Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಆದಿಕಾಂಡ 46

ಯಾಕೋಬನು ಈಜಿಪ್ಟಿಗೆ ಹೋದದ್ದು

ಇಸ್ರಾಯೇಲನು ತನಗಿದ್ದದ್ದನ್ನೆಲ್ಲಾ ತೆಗೆದುಕೊಂಡು ಬೇರ್ಷೆಬಕ್ಕೆ ಬಂದು, ತನ್ನ ತಂದೆ ಇಸಾಕನ ದೇವರಿಗೆ ಬಲಿಗಳನ್ನು ಅರ್ಪಿಸಿದನು.

ದೇವರು ಇಸ್ರಾಯೇಲನಿಗೆ ರಾತ್ರಿಯ ದರ್ಶನದಲ್ಲಿ ಮಾತನಾಡಿ, “ಯಾಕೋಬನೇ, ಯಾಕೋಬನೇ,” ಎಂದರು.

ಅದಕ್ಕವನು, “ಇಗೋ, ಇದ್ದೇನೆ,” ಎಂದನು.

ದೇವರು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು. ನೀನು ಈಜಿಪ್ಟಿಗೆ ಹೋಗುವುದಕ್ಕೆ ಭಯಪಡಬೇಡ. ಏಕೆಂದರೆ ಅಲ್ಲಿ ನಾನು ನಿನ್ನನ್ನು ದೊಡ್ಡ ಜನಾಂಗವಾಗಮಾಡುವೆನು. ನಾನೇ ನಿನ್ನ ಸಂಗಡ ಈಜಿಪ್ಟಿಗೆ ಹೋಗುವೆನು. ನಾನು ನಿಶ್ಚಯವಾಗಿ ನಿನ್ನನ್ನು ಕಾನಾನಿಗೆ ತಿರುಗಿ ಬರಮಾಡುವೆನು. ಯೋಸೇಫನು ನಿನ್ನ ಅಂತಿಮ ಕಾಲದಲ್ಲಿ ನೀನು ಕಣ್ಣುಮುಚ್ಚುವಾಗ ಇರುವನು,” ಎಂದನು.

ಆಗ ಯಾಕೋಬನು ಎದ್ದು ಬೇರ್ಷೆಬದಿಂದ ಹೊರಟನು. ಆಗ ಇಸ್ರಾಯೇಲರು ತಮ್ಮ ತಂದೆ ಯಾಕೋಬನನ್ನೂ, ತಮ್ಮ ಮಕ್ಕಳನ್ನೂ, ತಮ್ಮ ಹೆಂಡತಿಯರನ್ನೂ ಫರೋಹನು ಕಳುಹಿಸಿದ ರಥಗಳಲ್ಲಿ ಕೂರಿಸಿಕೊಂಡು ಹೋದರು. ಅವರು ತಮ್ಮ ಪಶುಗಳನ್ನೂ ಕಾನಾನ್ ದೇಶದಲ್ಲಿ ತಾವು ಸಂಪಾದಿಸಿದ ತಮ್ಮ ಸಂಪತ್ತನ್ನೂ ತೆಗೆದುಕೊಂಡು ಈಜಿಪ್ಟಿಗೆ ಬಂದರು. ಯಾಕೋಬನು ತನ್ನ ಕುಟುಂಬ ಸಮೇತವಾಗಿ ಬಂದನು. ಅವನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮೊಕ್ಕಳನ್ನೂ, ಅಂತೂ ತನ್ನ ಇಡೀ ಕುಟುಂಬದವರೆಲ್ಲರನ್ನೂ ತನ್ನೊಂದಿಗೆ ಈಜಿಪ್ಟಿಗೆ ಕರೆದುಕೊಂಡು ಹೋದನು.

ಈಜಿಪ್ಟಿಗೆ ಬಂದ ಇಸ್ರಾಯೇಲರ ಮಕ್ಕಳು ಎಂದರೆ, ಯಾಕೋಬನ ಹಾಗೂ ಅವನ ಸಂತತಿಯರ ಹೆಸರುಗಳು:

ಯಾಕೋಬನ ಚೊಚ್ಚಲ ಮಗ ರೂಬೇನನು.

ರೂಬೇನನ ಪುತ್ರರು:

ಹನೋಕ್, ಪಲ್ಲೂ, ಹೆಚ್ರೋನ್ ಮತ್ತು ಕರ್ಮೀ ಎಂಬುವರು.

ಸಿಮೆಯೋನನ ಮಕ್ಕಳು:

ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯಳ ಮಗನಾದ ಸೌಲ ಎಂಬುವರು.

ಲೇವಿಯ ಪುತ್ರರು:

ಗೇರ್ಷೋನ್, ಕೊಹಾತ್, ಮೆರಾರೀ ಎಂಬುವರು.

