Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಧರ್ಮೋಪದೇಶಕಾಂಡ 33

ಮೋಶೆ ಗೋತ್ರಗಳನ್ನು ಆಶೀರ್ವದಿಸಿದ್ದು

ದೇವರ ಮನುಷ್ಯನಾದ ಮೋಶೆಯು ಮರಣ ಹೊಂದುವದಕ್ಕಿಂತ ಮುಂಚೆ ಇಸ್ರಾಯೇಲರಿಗೆ ಕೊಟ್ಟ ಆಶೀರ್ವಾದ:

“ಯೆಹೋವ ದೇವರು ಸೀನಾಯಿ ಬೆಟ್ಟದಿಂದ ಬಂದು,

ಸೇಯೀರಿನಿಂದ ಅವರ ಮೇಲೆ ಉದಯಿಸಿದರು.

ಪಾರಾನ್ ಬೆಟ್ಟದಿಂದ ಪ್ರಕಾಶಿಸಿದರು.

ದೇವರು ದಕ್ಷಿಣದ ತಮ್ಮ ಪರ್ವತ ಶ್ರೇಣಿಯಿಂದ

ಲಕ್ಷಾಂತರ ಪರಿಶುದ್ಧರ ಸಂಗಡ ಬಂದರು.

ನಿಶ್ಚಯವಾಗಿ ನೀವು ಜನರನ್ನು ಪ್ರೀತಿಸುತ್ತೀರಿ.

ಪರಿಶುದ್ಧ ಜನರು ನಿಮ್ಮ ಆಶ್ರಯದಲ್ಲಿಯೇ ಇದ್ದಾರೆ.

ನಿಮ್ಮ ಪಾದಗಳಿಗೆ ಎಲ್ಲರೂ ಎರಗುವರು.

ನಿಮ್ಮಿಂದಲೇ ಬೋಧನೆ ಪಡೆಯುವರು.

ಯಾಕೋಬನ ಸಂತತಿಯವರಾದ ನಮಗೆ,

ಮೋಶೆಯು ನಿಯಮವನ್ನು ಸೊತ್ತಾಗಿ ಕೊಟ್ಟಿದ್ದಾನೆ.

ಇಸ್ರಾಯೇಲರ ಮುಖ್ಯಸ್ಥರೂ

ಅವರ ಗೋತ್ರಗಳು ಒಟ್ಟಾಗಿ ಸೇರಿಬಂದಾಗ,

ದೇವರೇ ಯೆಶುರೂನಿನ ಮೇಲೆ ಅರಸನಾಗಿದ್ದರು.

“ರೂಬೇನನು ಸಾಯದೆ ಬದುಕಲಿ.

ಅವನ ಜನರು ಕಡಿಮೆಯಾಗದಿರಲಿ.”

ಯೆಹೂದನ ಬಗ್ಗೆ ಮೋಶೆ ಹೇಳಿದ ಮಾತಿದು:

“ಯೆಹೋವ ದೇವರೇ, ಯೆಹೂದನ ಮೊರೆಯನ್ನಾಲಿಸಿ,

ಅವರನ್ನು ಅವರ ಬಂಧುಗಳೊಡನೆ ಸೇರಿಸಿರಿ.

ಅವನ ಸ್ವಂತ ಕೈಗಳೇ ತನ್ನ ಹಕ್ಕು ಬಾಧ್ಯತೆಗಳನ್ನು ಕಾದಿರಿಸುತ್ತವೆ.

ಅವನ ಶತ್ರುಗಳಿಂದ ಅವನನ್ನು ತಪ್ಪಿಸಿರಿ.”

ಲೇವಿ ಕುಲದ ವಿಷಯದಲ್ಲಿ ಹೇಳಿದ್ದೇನೆಂದರೆ:

“ನಿಮ್ಮ ನಿರ್ಣಯವನ್ನು ತಿಳಿಸುವ ಊರೀಮ್, ತುಮ್ಮೀಮ್ ಎಂಬ ವಸ್ತುಗಳು

ನಿಮ್ಮ ಭಕ್ತರಾದ ಇವರ ವಶದಲ್ಲಿ ಉಂಟಷ್ಟೆ.

ನೀವು ಮಸ್ಸದಲ್ಲಿ ಅವರನ್ನು ಪರೀಕ್ಷಿಸಿದಿರಿ.

ಮೆರೀಬಾದಲ್ಲಿ ನೀರು ಹೊರಟ ಸ್ಥಳದ ಹತ್ತಿರ ಅವರೊಡನೆ ವಿವಾದ ಮಾಡಿದಿರಿ.

