Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ವಿಮೋಚನಕಾಂಡ 7

ಆಗ ಯೆಹೋವ ದೇವರು ಮೋಶೆಗೆ, “ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ. ನಿನ್ನ ಸಹೋದರನಾದ ಆರೋನನು ನಿನ್ನ ಪ್ರವಾದಿಯಾಗಿರುವನು. ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲಾ ನೀನು ಮಾತನಾಡಬೇಕು. ಇಸ್ರಾಯೇಲರನ್ನು ತನ್ನ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ನಿನ್ನ ಸಹೋದರನಾದ ಆರೋನನು ಫರೋಹನ ಸಂಗಡ ಮಾತನಾಡಬೇಕು. ಆದರೆ ನಾನು ಫರೋಹನ ಹೃದಯವನ್ನು ಕಠಿಣಪಡಿಸಿ, ನನ್ನ ಸೂಚಕಕಾರ್ಯಗಳನ್ನೂ, ನನ್ನ ಅದ್ಭುತಕಾರ್ಯಗಳನ್ನೂ ಈಜಿಪ್ಟ್ ದೇಶದಲ್ಲಿ ಹೆಚ್ಚಿಸುವೆನು. ಆದರೆ ಫರೋಹನು ನಿಮ್ಮ ಮಾತನ್ನು ಕೇಳುವುದಿಲ್ಲ. ಆದರೆ ನನ್ನ ಕೈಯನ್ನು ಈಜಿಪ್ಟಿನ ಮೇಲೆ ಇಟ್ಟು, ದೊಡ್ಡ ನ್ಯಾಯ ತೀರ್ಪುಗಳಿಂದ ನನ್ನ ಜನರಾದ ಇಸ್ರಾಯೇಲರನ್ನೂ, ಅವರ ಸೈನ್ಯಗಳನ್ನೂ ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡುವೆನು. ನಾನು ಈಜಿಪ್ಟಿನ ಮೇಲೆ ನನ್ನ ಕೈಯನ್ನಿಟ್ಟು, ಅವರೊಳಗಿಂದ ಇಸ್ರಾಯೇಲರನ್ನು ಹೊರಗೆ ಬರಮಾಡಿದಾಗ, ನಾನು ಯೆಹೋವ ದೇವರೆಂದು ಈಜಿಪ್ಟಿನವರಿಗೆ ತಿಳಿದುಬರುವುದು,” ಎಂದು ಹೇಳಿದರು.

ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದ ಪ್ರಕಾರವೇ ಮಾಡಿದರು. ಅವರು ಫರೋಹನ ಮುಂದೆ ಮಾತನಾಡುವಾಗ ಮೋಶೆಯು ಎಂಬತ್ತು ವರ್ಷದವನೂ ಆರೋನನು ಎಂಬತ್ತಮೂರು ವರ್ಷದವನೂ ಆಗಿದ್ದನು.

ಆರೋನನ ಕೋಲು ಸರ್ಪವಾದದ್ದು

ಆಗ ಯೆಹೋವ ದೇವರು ಮಾತನಾಡಿ ಮೋಶೆಗೂ ಆರೋನನಿಗೂ, “ಫರೋಹನು ನಿಮಗೆ, ‘ನೀವು ಒಂದು ಅದ್ಭುತಕಾರ್ಯವನ್ನು ತೋರಿಸಿರಿ,’ ಎಂದಾಗ ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಫರೋಹನ ಮುಂದೆ ಬಿಸಾಡು,’ ಎಂದು ಹೇಳು, ಆಗ ಅದು ಸರ್ಪವಾಗುವುದು,” ಎಂದು ಹೇಳಿದರು.

