Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆರೆಮೀಯ 24

ಅಂಜೂರ ಹಣ್ಣಿನ ಎರಡು ಬುಟ್ಟಿಗಳು

ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು, ಯೆಹೂದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಬಡಗಿಯರನ್ನೂ, ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆಗೆ ಒಯ್ದನು. ಯೆಹೋವ ದೇವರ ದೇವಾಲಯದ ಮುಂದೆ ಇಟ್ಟಿರುವ ಎರಡು ಬುಟ್ಟಿ ಅಂಜೂರದ ಹಣ್ಣುಗಳನ್ನು ಯೆಹೋವ ದೇವರು ನನಗೆ ತೋರಿಸಿದರು. ಒಂದು ಬುಟ್ಟಿಯಲ್ಲಿ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳು ತುಂಬಿದ್ದವು. ಅವು ಅತ್ಯುತ್ತಮವಾದ ಅಂಜೂರದ ಹಣ್ಣುಗಳು. ಇನ್ನೊಂದು ಬುಟ್ಟಿಯಲ್ಲಿ ಯಾರೂ ತಿನ್ನಲಾಗದಷ್ಟು ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.

ಆಗ ಯೆಹೋವ ದೇವರು ನನ್ನನ್ನು, “ಯೆರೆಮೀಯನೇ, ನಿನಗೆ ಕಾಣುತ್ತಿರುವುದು ಏನು?” ಎಂದು ಕೇಳಿದರು.

ನಾನು, “ಅಂಜೂರದ ಹಣ್ಣುಗಳನ್ನು ನೋಡುತ್ತಿದ್ದೇನೆ. ಒಳ್ಳೆಯ ಹಣ್ಣುಗಳು ಅತ್ಯುತ್ತಮವಾಗಿವೆ. ಕೆಟ್ಟ ಹಣ್ಣುಗಳು ಬಹಳ ಕೆಟ್ಟಿವೆ. ಯಾರೂ ತಿನ್ನಲಾಗದಷ್ಟು ಅಸಹ್ಯವಾಗಿವೆ,” ಎಂದು ಉತ್ತರಕೊಟ್ಟೆ.

ಆಗ ಯೆಹೋವ ದೇವರು ನನಗೆ ದಯಪಾಲಿಸಿದ ಸಂದೇಶ ಇದು: “ಇಸ್ರಾಯೇಲರ ದೇವರಾದ ಯೆಹೋವ ದೇವರು ಹೇಳುವುದನ್ನು ಕೇಳು, ‘ನಾನು ಈ ಸ್ಥಳದಿಂದ ಬಾಬಿಲೋನಿಗೆ ಕಳುಹಿಸಿಬಿಟ್ಟು, ಅಲ್ಲಿ ಸೆರೆಯಾಳುಗಳಾಗಿರುವ ಯೆಹೂದ್ಯರು ಈ ಉತ್ತಮವಾದ ಅಂಜೂರದ ಹಣ್ಣುಗಳಂತವರು. ನಾನು ಅವರನ್ನು ಒಳ್ಳೆಯವರಂತೆ ಪರಿಗಣಿಸುತ್ತೇನೆ. ಏಕೆಂದರೆ ನಾನು ಅವರ ಒಳ್ಳೆಯದರ ಮೇಲೆ ನನ್ನ ದೃಷ್ಟಿಯನ್ನು ಇಟ್ಟುಕೊಳ್ಳುತ್ತೇನೆ. ಈ ದೇಶಕ್ಕೆ ಅವರನ್ನು ತಿರುಗಿ ಬರಮಾಡುವೆನು. ಕೆಡವಿಹಾಕದೆ ಅವರನ್ನು ಕಟ್ಟುವೆನು. ಕೀಳದೆ ಅವರನ್ನು ನೆಡುವೆನು. ನಾನೇ ಯೆಹೋವನೆಂದು ನನ್ನನ್ನು ತಿಳಿದುಕೊಳ್ಳುವುದಕ್ಕೆ ಅವರಿಗೆ ಹೃದಯವನ್ನು ಕೊಡುವೆನು. ಅವರು ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು. ಏಕೆಂದರೆ ಅವರು ತಮ್ಮ ಪೂರ್ಣಹೃದಯದಿಂದ ನನ್ನ ಬಳಿಗೆ ಹಿಂದಿರುಗಿಕೊಳ್ಳುವರು.

“ ‘ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳಾಗಿರುವ ಆ ಕೆಟ್ಟ ಅಂಜೂರದ ಹಣ್ಣುಗಳ ಹಾಗೆ ನಿಶ್ಚಯವಾಗಿ ನಾನು ಯೆಹೂದದ ಅರಸನಾದ ಚಿದ್ಕೀಯನನ್ನೂ, ಅವನ ಪ್ರಧಾನರನ್ನೂ ಈ ದೇಶದಲ್ಲಿ ಉಳಿಯುವ ಯೆರೂಸಲೇಮಿನ ಶೇಷವನ್ನೂ, ಈಜಿಪ್ಟ್ ದೇಶದಲ್ಲಿ ವಾಸಿಸುವವರನ್ನೂ ಒಪ್ಪಿಸುತ್ತೇನೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ನಾನು ಅವರನ್ನು ಅಸಹ್ಯಪಡಿಸುತ್ತೇನೆ. ನಿಂದೆಗೂ, ಗಾದೆಗೂ, ಹಾಸ್ಯಕ್ಕೂ, ಶಾಪಕ್ಕೂ ಗುರಿಮಾಡಿ ಅವರನ್ನು ಭೂಮಿಯ ಸಮಸ್ತ ರಾಜ್ಯಗಳಿಂದ ತೆಗೆದು ಕೇಡಿಗೆ ಒಪ್ಪಿಸುವೆನು. ನಾನು ಅವರಿಗೂ, ಅವರ ತಂದೆಗಳಿಗೂ ಕೊಟ್ಟ ದೇಶದೊಳಗಿಂದ ಅವರು ನಾಶವಾಗುವವರೆಗೂ ಖಡ್ಗವನ್ನೂ, ಕ್ಷಾಮವನ್ನೂ, ವ್ಯಾಧಿಯನ್ನೂ ಅವರಲ್ಲಿ ಕಳುಹಿಸುವೆನು.’ ”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.