Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಧರ್ಮೋಪದೇಶಕಾಂಡ 2

ಮರುಭೂಮಿಯಲ್ಲಿ ಅಲೆದಾಡುವಿಕೆ

ಆಗ ಯೆಹೋವ ದೇವರು ನನಗೆ ಆಜ್ಞಾಪಿಸಿದ ಪ್ರಕಾರ ಮರುಭೂಮಿಗೆ ಹೊರಟು ಕೆಂಪುಸಮುದ್ರದ ಮಾರ್ಗದಲ್ಲಿ ಅನೇಕ ದಿನಗಳು ಸೇಯೀರ್ ಬೆಟ್ಟದ ಮಲೆನಾಡನ್ನು ಸುತ್ತುತ್ತಿದ್ದೆವು.

ಆಮೇಲೆ ಯೆಹೋವ ದೇವರು ನನಗೆ, “ನೀವು ಈ ಬೆಟ್ಟವನ್ನು ಸುತ್ತಿದ್ದು ಸಾಕು. ಉತ್ತರಕ್ಕೆ ತಿರುಗಿಕೊಳ್ಳಿರಿ. ನೀವು ಜನರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ನೀವು ಸೇಯೀರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಪುತ್ರರ ಗಡಿಯನ್ನು ದಾಟಬೇಕು. ಅವರು ನಿಮಗೆ ಭಯಪಡುವರು. ಆದ್ದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು. ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ನಿಮಗೆ ಅವರ ದೇಶದಲ್ಲಿ ಪಾದವಿಡುವಷ್ಟು ಸ್ಥಳವನ್ನಾದರೂ ಕೊಡುವುದಿಲ್ಲ. ಏಕೆಂದರೆ ಸೇಯೀರ್ ಬೆಟ್ಟವನ್ನು ನಾನು ಏಸಾವನಿಗೆ ಸ್ವದೇಶವಾಗಿ ಕೊಟ್ಟಿದ್ದೇನೆ. ನೀವು ಅಲ್ಲಿ ಉಣ್ಣುವ ಆಹಾರವನ್ನು ಮತ್ತು ಕುಡಿಯುವ ನೀರನ್ನು ಸಹ ಹಣಕೊಟ್ಟು ಕೊಂಡುಕೊಳ್ಳಬೇಕು.’ ”

ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಎಲ್ಲಾ ಕೈಕೆಲಸದಲ್ಲಿ ನಿಮ್ಮನ್ನು ಆಶೀರ್ವದಿಸಿದ್ದಾರೆ. ನೀವು ಈ ದೊಡ್ಡ ಮರುಭೂಮಿಯಲ್ಲಿ ಸಂಚಾರ ಮಾಡಿದ್ದನ್ನು ದೇವರು ಗಮನಿಸಿದ್ದಾರೆ. ಈ ನಲವತ್ತು ವರ್ಷ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮ ಸಂಗಡ ಇದ್ದರು. ನಿಮಗೆ ಏನೂ ಕಡಿಮೆ ಆಗಲಿಲ್ಲ.

ಈ ಪ್ರಕಾರ ನಾವು ಸೇಯೀರಿನಲ್ಲಿ ವಾಸಮಾಡುವ ನಮ್ಮ ಸಹೋದರರಾದ ಏಸಾವನ ಮಕ್ಕಳ ಕಡೆಯಿಂದ ಓರೆಯಾಗಿ ತಿರುಗಿಕೊಂಡು ಅರಾಬಾದ ಮಾರ್ಗವನ್ನು ಬಿಟ್ಟು ಏಲತ್, ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ, ಮೋವಾಬಿನ ಮರುಭೂಮಿಯ ಮಾರ್ಗವಾಗಿ ಹಾದು ಹೋದೆವು.

ಆಗ ಯೆಹೋವ ದೇವರು ನನಗೆ, “ಮೋವಾಬ್ಯರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ಏಕೆಂದರೆ ನಾನು ಅವರ ದೇಶದಲ್ಲಿ ನಿನಗೆ ಸೊತ್ತನ್ನು ಕೊಡುವುದಿಲ್ಲ. ನಾನು ಅದನ್ನು ಲೋಟನ ಮಕ್ಕಳಿಗೆ ಆರ್ ಎಂಬ ಪ್ರದೇಶವನ್ನು ಕೊಟ್ಟೆನಲ್ಲವೇ?” ಎಂದರು.

ಅದರೊಳಗೆ ಪೂರ್ವದಲ್ಲಿ ಏಮಿಯರು ವಾಸವಾಗಿದ್ದರು. ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು. ಅವರು ಅನಾಕ್ಯರ ಹಾಗೆ ರೆಫಾಯರಿಗೆ ಸೇರಿದವರೆಂದು ಹೇಳುವದುಂಟು. ಮೋವಾಬ್ಯರು ಅವರನ್ನು ಏಮಿಯರೆಂದು ಕರೆದರು. ಅದೇ ಪೂರ್ವಕಾಲದಲ್ಲಿ ಹೋರಿಯರು ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವ ದೇವರು ಕೊಟ್ಟ ನಾಡನ್ನು ಹೇಗೆ ಸ್ವಾಧೀನ ಮಾಡಿಕೊಂಡರೋ, ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ, ಅವರ ನಾಡಿನಲ್ಲಿ ವಾಸಮಾಡಿದರು.