ಅವನು ತನ್ನ ತಂದೆತಾಯಿಗಳ ಬಗ್ಗೆ,

‘ಅವರಿಗಾಗಿ ನನಗೆ ಗೌರವವಿಲ್ಲ.’

ಅವನು ತನ್ನ ಸಹೋದರರನ್ನೂ ಗುರುತಿಸಲಿಲ್ಲ

ತನ್ನ ಸ್ವಂತ ಮಕ್ಕಳನ್ನೂ ಅರಿಯಲಿಲ್ಲ,

ಏಕೆಂದರೆ ಅವನು ನಿಮ್ಮ ವಾಕ್ಯವನ್ನು ಕೈಗೊಂಡು

ನಿಮ್ಮ ಒಡಂಬಡಿಕೆಯನ್ನು ಕಾಪಾಡಿದ್ದಾನೆ.

ಅವನು ಯಾಕೋಬನಿಗೆ ನಿಮ್ಮ ಸೂತ್ರಗಳನ್ನೂ,

ಇಸ್ರಾಯೇಲರಿಗೆ ನಿಮ್ಮ ನಿಯಮವನ್ನೂ ಬೋಧಿಸುವನು.

ನಿಮ್ಮ ಮುಂದೆ ಧೂಪವನ್ನೂ

ನಿಮ್ಮ ಬಲಿಪೀಠದ ಮೇಲೆ ಸರ್ವಾಂಗ ದಹನಬಲಿಯನ್ನೂ ಸಮರ್ಪಿಸುವನು.

ಯೆಹೋವ ದೇವರೇ, ಅವನ ಎಲ್ಲ ಕೌಶಲ್ಯಗಳನ್ನು ಆಶೀರ್ವದಿಸಿರಿ.

ಅವನ ಕೈಕೆಲಸವನ್ನು ಅಂಗೀಕರಿಸಿರಿ.

ಅವನಿಗೆ ವಿರೋಧವಾಗಿ ಏಳುವವರ ನಡು ಮುರಿದು ಹೋಗಲಿ.

ಅವನನ್ನು ದ್ವೇಷಿಸುವವರು ತಿರುಗಿ ಏಳದ ಹೋಗಲಿ.”

ಮೋಶೆಯು ಬೆನ್ಯಾಮೀನನ ವಿಷಯವಾಗಿ ಹೇಳಿದ್ದೇನೆಂದರೆ:

“ಯೆಹೋವ ದೇವರಿಗೆ ಪ್ರಿಯನಾದ ಇವನು ದೇವರ ಬಳಿಯಲ್ಲಿ ಸುರಕ್ಷಿತವಾಗಿ ವಾಸಮಾಡುವನು.

ದೇವರು ಅವನಿಗೆ ದಿನವೆಲ್ಲಾ ಆಸರೆಯಾಗಿರುವರು.

ಅವನು ದೇವರ ಭುಜಗಳ ನಡುವೆ ವಿಶ್ರಾಂತಿ ಪಡೆಯುವನು.”

ಯೋಸೇಫನ ವಿಷಯವಾಗಿ ಹೇಳಿದ್ದೇನೆಂದರೆ:

“ಅವನ ದೇಶವು

ಆಕಾಶದ ಅಮೂಲ್ಯವಾದ ಮಂಜಿನಿಂದಲೂ,

ಕೆಳಗೆ ಸಾಗರ ಸೆಲೆಯಿಂದಲೂ ಯೆಹೋವ ದೇವರ ಆಶೀರ್ವಾದ ಹೊಂದಲಿ.

ಸೂರ್ಯನು ತರುವ ಉತ್ಕೃಷ್ಟವಾದವುಗಳಿಂದಲೂ

ಚಂದ್ರನು ದಯಪಾಲಿಸುವ ಅಮೂಲ್ಯವಾದವುಗಳಿಂದಲೂ

ಪುರಾತನ ಪರ್ವತಗಳಿಂದ ದೊರೆಯುವ ಅತ್ಯುತ್ತಮ ಕಾಣಿಕೆಗಳಿಂದಲೂ

ಶಾಶ್ವತ ಪರ್ವತಗಳಿಂದ ಸಿಗುವ ಒಳಿತುಗಳಿಂದಲೂ,

ಭೂಮಿಯಲ್ಲಿ ಸಮೃದ್ಧಿಯಾಗಿ ಬೆಳೆಯುವ ಫಲಗಳಲ್ಲಿ ಉತ್ಕೃಷ್ಟವಾದುದೆಲ್ಲವೂ

ಸುಡುವ ಪೊದೆಯಲ್ಲಿ ವಾಸವಾಗಿದ್ದ ದೇವರ ದಯೆಯೂ

ಯೋಸೇಫನ ತಲೆಯ ಮೇಲೆ ನೆಲೆಗೊಳ್ಳಲಿ.

