳ್ಳೇದು;

ಮೌನವೇ ನಿಮಗೆ ಜ್ಞಾನವು.

ಈಗ ನನ್ನ ವಾದವನ್ನು ಕೇಳಿಸಿಕೊಳ್ಳಿರಿ;

ನನ್ನ ತುಟಿಗಳ ತರ್ಕಗಳನ್ನು ಆಲೈಸಿರಿ.

ದೇವರ ಪರವಾಗಿ ಮಾತಾಡುವ ನೀವು ಅನ್ಯಾಯದಿಂದ ಮಾತಾಡುವಿರೋ?

ದೇವರಿಗೋಸ್ಕರ ಮಾತಾಡುವ ನೀವು ವಂಚನೆಯಿಂದ ಮಾತಾಡುವಿರೋ?

ನೀವು ದೇವರಿಗೆ ಪಕ್ಷಪಾತವನ್ನು ತೋರಿಸುವಿರೋ?

ದೇವರ ಪರವಾಗಿ ನೀವು ವಾದಿಸುವಿರೋ?

ದೇವರು ನಿಮ್ಮನ್ನು ಶೋಧಿಸಿದರೆ, ಅದು ನಿಮಗೆ ಒಳ್ಳೇದೋ?

ಒಬ್ಬ ಮನುಷ್ಯನು ಇನ್ನೊಬ್ಬನನ್ನು ವಂಚಿಸುವ ಪ್ರಕಾರ, ನೀವೂ ದೇವರನ್ನು ವಂಚಿಸುವಿರೋ?

ನೀವು ರಹಸ್ಯವಾಗಿ ಪಕ್ಷಪಾತಮಾಡಿದರೂ,

ದೇವರು ನಿಶ್ಚಯವಾಗಿಯೂ ನಿಮ್ಮನ್ನು ಖಂಡಿಸುವರು.

ದೇವರ ವೈಭವವು ನಿಮ್ಮನ್ನು ಹೆದರಿಸುವುದಿಲ್ಲವೋ?

ದೈವಭಯವು ನಿಮ್ಮ ಮೇಲೆ ಬೀಳುವುದಿಲ್ಲವೋ?

ನಿಮ್ಮ ನೀತಿವಚನಗಳು ಬೂದಿಯ ಗಾದೆಗಳು;

ನಿಮ್ಮ ವಾದಗಳು ಬರೀ ಮಣ್ಣಿನ ಗೋಡೆಯೇ.

“ಸುಮ್ಮನಿರಿ, ನನ್ನನ್ನು ಮಾತನಾಡಲು ಬಿಡಿರಿ;

ನನಗೇನಾದರೂ ಆಗಲಿ.

ನನ್ನ ಪ್ರಾಣವನ್ನು ಬಾಯಿಂದ ಕಚ್ಚಿಕೊಂಡಿರುವೆನು;

ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.

ದೇವರು ನನ್ನನ್ನು ಕೊಂದರೂ, ನಾನು ದೇವರ ಮೇಲೆ ನಿರೀಕ್ಷೆಯಿಂದಿರುವೆನು;

ನಾನು ನಿಶ್ಚಯವಾಗಿ ನನ್ನ ನಡತೆಯ ಒಳ್ಳೆಯತನವನ್ನು ದೇವರ ಮುಂದೆ ಸ್ಥಾಪಿಸುವೆನು.

ಇದೇ ನನ್ನ ಬಿಡುಗಡೆಗೆ ಕಾರಣವಾಗಿರುವುದು;

ಭಕ್ತಿಹೀನರು ದೇವರ ಮುಂದೆ ಬರಲು ಧೈರ್ಯಮಾಡುವುದಿಲ್ಲ.

ನನ್ನ ನುಡಿಗಳನ್ನು ಲಕ್ಷ್ಯವಿಟ್ಟು ಕೇಳಿರಿ

ಮತ್ತು ನನ್ನ ದೃಢ ವಚನವು ನಿಮ್ಮ ಕಿವಿಗೆ ಬೀಳಲಿ.