ಆಗ ಮೋಶೆಯೂ ಆರೋನನೂ ಫರೋಹನ ಬಳಿಗೆ ಹೋಗಿ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಆರೋನನು ತನ್ನ ಕೋಲನ್ನು ಫರೋಹ ಮತ್ತು ಅವನ ಸೇವಕರ ಮುಂದೆಯೂ ಬಿಸಾಡಿದಾಗ, ಅದು ಸರ್ಪವಾಯಿತು. ಫರೋಹನು ಜ್ಞಾನಿಗಳನ್ನೂ, ಮಂತ್ರವಾದಿಗಳನ್ನೂ ಕರೆಸಿದನು. ಆಗ ಈಜಿಪ್ಟಿನ ಮಂತ್ರಗಾರರೂ ಸಹ ತಮ್ಮ ಮಾಟಗಳಿಂದ ಹಾಗೆಯೇ ಮಾಡಿದರು. ಅವರು ತಮ್ಮ ತಮ್ಮ ಕೋಲುಗಳನ್ನು ಬಿಸಾಡಿದಾಗ, ಅವು ಸರ್ಪಗಳಾದವು. ಆದರೆ ಆರೋನನ ಕೋಲು ಅವರ ಕೋಲುಗಳನ್ನು ನುಂಗಿಬಿಟ್ಟಿತು. ಯೆಹೋವ ದೇವರು ಹೇಳಿದಂತೆಯೇ ಫರೋಹನ ಹೃದಯವು ಕಠಿಣವಾಯಿತು. ಅವನು ಅವರ ಮಾತನ್ನು ಕೇಳಲಿಲ್ಲ.

ರಕ್ತದ ಉಪದ್ರವ

ಆಗ ಯೆಹೋವ ದೇವರು ಮೋಶೆಗೆ, “ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ. ಬೆಳಿಗ್ಗೆ ಫರೋಹನ ಬಳಿಗೆ ಹೋಗು. ಅವನು ಹೊರಗೆ ನದಿಯ ಬಳಿಗೆ ಹೋಗುವನು. ಆಗ ನೈಲ್ ನದಿ ತೀರದಲ್ಲಿ ಅವನೆದುರಿಗೆ ನಿಂತುಕೊಂಡು, ಸರ್ಪವಾಗಿ ಮಾಡಿದ ಕೋಲನ್ನು ನಿನ್ನ ಕೈಯಲ್ಲಿ ಹಿಡಿದುಕೊಂಡಿರು. ಅವನಿಗೆ ನೀನು, ‘ಹಿಬ್ರಿಯರ ದೇವರಾದ ಯೆಹೋವ ದೇವರು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ. ಮರುಭೂಮಿಯಲ್ಲಿ ನನಗೆ ಆರಾಧನೆ ಮಾಡುವ ಹಾಗೆ ನನ್ನ ಜನರನ್ನು ಕಳುಹಿಸು, ಎಂದು ಅವರು ಹೇಳಿದ್ದಾರೆ. ಆದರೆ ಇಗೋ, ಇಂದಿನವರೆಗೂ ನೀನು ಕೇಳಲಿಲ್ಲ. ಆದುದರಿಂದ ಯೆಹೋವ ದೇವರು ಮತ್ತೆ ನಿನಗೆ ಹೇಳುವುದೇನೆಂದರೆ: ನಾನೇ ಯೆಹೋವ ದೇವರೆಂದು ನೀನು ಇದರಿಂದ ತಿಳಿದುಕೊಳ್ಳುವೆ. ನನ್ನ ಕೈಯಲ್ಲಿರುವ ಕೋಲಿನಿಂದ, ನೈಲ್ ನದಿಯಲ್ಲಿರುವ ನೀರನ್ನು ಹೊಡೆಯುವೆನು, ಆಗ ಅದು ರಕ್ತವಾಗುವುದು. ನದಿಯಲ್ಲಿರುವ ಮೀನುಗಳು ಸಾಯುವುವು. ನೈಲ್ ನದಿಯು ಹೊಲಸಾಗಿ ನಾರುವುದು. ಈಜಿಪ್ಟಿನವರು ನದಿಯ ನೀರನ್ನು ಕುಡಿಯುವುದಕ್ಕೆ ಅಸಹ್ಯಪಡುವರು,’ ಎಂದು ಹೇಳು,” ಎಂದರು.