ಅವನು ತನ್ನ ಸಹೋದರರಲ್ಲಿ ರಾಜಕುಮಾರನಾಗಿರುವನು.

ಕುಲದವರ ಶಿರಸ್ಸಾಗಿರುವ ಅವನ ಮೇಲೆ ಆಶೀರ್ವಾದ ಉಂಟಾಗಲಿ.

ಅವನ ವೈಭವವು ಚೊಚ್ಚಲ ಹೋರಿಯಂತೆ ಇರುವುದು,

ಅವನ ಕೊಂಬುಗಳು ಕಾಡುಕೋಣಗಳ ಕೊಂಬುಗಳಂತೆ ಇರುವುದು.

ಇವುಗಳಿಂದ ಜನಾಂಗಗಳನ್ನೆಲ್ಲಾ ಇರಿದು

ಒಟ್ಟಿಗೆ ಭೂಮಿಯ ಅಂಚಿನವರೆಗೆ ಓಡಿಸುವನು.

ಎಫ್ರಾಯೀಮ್ ಕುಲದ ಹತ್ತು ಸಾವಿರ ಜನರೂ ಇಂಥವರೇ.

ಮನಸ್ಸೆ ಕುಲದ ಸಹಸ್ರ ಜನರೂ ಇಂಥವರೇ ಆಗಿದ್ದಾರೆ.”

ಮೋಶೆಯು ಜೆಬುಲೂನರ ವಿಷಯವಾಗಿ ಹೇಳಿದ್ದೇನೆಂದರೆ:

“ಜೆಬೂಲೂನನೇ, ನಿನ್ನ ಪ್ರಯಾಣದಲ್ಲಿ ಸಂತೋಷಪಡು.

ಇಸ್ಸಾಕಾರನೇ, ನಿನ್ನ ಗುಡಾರಗಳಲ್ಲಿ ಸಂತೋಷಪಡು.

ಅವರು ಜನರನ್ನು ಬೆಟ್ಟಕ್ಕೆ ಕರೆಯಿಸಿ,

ಅಲ್ಲಿ ನೀತಿಯ ಬಲಿಗಳನ್ನು ಅರ್ಪಿಸುವರು.

ಏಕೆಂದರೆ ಅವರು ಸಮುದ್ರದಿಂದ ಐಶ್ವರ್ಯವನ್ನು ಹೊಂದಿ

ಮರಳಿನಲ್ಲಿ ಅಡಗಿರುವ ಸಂಪತ್ತನ್ನು ಪಡೆಯುವರು.”

ಮೋಶೆಯು ಗಾದನ ವಿಷಯವಾಗಿ ಹೇಳಿದ್ದೇನೆಂದರೆ:

“ಗಾದನ ರಾಜ್ಯವನ್ನು ವಿಸ್ತಾರ ಮಾಡಿದ ದೇವರು ಸ್ತುತಿಹೊಂದಲಿ.

ಅವನು ಸಿಂಹದಂತೆ ಜೀವಿಸಿ ತೋಳನ್ನೂ

ಶಿರಸ್ಸನ್ನೂ ಮುರಿಯುವನು.

ಅವನು ಉತ್ತಮವಾದ ನಾಡನ್ನು ತನಗಾಗಿ ಆಯ್ದುಕೊಂಡನು.

ನಾಯಕರ ಪಾಲು ಅವನಿಗಾಗಿ ದೊರಕಿತು.

ಅವನು ಜನರ ಮುಖ್ಯಸ್ಥರ ಸಂಗಡ ಬಂದು,

ಇಸ್ರಾಯೇಲರೊಡನೆ ಯೆಹೋವ ದೇವರ ನೀತಿಯನ್ನೂ

ದೇವರ ನ್ಯಾಯಗಳನ್ನೂ ಸ್ಥಾಪಿಸಿದನು.”

ಮೋಶೆಯು ದಾನನ ವಿಷಯವಾಗಿ ಹೇಳಿದ್ದೇನೆಂದರೆ:

“ದಾನನು ಬಾಷಾನಿನಿಂದ ಹಾರಿಬರುವ,

ಪ್ರಾಯದ ಸಿಂಹದಂತಿದ್ದಾನೆ.”

