Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆಶಾಯ 29

ದಾವೀದನ ಪಟ್ಟಣಕ್ಕೆ ಕಷ್ಟ

ಅಯ್ಯೋ, ಅರೀಯೇಲೇ, ಅರೀಯೇಲೇ,

ದಾವೀದನು ವಾಸಿಸಿದ ಪಟ್ಟಣವೇ!

ವರುಷಕ್ಕೆ ವರುಷವನ್ನು ಕೂಡಿಸಿರಿ.

ನಿಮ್ಮ ಹಬ್ಬಗಳ ಚಕ್ರ ಮುಂದುವರಿಯಲಿ.

ಆದಾಗ್ಯೂ ನಾನು ಅರೀಯೇಲಿಗೆ ಇಕ್ಕಟ್ಟನ್ನು ಉಂಟುಮಾಡುವೆನು.

ಅಲ್ಲಿ ಕಷ್ಟವೂ, ದುಃಖವೂ ಇರುವುದು.

ಅವಳು ನನಗೆ ಬಲಿಪೀಠದ ಒಲೆಯಂತೆ ಇರುತ್ತಾಳೆ.

ಸುತ್ತಲೂ ದಂಡಿಳಿಸಿ ನಿನಗೆ ವಿರುದ್ಧವಾಗಿ ಕೋಟೆಗಳನ್ನು ಎಬ್ಬಿಸಿ,

ದಿಬ್ಬ ಹಾಕಿ ನಿನ್ನ ಮೇಲೆ ಮುತ್ತಿಗೆ ಹಾಕುವೆನು.

ಆಗ ನೀನು ಕುಗ್ಗಿ ಭೂಮಿಯೊಳಗಿಂದ ಮಾತನಾಡುವಿ.

ನಿನ್ನ ನುಡಿಯು ಧೂಳಿನೊಳಗಿಂದ ಸಣ್ಣ ಸ್ವರವಾಗಿ ಹೊರಡುವುದು.

ನಿನ್ನ ಸ್ವರವು ಭೂತದ ಹಾಗೆ ನೆಲದೊಳಗಿಂದ ಬರುವುದು.

ನಿನ್ನ ನುಡಿಯು ಧೂಳಿನೊಳಗಿಂದ ಪಿಸುಗುಟ್ಟುವುದು.

ಅದೂ ಅಲ್ಲದೆ ನಿನ್ನ ವೈರಿಗಳ ಗುಂಪು ಸೂಕ್ಷ್ಮವಾದ ಧೂಳಿನಂತಾಗುವುದು.

ಭಯಂಕರವಾದ ಸಮೂಹವು ಹಾರಿಹೋಗುವ ಹೊಟ್ಟಿನ ಹಾಗೆ ಇರುವುದು.

ಹೌದು, ಅದು ಕ್ಷಣಮಾತ್ರದಲ್ಲಿ ಫಕ್ಕನೆ ಆಗುವುದು.

ಸೇನಾಧೀಶ್ವರ ಯೆಹೋವ ದೇವರು

ಗುಡುಗಿನಿಂದಲೂ, ಮಹಾಶಬ್ದದಿಂದಲೂ, ಬಿರುಗಾಳಿ ಸುಳಿಗಾಳಿಯಿಂದಲೂ,

ದಹಿಸುವ ಅಗ್ನಿಜ್ವಾಲೆಯಿಂದಲೂ ಪ್ರತ್ಯಕ್ಷರಾಗುವರು.

ಅರೀಯೇಲಿನ ಮೇಲೆ ಹೋರಾಡಿ

ಅದಕ್ಕೂ ಅದರ ಕೋಟೆಗೂ ವಿರುದ್ಧವಾಗಿ ಯುದ್ಧಮಾಡಿ ಬಾಧಿಸುವ ಸಕಲ ಜನಾಂಗಗಳು

ರಾತ್ರಿಯ ದರ್ಶನದ

ಕನಸಿನಂತೆ ಮಾಯವಾಗುವುವು.

ಹಸಿದ ಮನುಷ್ಯನು ಕನಸು ಕಂಡು ಇಗೋ, ಉಣ್ಣುತ್ತೇನೆ ಎಂದುಕೊಂಡಂತಾಗುವುದು.

ಆದರೆ ಅವನು ಎಚ್ಚೆತ್ತಾಗ ಪ್ರಾಣ ತುಂಬಿದ ಹಾಗೆಯೂ,

ಬಾಯಾರಿದವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತೇನೆ ಎಂದುಕೊಂಡಂತಾಗುವುದು.

ಆದರೆ ಅವನು ಎಚ್ಚರವಾದಾಗ ಬಲಹೀನನಾಗಿದ್ದು,

ಪ್ರಾಣ ಆಶಿಸುವ ಹಾಗೆಯೇ ಚೀಯೋನ್ ಪರ್ವತಕ್ಕೆ ವಿರೋಧವಾಗಿ

ಯುದ್ಧಮಾಡುವ ಎಲ್ಲಾ ಜನಾಂಗಗಳ ಸಮೂಹವಿರುವುದು.

ತಾಮಸ ಮಾಡಿ ಆಶ್ಚರ್ಯಪಡಿರಿ.

ಕುರುಡು ಮಾಡಿಕೊಂಡು ದೃಷ್ಟಿಯಿಲ್ಲದವರಾಗಿರಿ

ಇವರು ಅಮಲೇರಿದ್ದಾರೆ. ಆದರೆ ದ್ರಾಕ್ಷಾರಸದಿಂದಲ್ಲ.

ಅವರು ಕೂಗಾಡುತ್ತಾರೆ, ಆದರೆ ಮದ್ಯದಿಂದಲ್ಲ.

ಯೆಹೋವ ದೇವರು ನಿಮ್ಮ ಮೇಲೆ ಗಾಢನಿದ್ರೆಯ ಆತ್ಮವನ್ನು ಹೊಯ್ದು,

ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾರೆ.

ಪ್ರವಾದಿಗಳನ್ನೂ, ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನು ಮುಚ್ಚಿದ್ದಾರೆ.

ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿದ ಗ್ರಂಥದ ವಾಕ್ಯಗಳ ಹಾಗಾಯಿತು. ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು, “ಇದನ್ನು ಓದು,” ಎಂದು ವಿನಂತಿಸಿದರೆ ಅವನು, “ಮುದ್ರೆ ಹಾಕಿದೆಯೆಲ್ಲಾ, ಆಗುವುದಿಲ್ಲ,” ಅನ್ನುವನು. ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು ನನಗೆ ಓದಲು ಬರುವುದಿಲ್ಲ ಅನ್ನುವನು.

ಕರ್ತರು ಹೇಳುವುದೇನೆಂದರೆ:

“ಈ ಜನರು ಬಾಯಿಂದ ನನ್ನನ್ನು ಸಮೀಪಿಸಿ,

ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ,

ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.

ಬಾಯಿಪಾಠವಾಗಿ ಕಲಿತಿರುವ ಮನುಷ್ಯರ ಆಜ್ಞೆಗೆ ಸರಿಯಾದ

ಭಯವನ್ನು ಮಾತ್ರ ನನ್ನಲ್ಲಿಟ್ಟಿದ್ದಾರೆ.

ಹೀಗಿರುವುದರಿಂದ, ನಾನು ಈ ಜನರ ಮಧ್ಯದಲ್ಲಿ ಅಧಿಕ ಆಶ್ಚರ್ಯವೂ

ಅದ್ಭುತವೂ ಆದ ಕಾರ್ಯವನ್ನು ಇನ್ನೂ ಮಾಡುವೆನು.

ಅವರ ಜ್ಞಾನಿಗಳ ಜ್ಞಾನವು ಅಳಿಯುವುದು.

ಅವರ ವಿವೇಕಿಗಳ ವಿವೇಕವು ಅಡಗಿಕೊಳ್ಳುವುದು.”

ತಮ್ಮ ಆಲೋಚನೆಗಳನ್ನು ಯೆಹೋವ ದೇವರಿಗೆ ಮರೆಮಾಡುವುದಕ್ಕೆ ಅಗಾಧದಲ್ಲಿ ಹೋಗಿ,

ನಮ್ಮನ್ನು ಯಾರು ನೋಡಿಯಾರು?

ನಮ್ಮನ್ನು ಯಾರು ತಿಳಿದಾರು? ಎಂದುಕೊಂಡು,

ಕತ್ತಲೆಯಲ್ಲೇ ತಮ್ಮ ಕೆಲಸವನ್ನು ನಡಿಸುವವರಿಗೆ ಕಷ್ಟ!

ಖಂಡಿತವಾಗಿಯೂ ನೀವು ತಲೆಕೆಳಗೆ ಮಾಡುವ ಸಂಗತಿಗಳು,

ಕುಂಬಾರನು ಜೇಡಿಮಣ್ಣಿನಂತೆ ಪರಿಗಣಿಸಲಾಗುವುದು!

ಉಂಟುಮಾಡಿದವನಿಗೆ ಉಂಟುಮಾಡಿದ್ದು,

“ನೀನು ನನ್ನನ್ನು ಉಂಟುಮಾಡಲಿಲ್ಲ,” ಎಂತಲೂ,

ಮಡಕೆ ಕುಂಬಾರನಿಗೆ,

“ನಿನಗೆ ಏನೂ ಗೊತ್ತಿಲ್ಲ,” ಎಂತಲೂ ಹೇಳಬಹುದೇ?

ಆದರೂ ಇನ್ನು ಸ್ವಲ್ಪಕಾಲದಲ್ಲಿ ಲೆಬನೋನ್ ಫಲವುಳ್ಳ ಹೊಲವಾಗಿದ್ದು,

ಆ ಫಲವುಳ್ಳ ಹೊಲವು ಅಡವಿಯಾಗಿ ಎಣಿಸಲ್ಪಡುವುದಿಲ್ಲವೋ?

ಆ ದಿನದಲ್ಲಿ ಕಿವುಡರು ಗ್ರಂಥದ ಮಾತುಗಳನ್ನು ಕೇಳುವರು

ಮತ್ತು ಕುರುಡರ ಕಣ್ಣುಗಳು ಕತ್ತಲೆಯೊಳಗಿಂದಲೂ,

ಅಂಧಕಾರದೊಳಗಿಂದಲೂ ಕಾಣುವುವು.

ದೀನರ ಸಂತೋಷವು ಯೆಹೋವ ದೇವರಲ್ಲಿ ಹೆಚ್ಚಾಗುವುವು.

ಮನುಷ್ಯರಲ್ಲಿ ಬಡವರು ಇಸ್ರಾಯೇಲಿನ ಪರಿಶುದ್ಧನಲ್ಲಿ ಹರ್ಷಿಸುವರು.

ಭಯಂಕರನು ಇಲ್ಲವಾಗುತ್ತಾನೆ.

ಅಪಹಾಸ್ಯ ಮಾಡುವವರು ಕಣ್ಮರೆಯಾಗುತ್ತಾರೆ.

ಕೇಡಿಗೆ ಕಾಯುವವರೆಲ್ಲರೂ ನಾಶವಾಗುತ್ತಾರೆ.

ಸುಳ್ಳುಸಾಕ್ಷಿ ಹೇಳಿ ತಪ್ಪುಹೊರಿಸುವವರು,

ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು,

ನೀತಿವಂತನಿಗೆ ನ್ಯಾಯ ತಪ್ಪಿಸುವವರು

ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲರಾಗುವರು.

ಆದ್ದರಿಂದ ಅಬ್ರಹಾಮನನ್ನು ವಿಮೋಚಿಸಿದ ಯೆಹೋವ ದೇವರು ಯಾಕೋಬಿನ ಮನೆತನದ ವಿಷಯವಾಗಿ ಹೇಳುವುದೇನೆಂದರೆ,

“ಈಗ ಯಾಕೋಬ್ಯರು ನಾಚಿಕೆಪಡುವುದಿಲ್ಲ.

ಅವನ ಮುಖವು ಕಳೆಗುಂದುವುದಿಲ್ಲ.

ಆದರೆ ನನ್ನ ಕೈಕೆಲಸವಾದ ಅವನ ಮಕ್ಕಳನ್ನು

ತನ್ನ ಮಧ್ಯದಲ್ಲಿ ಕಾಣುವಾಗ

ನನ್ನ ನಾಮವನ್ನು ಪರಿಶುದ್ಧವೆಂದೆಣಿಸಿ,

ಯಾಕೋಬಿನ ಪರಿಶುದ್ಧನನ್ನು ಪ್ರತಿಷ್ಠಿಸುವರು,

ಇಸ್ರಾಯೇಲಿನ ದೇವರಿಗೆ ಭಯಪಡುವರು.

ತಪ್ಪಿದ ಆತ್ಮವುಳ್ಳವರು ವಿವೇಕಿಗಳಾಗುವರು.

ಗೊಣಗುಟ್ಟುವವರು ಬೋಧನೆ ಕಲಿಯುವರು.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.