Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆಶಾಯ 25

ಯೆಹೋವ ದೇವರಿಗೆ ಸ್ತುತಿ

ಯೆಹೋವ ದೇವರೇ, ನೀವೇ ನನ್ನ ದೇವರು.

ನೀವು ಸತ್ಯ ಪ್ರಾಮಾಣಿಕತೆಗಳನ್ನು ಆಲೋಚಿಸಿ,

ಅನುಸರಿಸಿ ಆದಿಸಂಕಲ್ಪಗಳನ್ನು ನೆರವೇರಿಸುತ್ತಾ,

ಅದ್ಭುತಕಾರ್ಯಗಳನ್ನು ನಡೆಸಿದ ಕಾರಣ ನಿಮ್ಮನ್ನು ಉನ್ನತಪಡಿಸಿ,

ನಿಮ್ಮ ನಾಮವನ್ನು ಕೊಂಡಾಡುವೆನು.

ಏಕೆಂದರೆ ನೀವು ದುರ್ಗವನ್ನು ನಾಶಪಡಿಸಿ,

ಪಟ್ಟಣವನ್ನು ಹಾಳುದಿಬ್ಬವನ್ನಾಗಿಯೂ

ವಿದೇಶಿಯರ ಕೋಟೆಯನ್ನು ಯಾರೂ ಎಂದಿಗೂ

ಕಟ್ಟಬಾರದಂತೆ ಮಾಡಿದ್ದೀರಿ.

ಬಲಿಷ್ಠವಾದ ಜನಾಂಗವು ನಿಮ್ಮನ್ನು ಘನಪಡಿಸುವರು,

ಭಯಂಕರವಾದ ಜನರ ಪಟ್ಟಣವು ನಿಮಗೆ ಅಂಜುವುದು.

ನೀವು ದೀನರಿಗೆ ಕೋಟೆಯೂ,

ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣಾ ದುರ್ಗವೂ,

ಭೀಕರರ ಶ್ವಾಸವು ಬಿಸಿಲಿಗೆ ನೆರಳೂ,

ಗೋಡೆಗೆ ಬಡಿದು ಬಿಡುವ ಬಿರುಗಾಳಿಯಂತಿರುವಾಗ

ಬಿರುಗಾಳಿಗೋಸ್ಕರ ಆಶ್ರಯವೂ ಆಗಿದ್ದೀರಿ.

ಮೇಘವು ಒಣನೆಲದ ಕಾವನ್ನು ಆರಿಸುವ ಹಾಗೆ,

ನೀವು ವಿದೇಶಿಯರ ಗದ್ದಲವನ್ನು ಅಡಗಿಸುವಿರಿ;

ಮೋಡದ ನೆರಳಿನಿಂದ ಬಿಸಿಲು ತಡೆಯುವ ಹಾಗೆಯೇ,

ನೀವು ಕ್ರೂರಿಗಳ ಉತ್ಸಾಹಗಾನವನ್ನು ನಿಲ್ಲಿಸಿಬಿಡುವಿರಿ.

ಸೇನಾಧೀಶ್ವರ ಯೆಹೋವ ದೇವರು ಈ ಪರ್ವತದಲ್ಲಿ ಎಲ್ಲಾ ಜನಗಳಿಗೆ

ಸಾರವತ್ತಾದ ಕೊಬ್ಬಿದ ಔತಣವನ್ನೂ,

ಮಡ್ಡಿಗಟ್ಟಿದ ದ್ರಾಕ್ಷಾರಸದ ಔತಣವನ್ನೂ,

ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸವನ್ನೂ ಸಿದ್ಧಮಾಡುವರು.

ಸಮಸ್ತ ಜನಾಂಗಗಳನ್ನು ಮುಚ್ಚಿರುವ ಪರದೆಯನ್ನೂ,

ಸಕಲ ದೇಶದವರ ಮೇಲೆ ಹರಡಿರುವ ತೆರೆಯನ್ನೂ

ಇದೇ ಪರ್ವತದಲ್ಲಿ ತೆಗೆದುಹಾಕುವರು.

ಅವರು ಮರಣವನ್ನು ಜಯದಲ್ಲಿ ನುಂಗಿಬಿಡುವರು.

ಸಾರ್ವಭೌಮ ಯೆಹೋವ ದೇವರು ಎಲ್ಲಾ ಮುಖಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವರು.

ತಮ್ಮ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕುವರು.

ಯೆಹೋವ ದೇವರೇ ಇದನ್ನು ನುಡಿದಿದ್ದಾರೆ.

ಆ ದಿನದಲ್ಲಿ ಜನರು,

“ಇಗೋ, ಇವರೇ ನಮ್ಮ ದೇವರು,

ನಾವು ಇವರನ್ನೇ ನಂಬಿದ್ದೇವೆ. ಇವರೇ ನಮ್ಮನ್ನು ರಕ್ಷಿಸುವರು.

ಇವರೇ ಯೆಹೋವ ದೇವರು, ನಾವು ಇವರನ್ನೇ ನಂಬಿದ್ದೇವೆ,

ನಾವು ಇವರ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷಪಡುವೆವು,”

ಎಂದು ಹೇಳುವರು.

ಈ ಪರ್ವತದಲ್ಲಿ ಯೆಹೋವ ದೇವರ ಕೈ ವಿಶ್ರಮಿಸಿಕೊಳ್ಳುವುದು.

ಒಣಹುಲ್ಲನ್ನು ತಿಪ್ಪೆಗುಂಡಿಯಲ್ಲಿ ತುಳಿಯುವಂತೆ

ಮೋವಾಬು ತುಳಿತಕ್ಕೆ ಈಡಾಗುವುದು.

ಈಜುವವನು ಈಜುವುದಕ್ಕೆ ಕೈಗಳನ್ನು ಹರಡಿಕೊಂಡ ಹಾಗೆ,

ಅವರು ತಮ್ಮ ಕೈಗಳನ್ನು ಚಾಚುವರು.

ಆದರೆ ದೇವರು ಅವರ ಗರ್ವವನ್ನೂ ಅವರ

ಕೈ ಕೆಲಸವನ್ನೂ ತಗ್ಗಿಸಿಬಿಡುವರು.

ದುರ್ಗದಂತೆ ಎತ್ತರವಾಗಿರುವ

ನಿನ್ನ ಕೋಟೆಗಳನ್ನು ಕೆಡವಿ,

ತಗ್ಗಿಸಿ, ನೆಲಸಮಮಾಡುವರು,

ಅದು ಧೂಳುಪಾಲಾಗುವುದು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.