ಮೋಶೆಯು ನಫ್ತಾಲಿಯ ವಿಷಯವಾಗಿ ಹೇಳಿದ್ದೇನೆಂದರೆ:

“ನಫ್ತಾಲಿಯೇ, ಯೆಹೋವ ದೇವರ ಅನುಗ್ರಹದಿಂದ ತೃಪ್ತನಾದವನೇ,

ದೇವರ ಆಶೀರ್ವಾದದಿಂದ ತುಂಬಿದವನೇ;

ಸಮುದ್ರವೂ ದಕ್ಷಿಣ ಪ್ರದೇಶವೂ ನಿನಗೆ ಸೊತ್ತಾಗಲಿ.”

ಮೋಶೆ ಆಶೇರನ ವಿಷಯವಾಗಿ ಹೇಳಿದ್ದೇನೆಂದರೆ:

“ಪುತ್ರರಲ್ಲಿಯೇ ಶ್ರೇಷ್ಠನಾದ ಆಶೇರನು ಭಾಗ್ಯ ಹೊಂದಲಿ.

ಅವನ ಸಹೋದರರು ಅವನನ್ನು ಮೆಚ್ಚಿಕೊಳ್ಳಲಿ,

ಎಣ್ಣೆಯಲ್ಲಿ ಪಾದಸ್ನಾನ ಮಾಡುವಂತಾಗಲಿ.

ನಿನ್ನ ದ್ವಾರಗಳ ಅಗುಳಿಗಳು ಕಬ್ಬಿಣದ ಮತ್ತು ಕಂಚಿನವುಗಳು ಆಗಿರಲಿ.

ನಿನ್ನ ಜೀವಮಾನಕಾಲವೆಲ್ಲಾ ನಿನಗೆ ಬಲವಿರುವುದು.

“ಯೆಶುರೂನನ ದೇವರ ಹಾಗೆ ಯಾರೂ ಇಲ್ಲ.

ದೇವರು ನಿನ್ನ ಸಹಾಯಕ್ಕೆ ಆಕಾಶವನ್ನೇರಿ

ಮೇಘಾರೂಢನಾಗಿ ತಮ್ಮ ಘನತೆಯಲ್ಲಿ ಬರುತ್ತಾರೆ.

ನಿತ್ಯ ದೇವರು ನಿನ್ನ ಆಶ್ರಯವು.

ದೇವರ ಶಾಶ್ವತ ತೋಳುಗಳು ನಿನಗೆ ಆಶ್ರಯ.

ನಿನ್ನ ವೈರಿಗಳನ್ನು ನಿನ್ನ ಮುಂದೆ ಓಡಿಸಿ,

‘ಅವರನ್ನು ಸಂಹರಿಸಿರಿ,’ ಎಂದು ಆಜ್ಞಾಪಿಸುವರು.

ಆದಕಾರಣ ಆಕಾಶದಿಂದ ಮಂಜನ್ನು ಸುರಿಯುವ,

ಧಾನ್ಯ, ಹೊಸ ದ್ರಾಕ್ಷಾರಸ ಸಮೃದ್ಧಿಯಾಗಿರುವ ನಾಡಿನಲ್ಲಿ,

ಯಾಕೋಬನ ವಂಶದವರು ಸುರಕ್ಷಿತರಾದರು.

ಇಸ್ರಾಯೇಲರು ನಿರ್ಭಯವಾಗಿ ವಾಸಿಸುವವರಾದರು.

ಇಸ್ರಾಯೇಲರೇ, ನೀವು ಎಷ್ಟೋ ಧನ್ಯರು.

ಯೆಹೋವ ದೇವರಿಂದ ರಕ್ಷಣೆಹೊಂದಿದ ಜನಾಂಗವೇ

ನಿಮ್ಮಂತೆ ಯಾರಿದ್ದಾರೆ?

ದೇವರೇ ನಿಮಗೆ ಗುರಾಣಿ ಹಾಗೂ ಸಹಾಯಕ.

ದೇವರು ನಿಮ್ಮ ಮಹಿಮಾ ಖಡ್ಗ.

ನಿಮ್ಮ ವೈರಿಗಳು ನಿಮ್ಮ ಮುಂದೆ ಮುದುರಿಕೊಳ್ಳುವರು

ಮತ್ತು ಅವರ ಉನ್ನತ ಸ್ಥಳಗಳನ್ನು ನೀವು ತುಳಿದುಬಿಡುವಿರಿ.”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.