“ಈಗ ಎದ್ದು ಜೆರೆದ್ ಹಳ್ಳವನ್ನು ದಾಟಿರಿ,” ಎಂದು ಯೆಹೋವ ದೇವರು ಹೇಳಿದ ಮೇಲೆ ನಾವು ಜೆರೆದ್ ಹಳ್ಳವನ್ನು ದಾಟಿದೆವು.

ನಾವು ಕಾದೇಶ್ ಬರ್ನೇಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳವನ್ನು ದಾಟಿದವರೆಗೆ ಗತಿಸಿದ ಕಾಲವು ಮೂವತ್ತೆಂಟು ವರ್ಷ. ಯೆಹೋವ ದೇವರು ಅವರಿಗೆ ಪ್ರಮಾಣ ಮಾಡಿದ ಪ್ರಕಾರ ಅಷ್ಟರಲ್ಲಿ ಆ ಸಂತತಿಯ ಸೈನಿಕರೆಲ್ಲರು ಸತ್ತುಹೋಗಿದ್ದರು. ಪಾಳೆಯದಿಂದ ಅವರನ್ನು ಸಂಪೂರ್ಣವಾಗಿ ಹೊರಹಾಕುವವರೆಗೂ ಯೆಹೋವ ದೇವರ ಹಸ್ತವು ಅವರ ಮೇಲಿತ್ತು.

ಉಳಿದ ಯುದ್ಧ ಮಾಡುವವರು ಜನರೊಳಗಿಂದ ಸತ್ತು ಹೋದ ಮೇಲೆ, ಯೆಹೋವ ದೇವರು ನನ್ನೊಂದಿಗೆ ಮಾತನಾಡಿ ನನಗೆ, “ಇಂದು ನೀನು ಮೋವಾಬಿನ ಮೇರೆಯಾದ ಆರ್ ಎಂಬ ಸ್ಥಳವನ್ನು ದಾಟಬೇಕು. ಅಮ್ಮೋನ್ಯರ ಹತ್ತಿರಕ್ಕೆ ನೀವು ಬಂದಾಗ, ಅವರಿಗೆ ಕಿರುಕುಳ ನೀಡಬೇಡಿರಿ ಅಥವಾ ಅವರನ್ನು ಯುದ್ಧಕ್ಕೆ ಪ್ರಚೋದಿಸಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸೊತ್ತಾಗಿ ಕೊಟ್ಟಿರುವದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನೂ ಕೊಡುವುದಿಲ್ಲ” ಎಂದರು.

ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ಸಹ ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರಿಗೆ ಜಂಜುಮ್ಯರೆಂದು ಕರೆದರು. ಅವರು ಅನಾಕ್ಯರ ಹಾಗೆ ಬಲಿಷ್ಠರೂ ಬಹುಜನರೂ ಎತ್ತರವಾದವರೂ ಆಗಿದ್ದರು. ಆದರೆ ಯೆಹೋವ ದೇವರು ಅವರನ್ನು ಅಮ್ಮೋನಿಯರ ಮುಂದೆ ತೆಗೆದುಹಾಕಿದ್ದರು. ಹೀಗೆ ಅಮ್ಮೋನಿಯರು ಅವರನ್ನು ಹೊರಡಿಸಿ, ಅವರ ಬದಲಾಗಿ ವಾಸಿಸಿದರು. ಯೆಹೋವ ದೇವರು ಸೇಯೀರಿನಲ್ಲಿ ವಾಸವಾಗಿರುವ ಏಸಾವನ ಮಕ್ಕಳಿಗೆ ಮಾಡಿದ ಹಾಗೆ ಆಯಿತು. ದೇವರು ಅವರ ಮುಂದೆ ಹೋರಿಯರನ್ನು ತೆಗೆದುಹಾಕಿದರು. ಹೀಗೆ ಅವರು ಹೋರಿಯರನ್ನು ಹೊರಡಿಸಿ, ಇವರ ಬದಲಾಗಿ ಇಂದಿನವರೆಗೂ ವಾಸಿಸುತ್ತಿದ್ದಾರೆ. ಹಾಗೆ ಗಾಜಾ ಪಟ್ಟಣದವರೆಗೂ ವಾಸವಾಗಿದ್ದ ಅವ್ವೀಯರನ್ನು ಕಫ್ತೋರಿಂದ ಬಂದ ಕಫ್ತೋರ್ಯರು ನಾಶಮಾಡಿ, ಅವರ ಬದಲಾಗಿ ವಾಸಿಸಿದರು.

