Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಎಸ್ತೇರಳು 5

ಎಸ್ತೇರಳು ಅರಸನನ್ನು ಬೇಡಿಕೊಂಡದ್ದು

ಮೂರನೆಯ ದಿವಸದಲ್ಲಿ, ಎಸ್ತೇರಳು ರಾಜವಸ್ತ್ರ ಆಭರಣಗಳನ್ನು ಧರಿಸಿಕೊಂಡು ಅರಮನೆಗೆ ಎದುರಾಗಿರುವ ಅರಸನ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ನಿಂತಳು. ಅರಸನು ರಾಜಮಂದಿರದೊಳಗೆ ತನ್ನ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು. ಅರಸನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ, ಆಕೆಗೆ ತನ್ನ ಮೆಚ್ಚುಗೆಯನ್ನು ತೋರಿ ತನ್ನ ಕೈಯಲ್ಲಿದ್ದ ಸ್ವರ್ಣದಂಡವನ್ನು ಎಸ್ತೇರಳ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು.

ಆಗ ಅರಸನು ಅವಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.

ಅದಕ್ಕೆ ಎಸ್ತೇರಳು ಅರಸನಿಗೆ, “ಸಮ್ಮತಿಯಾದರೆ ನಾನು ಅರಸನಿಗಾಗಿ ಸಿದ್ಧಮಾಡಿಸಿರುವ ಔತಣಕ್ಕೆ ಅರಸನೂ ಹಾಮಾನನೂ ಈ ಹೊತ್ತು ಬರಬೇಕು,” ಎಂದಳು.

ಆಗ ಅರಸನು, “ಎಸ್ತೇರಳು ಹೇಳಿದ ಪ್ರಕಾರ ನಾವು ಮಾಡಲು, ಬೇಗನೆ ಹಾಮಾನನನ್ನು ಕರೆದುಕೊಂಡು ಬನ್ನಿರಿ,” ಎಂದು ಆಜ್ಞಾಪಿಸಿದನು.

ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಅರಸನೂ ಹಾಮಾನನೂ ಬಂದರು. ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಈಗ ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.

ಅದಕ್ಕೆ ಎಸ್ತೇರಳು, “ನನ್ನ ಬೇಡಿಕೆಯೂ ನನ್ನ ವಿಜ್ಞಾಪನೆಯೂ ಇದೇ: ಅರಸನಿಗೆ ಸಮ್ಮತಿಯಾದರೆ, ಅರಸನಿಗೂ ಹಾಮಾನನಿಗೂ ನಾನು ಮಾಡಲಿರುವ ಔತಣಕ್ಕೆ ನಾಳೆಯೂ ಬರಬೇಕು. ಆಗ ಅರಸನ ಪ್ರಶ್ನೆಗೆ ಉತ್ತರಕೊಡುವೆನು,” ಎಂದಳು.

ಹಾಮಾನನು ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿಕೊಂಡದ್ದು

ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು. ಆದರೂ ಹಾಮಾನನು ಬಿಗಿಹಿಡಿದುಕೊಂಡು ತನ್ನ ಮನೆಗೆ ಹೋದನು.

ಅವನು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಯಿಸಿದನು. ಹಾಮಾನನು ತನ್ನ ಐಶ್ವರ್ಯದ ಘನವನ್ನೂ, ತನ್ನ ಮಕ್ಕಳ ಹೆಚ್ಚಳವನ್ನೂ, ಅರಸನು ತನ್ನನ್ನು ಹೆಚ್ಚಿಸಿದ್ದನ್ನೂ, ಅರಸನ ಪ್ರಭುಗಳ ಹಾಗೂ ಸೇವಕರ ಮೇಲೆ ಎತ್ತಿದ್ದನ್ನೂ ಹೀಗೆ ಎಲ್ಲವನ್ನೂ ಅವರಿಗೆ ವಿವರವಾಗಿ ಹೇಳಿದನು. ಇದಲ್ಲದೆ ಹಾಮಾನನು, “ಎಸ್ತೇರ್ ರಾಣಿಯು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೆ ಯಾರನ್ನು ಕರೆಯಲಿಲ್ಲ. ಮರುದಿನವೂ ಅರಸನೊಂದಿಗೆ ಔತಣಮಾಡಲು ನನ್ನನ್ನು ಆಹ್ವಾನಿಸಿದ್ದಾಳೆ. ಆದರೆ ಯೆಹೂದ್ಯನಾದ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ನನ್ನ ಕಣ್ಣೆದುರು ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಎಂದನು.

ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.