ಇಗೋ, ನನ್ನ ನ್ಯಾಯವನ್ನು ಕ್ರಮಪಡಿಸಿದೆನು;

ನಾನು ನೀತಿವಂತನೆಂದು ನಿರ್ಣಯ ಹೊಂದುವುದು ನನಗೆ ಗೊತ್ತೇ ಇದೆ.

ಯಾರಾದರೂ ನನ್ನ ವಿರುದ್ಧ ದೂರನ್ನು ತರಬಹುದೋ?

ಹಾಗಿದ್ದರೆ ನಾನು ಮೌನವಾಗಿದ್ದು ಸತ್ತು ಹೋಗುವೆನು.

“ದೇವರೇ, ಈ ಎರಡು ಸಂಗತಿಗಳನ್ನು ಮಾತ್ರ ನನಗೆ ದಯಪಾಲಿಸಿರಿ;

ಆಗ ನಿಮ್ಮಿಂದ ನಾನು ಅಡಗಿಕೊಳ್ಳುವುದಿಲ್ಲ:

ನಿಮ್ಮ ಕೈಯನ್ನು ನನ್ನಿಂದ ದೂರಮಾಡಿರಿ;

ನಿಮ್ಮ ಭಯವು ನನ್ನನ್ನು ಹೆದರಿಸದಿರಲಿ.

ಆಮೇಲೆ ನೀವು ನನ್ನನ್ನು ಕರೆದರೆ, ನಾನು ಉತ್ತರಿಸುವೆನು;

ಅಥವಾ ನಾನು ಮಾತಾಡಿದರೆ, ನೀವು ಉತ್ತರಕೊಡಿರಿ.

ನಾನು ಎಷ್ಟೋ ಅಕ್ರಮಗಳನ್ನೂ, ಪಾಪಗಳನ್ನೂ ಮಾಡಿದ್ದೇನೆ.

ನನ್ನ ಅಪರಾಧವನ್ನೂ, ಪಾಪವನ್ನೂ ನನಗೆ ತೋರಿಸಿಕೊಡಿರಿ.

ಏಕೆ ನಿಮ್ಮ ಮುಖವನ್ನು ಮರೆಮಾಡುತ್ತೀರಿ?

ನನ್ನನ್ನು ನಿಮ್ಮ ಶತ್ರುವಿನ ಹಾಗೆ ಏಕೆ ಭಾವಿಸುತ್ತೀರಿ?

ಗಾಳಿಯಿಂದ ಹಾರಿಹೋಗುವ ಎಲೆಯನ್ನು ತೊಂದರೆಪಡಿಸುವಿರೋ?

ಒಣಗಿದ ಕೊಳೆಯನ್ನು ಬೆನ್ನಟ್ಟುವಿರೋ?

ಏಕೆಂದರೆ ನನಗೆ ವಿರೋಧವಾಗಿ ಕಹಿಯಾದ ತೀರ್ಪನ್ನು ನೀವು ಬರೆದಿರುವಿರಿ;

ನನ್ನ ಯೌವನದ ಪಾಪಗಳನ್ನು ನನ್ನ ಮೇಲೆ ಹೊರಿಸಿರುವಿರಿ.

ನನ್ನ ಪಾದಗಳನ್ನು ಸಂಕೋಲೆಗಳಿಂದ ಕಟ್ಟಿಹಾಕಿದ್ದೀರಿ,

ನನ್ನ ಪಾದಗಳ ಹಿಮ್ಮಡಿಗಳ ಮೇಲೆ ಗುರುತು ಹಾಕಿದ್ದೀರಿ;

ನನ್ನ ಹಾದಿಗಳನ್ನೆಲ್ಲಾ ಲಕ್ಷ್ಯವಿಟ್ಟು ನೋಡುತ್ತೀರಿ.

“ಆದ್ದರಿಂದ ಮಾನವನು ಕೊಳೆತ ವಸ್ತುವಿನಂತೆಯೂ,

ನುಸಿಹಿಡಿದ ಬಟ್ಟೆಯಂತೆಯೂ ಅಳಿದು ಹೋಗುತ್ತಾನೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.