Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಆದಿಕಾಂಡ 32

ಯಾಕೋಬನು ಏಸಾವನನ್ನು ಸಂದರ್ಶಿಸಲು ಸಿದ್ಧತೆ

ಅನಂತರ ಯಾಕೋಬನು ತನ್ನ ಮಾರ್ಗವಾಗಿ ಹೋಗುತ್ತಿದ್ದಾಗ, ದೇವದೂತರು ಅವನ ಎದುರಿಗೆ ಬಂದರು. ಯಾಕೋಬನು ಅವರನ್ನು ನೋಡಿದಾಗ, “ಇದು ದೇವರ ಸೈನ್ಯ,” ಎಂದು ಹೇಳಿ, ಆ ಸ್ಥಳಕ್ಕೆ ಮಹನಯಿಮ್1 ಎಂದು ಹೆಸರಿಟ್ಟನು.

ಯಾಕೋಬನು ಎದೋಮ್ಯರ ದೇಶವಾದ ಸೇಯೀರನ ಸೀಮೆಯಲ್ಲಿರುವ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ತನ್ನ ಮುಂದಾಗಿ ಕಳುಹಿಸಿದನು. ಕಳುಹಿಸುವಾಗ ಅವರಿಗೆ, “ನನ್ನ ಯಜಮಾನನಾದ ಏಸಾವನಿಗೆ ನೀವು ಹೀಗೆ ಹೇಳಬೇಕು: ‘ನಿನ್ನ ದಾಸನಾದ ಯಾಕೋಬನು ಹೀಗೆ ಹೇಳುತ್ತಾನೆ: ಲಾಬಾನನ ಸಂಗಡ ನಾನು ಇಲ್ಲಿಯವರೆಗೆ ಪ್ರವಾಸಿಯಾಗಿದ್ದೆನು. ಈಗ ನನಗೆ ಎತ್ತು, ಕತ್ತೆ, ಕುರಿಗಳು, ದಾಸದಾಸಿಯರು ಇದ್ದಾರೆ. ನಾನು ನಿನ್ನ ದೃಷ್ಟಿಯಲ್ಲಿ ದಯೆ ಹೊಂದುವಂತೆ ನಾನು ಈ ಸಂದೇಶವನ್ನು ನನ್ನ ಯಜಮಾನನಾದ ನಿಮಗೆ ತಿಳಿಸುವುದಕ್ಕಾಗಿ ಕಳುಹಿಸಿದ್ದೇನೆ,’ ಎಂದು ಹೇಳಿರಿ,” ಎಂದನು.

ಆಗ ದೂತರು ಯಾಕೋಬನ ಬಳಿಗೆ ಹಿಂದಿರುಗಿ ಬಂದು, “ನಾವು ನಿನ್ನ ಸಹೋದರ ಏಸಾವನ ಬಳಿಗೆ ಹೋಗಿ ಬಂದಿದ್ದೇವೆ; ಅವನು ನಾನೂರು ಮಂದಿಯನ್ನು ಕರೆದುಕೊಂಡು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಿದ್ದಾನೆ,” ಎಂದರು.

ಆಗ ಯಾಕೋಬನು ಬಹಳವಾಗಿ ಭಯಪಟ್ಟು, ತನ್ನ ಸಂಗಡ ಇದ್ದ ಜನರನ್ನೂ, ಕುರಿಗಳನ್ನೂ, ದನಗಳನ್ನೂ, ಒಂಟೆಗಳನ್ನೂ ಎರಡು ಗುಂಪುಗಳಾಗಿ2 ವಿಭಾಗಿಸಿದನು. ಏಕೆಂದರೆ, “ಏಸಾವನು ಒಂದು ಗುಂಪಿನ ಮೇಲೆ ದಾಳಿಮಾಡಿದರೆ, ಉಳಿದ ಗುಂಪು ತಪ್ಪಿಸಿಕೊಂಡು ಹೋಗಬಹುದು,” ಎಂದುಕೊಂಡನು.