ಅನಂತರ ಯೆಹೋವ ದೇವರು ಮೋಶೆಗೆ, “ನೀನು ಆರೋನನಿಗೆ, ‘ನಿನ್ನ ಕೋಲನ್ನು ತೆಗೆದುಕೊಂಡು ಈಜಿಪ್ಟಿನ ನೀರಿನ ಮೇಲೆಯೂ ಅದರ ನದಿಗಳ ಮೇಲೆಯೂ ಕೊಳಗಳ ಮೇಲೆಯೂ ಅದರ ಕಾಲುವೆ ಮೇಲೆಯೂ ಅದರ ಕೆರೆಗಳ ಮೇಲೆಯೂ ಕೈಚಾಚು,’ ಎಂದು ಹೇಳು. ಆಗ ಅವು ರಕ್ತವಾಗುವುವು. ಈಜಿಪ್ಟ್ ದೇಶದಲ್ಲಿ ನೀರಿರುವ ಮರದ ತೊಟ್ಟಿಗಳಲ್ಲಾಗಲೀ, ಕಲ್ಲಿನ ಪಾತ್ರೆಗಳಲ್ಲಾಗಲೀ ರಕ್ತವಿರುವುದು,” ಎಂದು ಹೇಳಿದರು.

ಮೋಶೆಯೂ ಆರೋನನೂ ಯೆಹೋವ ದೇವರು ತಮಗೆ ಆಜ್ಞಾಪಿಸಿದಂತೆಯೇ ಮಾಡಿದರು. ಅವನು ಕೋಲನ್ನು ಎತ್ತಿ, ನೈಲ್ ನದಿಯಲ್ಲಿರುವ ನೀರನ್ನು ಫರೋಹನ ಮುಂದೆಯೂ, ಅವನ ಸೇವಕರ ಮುಂದೆಯೂ ಹೊಡೆದನು. ಆಗ ನದಿಯಲ್ಲಿದ್ದ ನೀರೆಲ್ಲಾ ರಕ್ತವಾಯಿತು. ನದಿಯಲ್ಲಿದ್ದ ಮೀನುಗಳು ಸತ್ತವು, ನದಿಯು ದುರ್ವಾಸನೆಗೊಂಡಿತು. ಈಜಿಪ್ಟಿನವರು ನೈಲ್ ನದಿಯ ನೀರನ್ನು ಕುಡಿಯಲಾರದೆ ಹೋದರು. ಆಗ ಈಜಿಪ್ಟ್ ದೇಶದಲ್ಲೆಲ್ಲಾ ರಕ್ತವಿತ್ತು.

ಆದರೆ ಈಜಿಪ್ಟಿನ ಮಂತ್ರಗಾರರು ತಮ್ಮ ಮಾಟಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಯೆಹೋವ ದೇವರು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ. ಫರೋಹನು ತಿರುಗಿಕೊಂಡು ತನ್ನ ಅರಮನೆಗೆ ಹಿಂದಿರುಗಿದನು. ಅವನು ಈ ಅದ್ಭುತಕ್ಕೂ ಗಮನಕೊಡಲಿಲ್ಲ. ಆದರೆ ಈಜಿಪ್ಟಿನವರೆಲ್ಲರೂ ನದಿಯ ನೀರನ್ನು ಕುಡಿಯಲಾರದೆ, ಕುಡಿಯುವ ನೀರಿಗಾಗಿ ನೈಲ್ ನದಿಯ ಸುತ್ತಲೂ ಅಗೆದರು.

ಕಪ್ಪೆಗಳ ಉಪದ್ರವ

ಯೆಹೋವ ದೇವರು ನೈಲ್ ನದಿಯನ್ನು ರಕ್ತವನ್ನಾಗಿ ಮಾಡಿ ಏಳು ದಿನಗಳು ಕಳೆದವು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.