ಯೆಹೂದನ ಮಕ್ಕಳು:

ಏರ್, ಓನಾನ್, ಶೇಲಹ, ಪೆರೆಚ್ ಮತ್ತು ಜೆರಹ. ಆದರೆ ಏರನೂ, ಓನಾನನೂ ಕಾನಾನ್ ದೇಶದಲ್ಲಿ ಸತ್ತರು.

ಪೆರೆಚನ ಮಕ್ಕಳು:

ಹೆಚ್ರೋನ್ ಮತ್ತು ಹಾಮೂಲ್ ಎಂಬುವರು.

ಇಸ್ಸಾಕಾರನ ಮಕ್ಕಳು:

ತೋಲಾ, ಪುವ್ವಾ, ಯೋಬ್ ಮತ್ತು ಶಿಮ್ರೋನ್ ಎಂಬುವರು.

ಜೆಬುಲೂನನ ಮಕ್ಕಳು:

ಸೆರೆದ್, ಏಲೋನ್, ಯಹಲೇಲ್ ಎಂಬುವರು.

ಇವರು ಲೇಯಳ ಮಕ್ಕಳು. ಆಕೆಯು ಇವರನ್ನೂ, ತನ್ನ ಮಗಳಾದ ದೀನಳನ್ನೂ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹೆತ್ತಳು. ಅವನ ಪುತ್ರಪುತ್ರಿಯರೆಲ್ಲಾ ಸೇರಿ ಒಟ್ಟು ಮೂವತ್ತು ಮೂರು ಮಂದಿ.

ಗಾದನ ಮಕ್ಕಳು:

ಚಿಫ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ ಮತ್ತು ಅರೇಲೀ ಎಂಬುವರು.

ಆಶೇರನ ಮಕ್ಕಳು:

ಇಮ್ನಾ, ಇಷ್ವಾ, ಇಷ್ವೀ, ಬೆರೀಯ ಮತ್ತು ಅವರ ಸಹೋದರಿಯಾದ ಸೆರಹ.

ಬೆರೀಗನ ಪುತ್ರರು:

ಹೆಬೆರ, ಮಲ್ಕೀಯೇಲ್ ಎಂಬುವರು.

ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಮಕ್ಕಳು ಇವರೇ. ಈಕೆಯಿಂದ ಯಾಕೋಬನಿಗಾದ ಮಕ್ಕಳು ಮತ್ತು ಮೊಮ್ಮಕ್ಕಳು ಒಟ್ಟು ಹದಿನಾರು ಮಂದಿ.

ಯಾಕೋಬನ ಹೆಂಡತಿಯಾದ ರಾಹೇಲಳ ಪುತ್ರರು:

ಯೋಸೇಫ್, ಬೆನ್ಯಾಮೀನ್ ಎಂಬುವರು.

ಯೋಸೇಫನಿಗೆ ಈಜಿಪ್ಟ್ ದೇಶದಲ್ಲಿ ಮಕ್ಕಳು ಹುಟ್ಟಿದರು. ಓನ್ ಪಟ್ಟಣದ1 ಯಾಜಕನಾಗಿರುವ ಪೋಟೀಫೆರನ ಮಗಳಾದ ಆಸನತ್ ಮನಸ್ಸೆಯನ್ನೂ, ಎಫ್ರಾಯೀಮನನ್ನೂ ಅವನಿಗೆ ಹೆತ್ತಳು.

ಬೆನ್ಯಾಮೀನನ ಪುತ್ರರು:

ಬೆಳ, ಬೆಕೆರ್, ಅಷ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್ ಮತ್ತು ಆರ್ದ್ ಎಂಬುವರು.

ಇವರು ಯಾಕೋಬನಿಗೆ ಹುಟ್ಟಿದ ರಾಹೇಲಳ ಪುತ್ರರು. ಎಲ್ಲರೂ ಕೂಡಿ ಹದಿನಾಲ್ಕು ಮಂದಿ.

ದಾನನ ಮಗನು:

ಹುಶೀಮನು.

ನಫ್ತಾಲಿಯ ಪುತ್ರರು:

ಯಹಚೇಲ, ಗೂನೀ, ಯೇಚೆರ್, ಶಿಲ್ಲೇಮ್ ಎಂಬುವರು.

ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟಿದ್ದ ಬಿಲ್ಹಳ ಪುತ್ರರು. ಇವರನ್ನು ಆಕೆಯು ಯಾಕೋಬನಿಗೆ ಹೆತ್ತಳು. ಇವರು ಎಲ್ಲರೂ ಕೂಡಿ ಏಳುಮಂದಿ.