ಇದಲ್ಲದೆ ಯಾಕೋಬನು, “ನನ್ನ ತಂದೆ ಅಬ್ರಹಾಮನ ದೇವರೇ, ನನ್ನ ತಂದೆ ಇಸಾಕನ ದೇವರೇ, ನಿಮ್ಮ ದೇಶಕ್ಕೂ, ನಿನ್ನ ಬಂಧುಗಳ ಬಳಿಗೂ ಹಿಂದಿರುಗಿ ಹೋಗು. ಆಗ ನಾನು ನಿನಗೆ ಒಳ್ಳೆಯದನ್ನು ಮಾಡುವೆನು ಎಂದು ನನಗೆ ಹೇಳಿದ ಯೆಹೋವ ದೇವರೇ, ನೀವು ನಿಮ್ಮ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ, ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಏಕೆಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ, ನನ್ನ ಕೈಯಲ್ಲಿ ಕೋಲು ಮಾತ್ರವೇ ಇತ್ತು, ಈಗ ನನಗೆ ಎರಡು ಗುಂಪುಗಳಿವೆ. ನನ್ನ ಅಣ್ಣ ಏಸಾವನ ಕೈಯಿಂದ ನನ್ನನ್ನು ತಪ್ಪಿಸಿರಿ. ಏಕೆಂದರೆ ಅವನು ಬಂದು ನನ್ನನ್ನೂ, ಮಕ್ಕಳೊಂದಿಗೆ ತಾಯಂದಿರನ್ನೂ, ದಾಳಿಮಾಡುವನು ಎಂದು ನಾನು ಅವನಿಗೆ ಭಯಪಡುತ್ತೇನೆ. ‘ನಿನಗೆ ಖಂಡಿತವಾಗಿ ಒಳ್ಳೆಯದನ್ನು ಮಾಡುವೆನು ಮತ್ತು ನಿನ್ನ ಸಂತತಿಯನ್ನು ಎಣಿಸುವುದಕ್ಕಾಗದ ಸಮುದ್ರದ ಮರಳಿನ ಹಾಗೆ ಮಾಡುವೆನು,’ ಎಂದು ನನಗೆ ಹೇಳಿದ್ದೀರಲ್ಲಾ?” ಎಂದನು.

ಯಾಕೋಬನು ಆ ರಾತ್ರಿ ಅಲ್ಲೇ ಕಳೆದನು. ತಾನು ತಂದದ್ದರಲ್ಲಿ ಕೆಲವನ್ನು ಅವನ ಅಣ್ಣ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. ಅವು ಯಾವುವೆಂದರೆ, ಇನ್ನೂರು ಮೇಕೆಗಳು, ಇಪ್ಪತ್ತು ಹೋತಗಳು, ಇನ್ನೂರು ಕುರಿಗಳು, ಇಪ್ಪತ್ತು ಟಗರುಗಳು, ಹಾಲು ಕೊಡುವ ಮೂವತ್ತು ಒಂಟೆಗಳು, ಅವುಗಳ ಮರಿಗಳು, ನಲವತ್ತು ಆಕಳುಗಳು, ಹತ್ತು ಹೋರಿಗಳು, ಇಪ್ಪತ್ತು ಹೆಣ್ಣು ಕತ್ತೆಗಳು, ಹತ್ತು ಗಂಡುಕತ್ತೆಗಳು, ಇವುಗಳಲ್ಲಿ ಪ್ರತಿಯೊಂದು ಮಂದೆಯನ್ನೂ, ಪ್ರತ್ಯೇಕವಾಗಿ ಅವನು ತನ್ನ ಸೇವಕರಿಗೆ ಒಪ್ಪಿಸಿ, ಅವರಿಗೆ, “ನನ್ನ ಮುಂದೆ ನಡೆದು ಮಂದೆ ಮಂದೆಗೂ ಮಧ್ಯದಲ್ಲಿ ಸ್ಥಳ ಬಿಡಿರಿ,” ಎಂದನು.

