Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಯೆಹೆಜ್ಕೇಲನು 30

ಈಜಿಪ್ಟ್ ಬಗ್ಗೆ ಪ್ರಲಾಪನೆ

ಯೆಹೋವ ದೇವರ ವಾಕ್ಯವು ನನಗೆ ಬಂದಿತು, “ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:

“ ‘ “ಅಯ್ಯೋ ಆ ದಿನ!” ಎಂದು,

ಅಳುತ್ತಾ ಹೇಳಿರಿ.

ಏಕೆಂದರೆ ಆ ದಿನವು ಸಮೀಪವಾಯಿತು,

ಯೆಹೋವ ದೇವರ ದಿನವು,

ಆ ಕಾರ್ಮುಗಿಲಿನ ದಿನವು ಸಮೀಪವಾಯಿತು.

ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.

ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು.

ಕೂಷ್ ಪಟ್ಟಣವು ಸಂಕಟಪಡುವುದು.

ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ,

ಅವಳ ಸಂಪತ್ತು ಸೂರೆಯಾಗುವುದು.

ಅವಳ ಅಡಿಪಾಯಗಳು ಕಿತ್ತುಹೋಗುವವು.

ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.

“ ‘ಯೆಹೋವ ದೇವರು ಹೀಗೆ ಹೇಳುತ್ತಾರೆ:

“ ‘ಈಜಿಪ್ಟಿನ ಸಹಾಯಕರು ಬೀಳುವರು.

ಅದರ ಶಕ್ತಿಯ ಮದವು ಇಳಿದುಹೋಗುವುದು.

ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ

ಖಡ್ಗದಿಂದ ಹತರಾಗುವರು

ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

ಆಗ ಅವರು ಹಾಳಾಗಿರುವ ದೇಶಗಳೊಳಗೆ

ತಾವೂ ಹಾಳಾಗುವರು.

ಹಾಳಾದ ಪಟ್ಟಣಗಳ ಮಧ್ಯದಲ್ಲಿ

ಅದರ ಪಟ್ಟಣಗಳು ಹಾಳಾಗಿ ಇರುವುವು.

ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆ

ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ

ಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು.

“ ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ.

“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ :

“ ‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ

ಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು.

ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನು

ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು.

ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದು

ದೇಶವನ್ನು ಹತರಾದವರಿಂದ ತುಂಬಿಸುವರು.

ಇದಲ್ಲದೆ ನಾನು ನದಿಗಳನ್ನು ಒಣಗಿಸಿ

ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು.

ದೇಶವನ್ನೂ ಅದರಲ್ಲಿನ ಸಮಸ್ತವನ್ನೂ

ವಿದೇಶಿಯರ ಕೈಯಿಂದ ನಾಶಮಾಡಿಸುವೆನು.

ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.

“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ:

“ ‘ನಾನು ಮೂರ್ತಿಗಳನ್ನು ನಾಶಮಾಡುವೆನು.

ಮತ್ತು ನೋಫಿನ1 ವಿಗ್ರಹಗಳನ್ನು ಕೊನೆಗೊಳಿಸುವೆನು.

ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ,

ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.

ನಾನು ಪತ್ರೋಸನ್ನು2 ನಾಶಮಾಡಿ,

ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು.

ತೆಬೆಸ್ ಪಟ್ಟಣವನ್ನು ದಂಡಿಸುವೆನು.

ಈಜಿಪ್ಟಿಗೆ ರಕ್ಷಣೆಯ ಕೋಟೆಯಾದ

ಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ,

ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು.

ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲು

ಪೆಲೂಸಿಯಮ್ ಪ್ರಾಣಸಂಕಟ ಪಡುವುದು.

ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು,

ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು.

ಓನಿನ3 ಮತ್ತು ಪಿಬೇಸೆತಿನ ಯೌವನಸ್ಥರು

ಖಡ್ಗದಿಂದ ಸಾಯುವರು.

ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು.

ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗ

ತಹಪನೇಸಿನಲ್ಲಿ ಹಗಲು ಕತ್ತಲಾಗುವುದು.

ಅದರ ಶಕ್ತಿಯ ಮದವು ಅಡಗಿಹೋಗುವುದು.

ಅದನ್ನು ಮೇಘವು ಮುಚ್ಚುವುದು.

ಅದರ ಪುತ್ರಿಯರು ಸೆರೆಗೆ ಹೋಗುವರು.

ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು.

ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ”

ಫರೋಹನ ತೋಳುಗಳು ಮುರಿದದ್ದು

ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ. ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ. ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು. ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು. ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು. ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”

Source notes (3)
  1. Footnote ನೋಫಿನ ಇನ್ನೊಂದು ಹೆಸರು ಮೆಂಫೀಸ್
  2. Footnote ಪತ್ರೋಸ ಅಂದರೆ ದಕ್ಷಿಣ ಈಜಿಪ್ಟ
  3. Footnote ಓನಿನ ಕೆಲವು ಪ್ರತಿಗಳಲ್ಲಿ ಅವೆನ ಇನ್ನೊಂದು ಹೆಸರು ಸೂರ್ಯನಗರ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.