Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆಶಾಯ 48

ಹಟಮಾರಿ ಇಸ್ರಾಯೇಲರು

“ಇಸ್ರಾಯೇಲ್ ಎಂಬ ಹೆಸರಿನವರೂ,

ಯೆಹೂದವೆಂಬ ಒರತೆಯಿಂದ ಬಂದವರೂ

ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ:

ಯೆಹೋವ ದೇವರ ಹೆಸರಿನ ಮೇಲೆ ಆಣೆ ಇಟ್ಟು,

ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ.

ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ.

ಏಕೆಂದರೆ ಅವರು ತಾವು ಪರಿಶುದ್ಧ ಪಟ್ಟಣದವರು ಎಂದು

ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ.

ಸೇನಾಧೀಶ್ವರ ಯೆಹೋವ ದೇವರು ಎಂಬುದು ಆತನ ಹೆಸರು.

ಪೂರ್ವಕಾಲದಲ್ಲೇ ಹಳೆಯ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ.

ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತಿಳಿಸಿದ್ದೇನೆ.

ನಾನು ತಟ್ಟನೆ ನಡೆಸಲು, ಅವು ನೆರವೇರಿದವು.

ಏಕೆಂದರೆ ನೀನು ಹಟಗಾರ.

ನಿನ್ನ ಕತ್ತಿನ ನರಗಳು ಕಬ್ಬಿಣ,

ನಿನ್ನ ಹಣೆ ಕಂಚಿನದು ಎಂದು ನಾನು ತಿಳಿದುಕೊಂಡಿದ್ದೇನೆ.

‘ಈ ಕಾರ್ಯಗಳನ್ನು ನನ್ನ ವಿಗ್ರಹಗಳು ನಡಿಸಿದೆ.

ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ

ವಿಗ್ರಹ ಇವುಗಳನ್ನು ವಿಧಿಸಿದೆ,’ ಎಂದು ನೀನು ಹೇಳಿಕೊಳ್ಳದಂತೆ

ನಾನು ಪುರಾತನ ಕಾಲದಲ್ಲಿಯೇ

ಇವು ಸಂಭವಿಸುವುದಕ್ಕಿಂತ ಮೊದಲೇ ತಿಳಿಸಿದೆನು.

ನೀನು ಕೇಳಿದ್ದೀ, ಇವೆಲ್ಲವುಗಳನ್ನು ದೃಷ್ಟಿಸು.

ನೀವು ಅದನ್ನು ಒಪ್ಪಿಕೊಳ್ಳದೆ ಇದ್ದೀರೋ?

“ಇಂದಿನಿಂದ ಹೊಸ ಸಂಗತಿಗಳನ್ನೂ,

ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನೂ ನಿನಗೆ ಹೇಳುತ್ತೇನೆ.

ಈಗಲೇ ಉಂಟಾಗುತ್ತಿವೆ, ಪುರಾತನ ಕಾಲದಲ್ಲಿ ಆಗಿಲ್ಲ;

‘ಇದೆಲ್ಲ ನನಗೆ ಮೊದಲೇ ತಿಳಿದಿತ್ತು,’

ಎಂದು ನೀನು ಕೊಚ್ಚಿಕೊಳ್ಳದಂತೆ,

ನಾನು ಇವುಗಳನ್ನು ನಿನಗೆ ಮುಂತಿಳಿಸಲಿಲ್ಲ.

ನೀನು ಕೇಳಿಲ್ಲ, ತಿಳಿದೂ ಇಲ್ಲ.

ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ.

ಏಕೆಂದರೆ ನೀನು ದೊಡ್ಡ ವಂಚಕನೆಂದೂ,

ಗರ್ಭದಿಂದಲೇ ನೀನು ದ್ರೋಹಿ ಎಂದೂ ನಾನು ತಿಳಿದುಕೊಂಡಿದ್ದೇನೆ.

ನಾನು ನನ್ನ ಹೆಸರಿನ ನಿಮಿತ್ತ ನನ್ನ ಕೋಪವನ್ನು ತಡೆ ಮಾಡಿದೆನು.

ನಾನು ನನ್ನ ಹೆಸರಿಗೆ ಕಳಂಕ ಬಾರದಂತೆ,

ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು.

ನಾನು ನಿನ್ನನ್ನು ಪರಿಶೋಧಿಸಿದ್ದೇನೆ.

ಆದರೆ ಬೆಳ್ಳಿಯಂತೆ ಅಲ್ಲ,

ಸಂಕಟದ ಕುಲುಮೆಯಿಂದ ನಿನ್ನನ್ನು ಆಯ್ದುಕೊಂಡಿದ್ದೇನೆ.

ನನಗಾಗಿಯೇ, ನನಗೋಸ್ಕರವೇ ಇದನ್ನು ಮಾಡುವೆನು.

ಏಕೆಂದರೆ ನನ್ನ ಹೆಸರು ಹೇಗೆ ಅಪವಿತ್ರವಾಗುವುದು?

