Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಹೋಶೇಯ 5
ಇಸ್ರಾಯೇಲರ ವಿರುದ್ಧ ತೀರ್ಪು
“ಯಾಜಕರೇ, ಇದನ್ನು ನೀವು ಕೇಳಿರಿ;
ಇಸ್ರಾಯೇಲಿನ ಮನೆತನದವರೇ ಕೇಳಿಸಿಕೊಳ್ಳಿರಿ;
ಅರಸನ ಮನೆಯವರೇ ಕಿವಿಗೊಡಿರಿ.
ನೀವು ಮಿಚ್ಪದಲ್ಲಿ ಉರುಲಾಗಿಯೂ,
ತಾಬೋರಿನ ಮೇಲೆ ಒಡ್ಡಿದ ಬಲೆಯಾಗಿಯೂ ಇದ್ದ ಕಾರಣ
ನಿಮಗೆ ವಿರುದ್ಧವಾಗಿ ಈ ನ್ಯಾಯತೀರ್ಪು ಬಂದಿದೆ.
ನನಗೆ ತಿರುಗಿಬಿದ್ದವರು ಅಗಾಧವಾದ ಕೊಲೆಯನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ.
ಆದರೂ ನಾನು ಅವರೆಲ್ಲರನ್ನು ಶಿಕ್ಷಿಸುವವನಾಗಿದ್ದೇನೆ.
ನಾನು ಎಫ್ರಾಯೀಮನ್ನು ಬಲ್ಲೆನು,
ಇಸ್ರಾಯೇಲು ನನಗೆ ಮರೆಯಾದದ್ದಲ್ಲ.
ಏಕೆಂದರೆ ಎಫ್ರಾಯೀಮೇ, ನೀನು ಈಗಲೇ ವ್ಯಭಿಚಾರ ಮಾಡಲು ತಿರುಗಿಕೊಂಡಿದ್ದೀ.
ಇಸ್ರಾಯೇಲು ಸಹ ಅಪವಿತ್ರವಾಯಿತು.
“ಅವರು ತಮ್ಮ ದೇವರ ಬಳಿಗೆ ತಿರುಗಿಕೊಳ್ಳದಂತೆ,
ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ.
ವ್ಯಭಿಚಾರದ ಆತ್ಮವು ಅವರ ಹೃದಯದಲ್ಲಿದೆ.
ಅವರು ಯೆಹೋವ ದೇವರನ್ನು ಸ್ವೀಕರಿಸಿಕೊಳ್ಳುವುದಿಲ್ಲ.
ಇಸ್ರಾಯೇಲಿನ ಗರ್ವವು ಅವರ ಮುಖದ ಮುಂದೆ ಸಾಕ್ಷಿಕೊಡುತ್ತದೆ.
ಇಸ್ರಾಯೇಲು ಮತ್ತು ಎಫ್ರಾಯೀಮು ತಮ್ಮ ಪಾಪದಲ್ಲಿ ಎಡವಿ ಬೀಳುವವು.
ಯೆಹೂದವು ಸಹ ಅವರೊಂದಿಗೆ ಬೀಳುವುದು.
ಅವರು ಯೆಹೋವ ದೇವರನ್ನು
ಹುಡುಕುವುದಕ್ಕೆ ತಮ್ಮ ದನಕುರಿಗಳೊಂದಿಗೂ ಹೋಗುವರು.
ಆದರೆ ಆತನು ಅವರಿಂದ ತನ್ನನ್ನು ಹಿಂದೆಗೆದುಕೊಂಡಿದ್ದರಿಂದ,
ಅವರು ಆತನನ್ನು ಕಾಣುವುದೇ ಇಲ್ಲ.
ಅವರು ಯೆಹೋವ ದೇವರಿಗೆ ಅಪನಂಬಿಗಸ್ತರಾಗಿದ್ದಾರೆ.
ಅವರು ವ್ಯಭಿಚಾರದ ಮಕ್ಕಳನ್ನು ಪಡೆದಿದ್ದಾರೆ.
ಅವರು ತಮ್ಮ ಅಮಾವಾಸ್ಯೆ ಹಬ್ಬಗಳನ್ನು ಆಚರಿಸಿದಾಗ,
ಅವರ ಹೊಲಗಳು ನುಂಗಿಬಿಡಲಾಗುವವು.