ಅವನು ಮೊದಲನೆಯವನಿಗೆ, “ನನ್ನ ಅಣ್ಣ ಏಸಾವನು ನಿನ್ನೆದುರಿಗೆ ಬಂದು, ‘ನೀನು ಯಾರ ಕಡೆಯವನು? ಎಲ್ಲಿಗೆ ಹೋಗುತ್ತೀ? ಇಲ್ಲಿ ನಿನ್ನ ಮುಂದೆ ಇರುವ ಇವೆಲ್ಲ ಯಾರವು?’ ಎಂದು ಕೇಳಿದರೆ, ನೀನು ಅವನಿಗೆ, ‘ಇವು ನಿನ್ನ ದಾಸನಾದ ಯಾಕೋಬನವುಗಳೇ, ಇದು ನನ್ನ ಯಜಮಾನನಾದ ಏಸಾವನಿಗೆ ಕಳುಹಿಸಲಾದ ಕಾಣಿಕೆ, ಅವನೂ ನಮ್ಮ ಹಿಂದೆ ಇದ್ದಾನೆ,’ ಎಂದು ಅವನಿಗೆ ಹೇಳಬೇಕು,” ಎಂದು ಆಜ್ಞಾಪಿಸಿದನು.

ಎರಡನೆಯವನಿಗೂ ಮೂರನೆಯವನಿಗೂ ಮಂದೆಗಳ ಹಿಂದೆ ಹೋಗುವವರೆಲ್ಲರಿಗೂ, “ನೀವು ಏಸಾವನನ್ನು ಕಂಡರೆ ಅವನಿಗೆ ಹಾಗೆಯೇ ಹೇಳಬೇಕು. ಇದಲ್ಲದೆ, ‘ನಿನ್ನ ದಾಸ ಯಾಕೋಬನು ನಮ್ಮ ಹಿಂದೆ ಬರುತ್ತಾನೆಂದು ಹೇಳಬೇಕು,’ ” ಎಂದು ಆಜ್ಞಾಪಿಸಿದನು. ಏಕೆಂದರೆ ನನ್ನ ಮುಂದೆ ಹೋಗುವ ಕಾಣಿಕೆಯಿಂದ ಅವನನ್ನು ಸಮಾಧಾನಪಡಿಸುವೆನು. ತರುವಾಯ ಅವನ ಮುಖವನ್ನು ಕಾಣುವೆನು. ಅವನು ನನ್ನನ್ನು ಅಂಗೀಕರಿಸುವನೇನೋ ಎಂದುಕೊಂಡನು. ಹೀಗೆ ಆ ಕಾಣಿಕೆಯು ಅವನ ಮುಂದಾಗಿ ಹೊರಟುಹೋಯಿತು. ತಾನಾದರೋ ಆ ರಾತ್ರಿ ಅಲ್ಲಿಯೇ ತಂಗಿದನು.

ಯಾಕೋಬನು ದೇವರೊಂದಿಗೆ ಹೋರಾಡಿದ್ದು

ಆ ರಾತ್ರಿಯಲ್ಲಿ ಯಾಕೋಬನು ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ, ತನ್ನ ಇಬ್ಬರು ದಾಸಿಯರನ್ನೂ, ತನ್ನ ಹನ್ನೊಂದು ಮಂದಿ ಪುತ್ರರನ್ನೂ ಕರೆದುಕೊಂಡು ಯಬ್ಬೋಕ್ ಎಂಬ ಹೊಳೆಯ ದಂಡೆಯನ್ನು ದಾಟಿದನು. ಅವನು ಅವರನ್ನು ಕರೆದುಕೊಂಡು ಹೊಳೆ ದಂಡೆಯನ್ನು ದಾಟಿಸಿದ್ದಲ್ಲದೆ ತನಗಿದ್ದದ್ದನ್ನೆಲ್ಲಾ ದಾಟಿಸಿದನು. ಆಗ ಯಾಕೋಬನು ಒಬ್ಬನೇ ಉಳಿದಾಗ, ಒಬ್ಬ ಮನುಷ್ಯನು ಉದಯವಾಗುವವರೆಗೆ ಅವನ ಸಂಗಡ ಹೋರಾಡಿದನು. ಆ ಮನುಷ್ಯನು ಅವನನ್ನು ಜಯಿಸದೆ ಇರುವುದನ್ನು ಕಂಡು, ಅವನ ತೊಡೆಯ ಕೀಲನ್ನು ಮುಟ್ಟಿದನು. ಅವನು ಹಾಗೆಯೇ ಸಂಗಡ ಹೋರಾಡುತ್ತಿರುವಾಗಲೇ ಯಾಕೋಬನ ತೊಡೆಯ ಕೀಲು ತಪ್ಪಿತು. ಅವನು ಯಾಕೋಬನಿಗೆ, “ಉದಯವಾಯಿತು, ನನ್ನನ್ನು ಹೋಗಗೊಡು,” ಎಂದಾಗ.

ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು, ನಾನು ನಿನ್ನನ್ನು ಹೋಗಗೊಡಿಸೆನು,” ಎಂದನು.

ಆ ಮನುಷ್ಯನು ಅವನಿಗೆ, “ನಿನ್ನ ಹೆಸರು ಏನು?” ಎಂದಾಗ.

ಅವನು, “ಯಾಕೋಬ,” ಎಂದನು.

ಅದಕ್ಕೆ ಅವನು, “ನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಎನಿಸಿಕೊಳ್ಳದೆ, ಇಸ್ರಾಯೇಲ್3 ಎಂದು ನಿನಗೆ ಹೆಸರಾಗುವುದು. ಏಕೆಂದರೆ ನೀನು ದೇವರ ಸಂಗಡವೂ, ಮನುಷ್ಯರ ಸಂಗಡವೂ ಹೋರಾಡಿ ಜಯಿಸಿದ್ದೀ,” ಎಂದನು.

ಯಾಕೋಬನು, “ನಿನ್ನ ಹೆಸರನ್ನು ನನಗೆ ತಿಳಿಸು,” ಎಂದು ಅವನನ್ನು ಕೇಳಿಕೊಂಡನು.

ಆತನು, “ನನ್ನ ಹೆಸರನ್ನು ಏಕೆ ಕೇಳುತ್ತೀ?” ಎಂದು ಹೇಳಿ ಅವನನ್ನು ಅಲ್ಲೇ ಆಶೀರ್ವದಿಸಿದನು.

ಆಗ ಯಾಕೋಬನು, “ನಾನು ದೇವರನ್ನು ಮುಖಾಮುಖಿಯಾಗಿ ನೋಡಿದರೂ, ನನ್ನ ಪ್ರಾಣ ಉಳಿಯಿತು,” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್4 ಎಂದು ಹೆಸರಿಟ್ಟನು.

ಯಾಕೋಬನು ಪೆನೀಯೇಲನ್ನು ದಾಟಿಹೋದಾಗ, ಸೂರ್ಯೋದಯವಾಯಿತು. ಆದರೆ ಅವನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು. ಆತನು ಯಾಕೋಬನ ತೊಡೆಯ ಕೀಲನ್ನು ಮುದುರಿದ ನರದಲ್ಲಿ ಮುಟ್ಟಿದ್ದರಿಂದ ಇಸ್ರಾಯೇಲರು ತೊಡೆಯ ಕೀಲಿನ ಮೇಲಿರುವ ಮುದುರಿದ ನರವನ್ನು ಈ ದಿನದವರೆಗೂ ತಿನ್ನುವುದಿಲ್ಲ.

Source notes (4)
  1. Footnote ಮಹನಯಿಮ್ ಅಂದರೆ ಎರಡು ಸೈನ್ಯ
  2. Footnote ಅಥವಾ ಸೈನ್ಯ
  3. Footnote ಇಸ್ರಾಯೇಲ್ ಪದದ ಅರ್ಥ ದೇವರೊಂದಿಗೆ ಹೋರಾಡಿದನು
  4. Footnote ಪೆನೀಯೇಲ್ ಅಂದರೆ ದೇವರ ಮುಖ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.