ನನ್ನ ಮಹಿಮೆಯನ್ನು ನಾನು ಮತ್ತೊಬ್ಬನಿಗೆ ಸಲ್ಲಗೊಡಿಸೆನು.

ಇಸ್ರಾಯೇಲಿನ ಬಿಡುಗಡೆ

“ಯಾಕೋಬೇ, ನಾನು ಕರೆದ ಇಸ್ರಾಯೇಲೇ,

ನನ್ನ ಕಡೆಗೆ ಕಿವಿಗೊಡು.

ಆತನು ನಾನೇ,

ನಾನೇ ಮೊದಲನೆಯವನು, ನಾನೇ ಕಡೆಯವನು.

ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು,

ನನ್ನ ಬಲಗೈ ಆಕಾಶವನ್ನು ಹರಡಿತು,

ನಾನು ಅವುಗಳನ್ನು ಕರೆಯಲು,

ಅವು ಒಟ್ಟಾಗಿ ನಿಂತುಕೊಂಡವು.

“ನೀವೆಲ್ಲರೂ ಕೂಡಿಕೊಂಡು ಕೇಳಿರಿ.

ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು?

ಯೆಹೋವ ದೇವರು ಆಯ್ಕೆ ಮಾಡಿದ ಮಿತ್ರನು

ಬಾಬಿಲೋನಿನ ವಿರುದ್ಧ ತನ್ನ ಉದ್ದೇಶವನ್ನು ಪೂರೈಸುತ್ತಾನೆ.

ತನ್ನ ತೋಳು ಕಸ್ದೀಯರ ಮೇಲೆ ಇರುವುದು.

ನಾನೇ, ನಾನಾಗಿಯೇ ಮಾತನಾಡಿದ್ದೇನೆ.

ನಾನೇ ಅವನನ್ನು ಕರೆದದ್ದು;

ಅವನನ್ನು ನಾನೇ ಬರಮಾಡಿದ್ದೇನೆ.

ಅವನ ಮಾರ್ಗವು ಯಶಸ್ವಿಯಾಗುವುದು.

“ನನ್ನ ಸಮೀಪಕ್ಕೆ ಬಂದು ಇದನ್ನು ಕೇಳಿರಿ.

“ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ,

ಭೂಮಿಯು ಉಂಟಾದಂದಿನಿಂದ ಅಲ್ಲಿ ನಾನು ಇದ್ದೇನೆ.”

ಈಗ ಸಾರ್ವಭೌಮ ಯೆಹೋವ ದೇವರು

ತಮ್ಮ ಪವಿತ್ರಾತ್ಮರ ಸಮೇತ ನನ್ನನ್ನು ಕಳುಹಿಸಿದ್ದಾರೆ.

ನಿನ್ನ ವಿಮೋಚಕನೂ, ಇಸ್ರಾಯೇಲಿನ ಪರಿಶುದ್ಧನೂ

ಆಗಿರುವ ಯೆಹೋವ ದೇವರ ಮಾತಿದು,

“ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ,

ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಸುವವನೂ ಆದ

ನಾನೇ ನಿನ್ನ ಯೆಹೋವ ದೇವರು ಆಗಿದ್ದೇನೆ.

ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು!

ಆಗ ನಿನ್ನ ಸಮಾಧಾನವು ನದಿಯಂತೆಯೂ,

ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು,

ನಿನ್ನ ಸಂತಾನವು ಸಹ ಮರಳಿನಂತೆಯೂ,

ನಿನ್ನ ಮಕ್ಕಳು ಅಸಂಖ್ಯಾತ ಧಾನ್ಯಗಳಂತೆಯೂ ಇರುವರು.

ಅವರ ಹೆಸರುಗಳು ನನ್ನ ಸಮ್ಮುಖದಿಂದ,

ಅಳಿದುಹೋಗದೆ ಇರುವುದು.”

ಬಾಬಿಲೋನಿನಿಂದ ಹೊರಡಿರಿ.

ಕಸ್ದೀಯರ ಕಡೆಯಿಂದ ಓಡಿಹೋಗಿರಿ.

ಹರ್ಷಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ.

ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ.

“ಯೆಹೋವ ದೇವರು ತಮ್ಮ ಸೇವಕನಾದ ಯಾಕೋಬನ್ನು

ವಿಮೋಚಿಸಿದ್ದಾರೆ,” ಎಂದು ನೀವು ಹೇಳಿರಿ.

ದೇವರು ಅವರನ್ನು ಮರುಭೂಮಿಯಲ್ಲಿ ನಡಿಸಿದಾಗ, ಅವರಿಗೆ ದಾಹವಾಗಲಿಲ್ಲ.

ದೇವರು ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದರು.

ದೇವರು ಬಂಡೆಯನ್ನು ಸೀಳಲು,

ನೀರು ರಭಸದಿಂದ ಹೊರಗೆ ಬಂತು.

“ದುಷ್ಟರಿಗೆ ಸಮಾಧಾನವೇ ಇಲ್ಲ,”

ಎಂದು ಯೆಹೋವ ದೇವರು ನುಡಿಯುತ್ತಾರೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.