“ಗಿಬೆಯದಲ್ಲಿ ತುತೂರಿಯನ್ನೂ
ರಾಮದಲ್ಲಿ ಕೊಂಬನ್ನೂ ಊದಿರಿ.
ಬೆನ್ಯಾಮೀನೇ, ನಿನ್ನ ಹಿಂದೆ ನೋಡು!
ಬೇತಾವೆನಿನಲ್ಲಿ ಗಟ್ಟಿಯಾಗಿ ಕೂಗು.
ಎಫ್ರಾಯೀಮು ಗದರಿಸುವ
ದಿವಸದಲ್ಲೇ ಹಾಳಾಗುವುದು.
ಇಸ್ರಾಯೇಲಿನ ಗೋತ್ರಗಳಲ್ಲಿ
ನಾನು ನಿಶ್ಚಯವಾಗಿ ಆಗುವಂಥದ್ದನ್ನೇ ತಿಳಿಸಿದ್ದೇನೆ.
ಯೆಹೂದದ ನಾಯಕರು
ಮೇರೆಗಳನ್ನು ಸರಿಸುವವರ ಹಾಗೆ ಇದ್ದರು.
ಅವರ ಮೇಲೆ,
ನೀರಿನ ಪ್ರವಾಹದಂತೆ ನನ್ನ ಕೋಪವನ್ನು ಸುರಿಸುವೆನು.
ಎಫ್ರಾಯೀಮು, ವಿಗ್ರಹಗಳನ್ನು ಅನುಸರಿಸಲು ಮನಸ್ಸು ಮಾಡಿದ ಕಾರಣ,
ಅವನು ನ್ಯಾಯತೀರ್ಪಿಗೆ ಗುರಿಯಾಗಿ, ಹಿಂಸೆಗೆ ಒಳಗಾದನು.
ನಾನು ಎಫ್ರಾಯೀಮಿಗೆ ನುಸಿಯ ಹಾಗೆಯೂ,
ಯೆಹೂದದ ಮನೆತನದವರಿಗೆ ಕೊಳೆಯುವಿಕೆಯ ಹಾಗೆಯೂ ಇರುವೆನು.
“ಎಫ್ರಾಯೀಮು ತನ್ನ ರೋಗವನ್ನು
ಯೆಹೂದವು ತನ್ನ ಗಾಯವನ್ನು ನೋಡಿದಾಗ,
ಎಫ್ರಾಯೀಮ್ ಅಸ್ಸೀರಿಯಕ್ಕೆ ತಿರುಗಿ,
ಸಹಾಯಕ್ಕಾಗಿ ಮಹಾ ಅರಸನ ಬಳಿಗೆ ಕಳುಹಿಸಿತು.
ಆದರೆ ನಿಮ್ಮನ್ನು ಗುಣಪಡಿಸಲು
ಅವನು ಶಕ್ತನಲ್ಲ.
ನಿಮ್ಮ ಗಾಯವನ್ನು ಗುಣಪಡಿಸಲಾರನು.
ಏಕೆಂದರೆ ನಾನು ಎಫ್ರಾಯೀಮಿಗೆ ಸಿಂಹದ ಹಾಗೆಯೂ,
ಯೆಹೂದದ ಮನೆತನದವರಿಗೆ ಪ್ರಾಯದ ಸಿಂಹದ ಹಾಗೆಯೂ ಇರುವೆನು.
ನಾನೇ ಅವರನ್ನು ಸೀಳಿಬಿಟ್ಟು ಹೋಗುವೆನು.
ನಾನು ಎತ್ತಿಕೊಂಡು ಹೋಗಲು, ಅವರನ್ನು ಯಾರೂ ಬಿಡಿಸಲಾರರು.
ಅಪರಾಧಗಳನ್ನು ಅರಿಕೆಮಾಡಿ,
ನನ್ನ ಮುಖವನ್ನು ಹುಡುಕುವವರೆಗೂ,
ನಾನು ತಿರುಗಿಕೊಂಡು ನನ್ನ ಗುಹೆಗೆ ಹೋಗುವೆನು.
ಅವರ ಕಷ್ಟದಲ್ಲಿ
ಅವರು ನನ್ನನ್ನು ಬೇಗ ಹುಡುಕುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.