ಹೆಷ್ಬೋನಿನ ಅರಸನಾದ ಸೀಹೋನನನ್ನು ಸೋಲಿಸಿದ್ದು

“ಈಗ ಏಳಿರಿ, ಹೊರಡಿರಿ, ಅರ್ನೋನ್ ಹಳ್ಳವನ್ನು ದಾಟಿರಿ, ಇಗೋ, ಹೆಷ್ಬೋನಿನ ಅರಸ ಅಮೋರಿಯನಾದ ಸೀಹೋನನನ್ನೂ, ಅವನ ದೇಶವನ್ನೂ ನಿಮ್ಮ ಕೈಯಲ್ಲಿ ಕೊಟ್ಟಿದ್ದೇನೆ. ಅವನ ಸಂಗಡ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆರಂಭಮಾಡಿರಿ. ಇದೇ ದಿವಸ ಆಕಾಶದ ಕೆಳಗಿರುವ ಜನಾಂಗಗಳ ಮೇಲೆ ನಿಮ್ಮ ಹೆದರಿಕೆಯೂ ಮತ್ತು ಭಯವೂ ಉಂಟಾಗುವಂತೆ ಮಾಡುತ್ತೇನೆ. ಅವರು ನಿಮ್ಮ ಸುದ್ದಿಯನ್ನು ಕೇಳಿ ನಡುಗಿ ಅಂಜುವರು,” ಎಂದರು.

ಆಗ ನಾನು ಕೆದೇಮೋತೆಂಬ ಮರುಭೂಮಿಯಿಂದ ಹೆಷ್ಬೋನಿನ ಅರಸನಾದ ಸೀಹೋನನಿಗೆ ಸಮಾಧಾನದ ಸುದ್ದಿಯನ್ನು ತಿಳಿಸುವಂತೆ ದೂತರನ್ನು ಕಳುಹಿಸಿ, “ನಾವು ನಿನ್ನ ನಾಡನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಕ್ಕೂ ಬಲಕ್ಕೂ ತಿರುಗದೆ ರಾಜ ಮಾರ್ಗದಿಂದಲೇ ಹೋಗುವೆವು. ನಾವು ಊಣ್ಣುವುದಕ್ಕೆ ಆಹಾರವನ್ನೂ ಕುಡಿಯಲು ನೀರನ್ನು ಹಣಕೊಟ್ಟು ನಿಮ್ಮಿಂದ ಕೊಂಡುಕೊಳ್ಳುತ್ತೇವೆ. ಕಾಲ್ನಡಿಗೆಯಿಂದ ನಿಮ್ಮ ನಾಡನ್ನು ಹಾದು ಹೋಗುತ್ತೇವಷ್ಟೆ. ನಾವು ಯೊರ್ದನಿನ ಆಚೆಗೆ ನಮ್ಮ ದೇವರಾದ ಯೆಹೋವ ದೇವರು ನಮಗೆ ಕೊಡುವ ದೇಶಕ್ಕೆ ಹೋಗುವವರಿದ್ದೇವೆ. ಸೇಯೀರಿನಲ್ಲಿ ವಾಸಮಾಡುವ ಏಸಾವನ ಮಕ್ಕಳೂ ಆರ್ ಪ್ರದೇಶದಲ್ಲಿ ವಾಸಮಾಡುವ ಮೋವಾಬ್ಯರೂ ನಮಗೆ ದಾರಿಕೊಟ್ಟಂತೆ ನೀವೂ ನಮಗೆ ಕೊಡಬೇಕು,” ಎಂದೆನು. ಆದರೆ ಹೆಷ್ಬೋನಿನ ಅರಸನಾದ ಸೀಹೋನನು ನಮ್ಮನ್ನು ತನ್ನ ಬಳಿಯಿಂದ ದಾಟಿಹೋಗಲು ಸಮ್ಮತಿಸಲಿಲ್ಲ. ಏಕೆಂದರೆ ಅವನನ್ನು ನಿಮ್ಮ ಕೈಯಲ್ಲಿ ಒಪ್ಪಿಸುವ ಹಾಗೆ ನಿಮ್ಮ ದೇವರಾದ ಯೆಹೋವ ದೇವರು ಅವನ ಬುದ್ಧಿಯನ್ನು ಮಂಕುಮಾಡಿ, ಹೃದಯವನ್ನು ಕಠಿಣಪಡಿಸಿದರು. ಈಗಾಗಲೇ ಅದು ನೆರವೇರಿದೆ.

ಇದಲ್ಲದೆ ಯೆಹೋವ ದೇವರು ನನಗೆ, “ಸೀಹೋನನನ್ನೂ ಅವನ ದೇಶವನ್ನೂ ನಿನ್ನ ಮುಂದೆ ಒಪ್ಪಿಸುವುದಕ್ಕೆ ಆರಂಭಮಾಡಿದ್ದೇನೆ, ಅವನ ದೇಶವನ್ನು ಸೊತ್ತಾಗಿ ಹೊಂದುವಂತೆ ವಶಪಡಿಸಿಕೊಳ್ಳುವುದಕ್ಕೆ ಆರಂಭಮಾಡು,” ಎಂದು ಹೇಳಿದರು.

ಆಗ ಸೀಹೋನನು ತನ್ನ ಜನರೆಲ್ಲರ ಸಂಗಡ ನಮ್ಮೊಡನೆ ಯುದ್ಧಮಾಡುವುದಕ್ಕೆ ಯಹಚಗೆ ಹೊರಟುಬಂದನು. ನಮ್ಮ ದೇವರಾದ ