Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆಶಾಯ 27

ಇಸ್ರಾಯೇಲರ ಬಿಡುಗಡೆ

ಆ ದಿನದಲ್ಲಿ ಯೆಹೋವ ದೇವರು,

ತಮ್ಮ ಬಲವಾದ ಭೀಕರ ಖಡ್ಗದಿಂದ

ವೇಗವಾಗಿ ಓಡುವ ಲೆವಿಯಾತಾನ ಸರ್ಪವನ್ನೂ,

ಡೊಂಕಾಗಿ ಹರಿಯುವ ಲೆವಿಯಾತಾನ ಸರ್ಪವನ್ನೂ ದಂಡಿಸಿ,

ಸಮುದ್ರದಲ್ಲಿರುವ ಘಟಸರ್ಪವನ್ನೂ ಕೊಂದುಹಾಕುವರು.

ಆ ದಿನದಲ್ಲಿ,

ಫಲಭರಿತ ದ್ರಾಕ್ಷಿತೋಟದ ವಿಷಯವಾಗಿ ಹಾಡಿರಿ.

ಯೆಹೋವ ದೇವರಾದ ನಾನೇ ಅದನ್ನು ಕಾಯುತ್ತೇನೆ.

ಸತತವಾಗಿ ಅದಕ್ಕೆ ನೀರು ಹೊಯ್ಯುತ್ತಿದ್ದೇನೆ.

ಯಾರೂ ಅದಕ್ಕೆ ಕೇಡು ಮಾಡದ ಹಾಗೆ

ರಾತ್ರಿ ಹಗಲು ಅದನ್ನು ಕಾಯುತ್ತೇನೆ.

ರೌದ್ರವು ನನ್ನಲ್ಲಿ ಇಲ್ಲ.

ಯಾವನಾದರೂ ಮುಳ್ಳು ದತ್ತೂರಿಗಳನ್ನು

ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ,

ನಾನು ಅವುಗಳನ್ನು ಹಾದು ಹೋಗಿ, ಅವುಗಳನ್ನು ಒಟ್ಟಿಗೆ ಸುಡುವೆನು.

ಇಲ್ಲದಿದ್ದರೆ ಅವರು ನನ್ನ ಸಂಗಡ ಸಮಾಧಾನಮಾಡಿಕೊಳ್ಳುವ

ಹಾಗೆ ನನ್ನನ್ನು ಆಶ್ರಯಿಸಲಿ,

ನನ್ನೊಡನೆ ಸಮಾಧಾನ ಮಾಡಿಕೊಳ್ಳಲಿ.

ಮುಂದಿನ ಕಾಲದಲ್ಲಿ ಯಾಕೋಬು ಬೇರೂರುವುದು.

ಇಸ್ರಾಯೇಲು ಹೂ ಅರಳಿ ಚಿಗುರುವುದು.

ಭೂಲೋಕವನ್ನೆಲ್ಲಾ ಫಲದಿಂದ ತುಂಬಿಸುವನು.

ಆಕೆಯನ್ನು ಹೊಡೆದವರನ್ನು ಆತನು ಹೊಡೆದಂತೆ

ಯೆಹೋವ ದೇವರು ಆಕೆಯನ್ನು ಹೊಡೆದರೋ?

ಆಕೆಯನ್ನು ಕೊಂದವರು ಹತರಾದಂತೆ

ಆಕೆಯು ಸಂಹಾರವಾದಳೋ?

ಯುದ್ಧದಿಂದಲೂ ಸೆರೆಯಿಂದಲೂ ಆಕೆಯೊಂದಿಗೆ ತೃಪ್ತರಾಗಿರಿ.

ಆತನು ತನ್ನ ಕೋಪದ ಪೆಟ್ಟಿನಿಂದ ಪೂರ್ವದ ಬಿರುಗಾಳಿ ಬೀಸುವಾಗ ಆಗುವಂತೆ,

ಆಕೆಯನ್ನು ಹೊರಗೋಡಿಸುವನು.

ಹೀಗಿರುವದರಿಂದ ಯಾಕೋಬನು ಬಲಿಪೀಠಗಳ ಕಲ್ಲುಗಳನ್ನೆಲ್ಲಾ ಸುಣ್ಣದಂತೆ ಪುಡಿಪುಡಿಮಾಡಿ,

ಅಶೇರ ಸ್ತಂಭಗಳನ್ನೂ ಧೂಪವೇದಿಗಳನ್ನೂ ಇನ್ನು ಪ್ರತಿಷ್ಠಾಪಿಸದೆ ಹೋದರೆ

ಅದೇ ಯಾಕೋಬನ ಅಪರಾಧಕ್ಕೆ ಪ್ರಾಯಶ್ಚಿತ್ತವಾಗುವುದು

ಮತ್ತು ಅವನ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲವು ಇದೇ ಆಗಿದೆ.

ಕೋಟೆಯ ಪಟ್ಟಣವು ಹಾಳಾಗಿ ಕಾಡಿನಂತೆ

ಜನರಿಲ್ಲದೆ ಶೂನ್ಯ ನಿವಾಸ ಸ್ಥಾನವಾಗುವುದು.

ಅಲ್ಲಿ ದನಕರುಗಳು ಮೇದು ಮಲಗುವ ಗೋಮಾಳವಾಗಿದೆ.

ಅವು ಅಲ್ಲಿನ ಚಿಗುರುಗಳನ್ನು ತಿಂದುಬಿಡುವುವು.

ಅಲ್ಲಿನ ರೆಂಬೆಗಳು ಒಣಗಿ ಮುರಿದುಹೋಗಿವೆ.

ಸ್ತ್ರೀಯರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು.

ಏಕೆಂದರೆ ಇದು ವಿವೇಕವಿಲ್ಲದ ಜನ.

ಆದ್ದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವುದಿಲ್ಲ.

ಅವರ ಸೃಷ್ಟಿಕರ್ತನು ಅವರನ್ನು ಕರುಣಿಸುವುದಿಲ್ಲ.

ಇಸ್ರಾಯೇಲರೇ, ಯೆಹೋವ ದೇವರು ಯೂಫ್ರೇಟೀಸ್ ನದಿ ಮೊದಲುಗೊಂಡು ಈಜಿಪ್ಟ್ ದೇಶದ ನದಿಯವರೆಗೆ ಹೊಡೆಯುವರು, ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಕೂಡಿಸುವರು. ಆ ದಿನದಲ್ಲಿ ದೊಡ್ಡ ತುತೂರಿಯು ಊದಲಾಗುವುದು. ಆಗ ಅಸ್ಸೀರಿಯ ದೇಶದಲ್ಲಿ ಚದರಿಹೋದವರೂ, ಈಜಿಪ್ಟ್ ದೇಶದಲ್ಲಿ ಗಡೀಪಾರಾದವರೂ, ಯೆರೂಸಲೇಮಿನ ಪರಿಶುದ್ಧ ಪರ್ವತದ ಬಳಿಗೆ ಬಂದು ಯೆಹೋವ ದೇವರನ್ನು ಆರಾಧಿಸುವರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.