ಯಾಕೋಬನ ಪುತ್ರರ ಹೆಂಡತಿಯರಲ್ಲದೆ, ಯಾಕೋಬನ ಸಂಗಡ ಈಜಿಪ್ಟಿಗೆ ಹೋದವರು ಒಟ್ಟು ಅರವತ್ತಾರು ಮಂದಿ. ಅವರಲ್ಲದೆ ಈಜಿಪ್ಟಿನಲ್ಲಿ ಯೋಸೇಫನಿಗೆ ಇಬ್ಬರು ಪುತ್ರರು ಹುಟ್ಟಿದರು. ಯಾಕೋಬನ ಮನೆಯವರಾಗಿ ಈಜಿಪ್ಟಿಗೆ ಹೋದ ಜನರೆಲ್ಲಾ ಸೇರಿ ಒಟ್ಟು ಎಪ್ಪತ್ತು ಮಂದಿ.

ಇದಲ್ಲದೆ ಗೋಷೆನ್ ಪ್ರಾಂತಕ್ಕೆ ಮಾರ್ಗವನ್ನು ತೋರಿಸುವಂತೆ ಯಾಕೋಬನು ಯೆಹೂದನನ್ನು ತನ್ನ ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಪ್ರಾಂತಕ್ಕೆ ಬಂದು ಸೇರಿದರು. ಆಗ ಯೋಸೇಫನು ತನ್ನ ರಥವನ್ನು ಸಿದ್ಧಮಾಡಿಕೊಂಡು, ತನ್ನ ತಂದೆ ಇಸ್ರಾಯೇಲನಿಗೆ ಎದುರಾಗಿ ಗೋಷೆನಿಗೆ ಹೋದನು. ಯೋಸೇಫನು ತನ್ನ ತಂದೆಯನ್ನು ಸಂಧಿಸಿ, ಅಪ್ಪಿಕೊಂಡು, ಬಹಳ ಹೊತ್ತಿನವರೆಗೆ ಅತ್ತನು.

ಆಗ ಇಸ್ರಾಯೇಲನು ಯೋಸೇಫನಿಗೆ, “ನಿನ್ನ ಮುಖವನ್ನು ಕಂಡಿದ್ದರಿಂದ ಇನ್ನು ನಾನು ಮರಣ ಹೊಂದಲು ಸಿದ್ಧನಾಗಿದ್ದೇನೆ. ನೀನು ಇನ್ನೂ ಜೀವದಿಂದ ಇದ್ದೀಯೆ,” ಎಂದನು.

ಯೋಸೇಫನು ತನ್ನ ಸಹೋದರರಿಗೂ, ತನ್ನ ತಂದೆಯ ಮನೆಯವರಿಗೂ, “ನಾನು ಹೋಗಿ ಫರೋಹನಿಗೆ, ಕಾನಾನ್ ದೇಶದಲ್ಲಿದ್ದ ನನ್ನ ಸಹೋದರರೂ, ನನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ. ಅವರು ಕುರಿಕಾಯುವವರು, ಅವರಿಗೆ ಪಶುಗಳು ಇವೆ. ತಮ್ಮ ಕುರಿದನಗಳನ್ನೂ, ತಮಗಿದ್ದದ್ದೆಲ್ಲವನ್ನೂ ತೆಗೆದುಕೊಂಡು ಬಂದಿದ್ದಾರೆ, ಎಂದು ಹೇಳುವೆನು. ಫರೋಹನು ನಿಮ್ಮನ್ನು ಕರೆಯಿಸಿ, ‘ನಿಮ್ಮ ಕೆಲಸವೇನು?’ ಎಂದು ಕೇಳುವನು. ನೀವು ಅವನಿಗೆ, ‘ಚಿಕ್ಕಂದಿನಿಂದ ಇಂದಿನವರೆಗೂ ನಿನ್ನ ದಾಸರಾದ ನಾವೂ ನಮ್ಮ ಪೂರ್ವಿಕರೂ ಪಶುಗಳನ್ನು ಕಾಯುವವರಾಗಿದ್ದೇವೆ,’ ಎಂದು ಹೇಳಬೇಕು. ಏಕೆಂದರೆ ಕುರಿ ಕಾಯುವವರೆಲ್ಲಾ ಈಜಿಪ್ಟಿನವರಿಗೆ ಅಸಹ್ಯವಾಗಿದ್ದರಿಂದ, ನೀವು ಗೋಷೆನ್ ಪ್ರಾಂತದಲ್ಲಿ ವಾಸವಾಗಿರುವಂತೆ ನೇಮಿಸುವನು,” ಎಂದನು.

Source notes (1)
  1. Footnote ಓನ್ ಅದು, ಸೂರ್ಯನ ಪಟ್ಟಣ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.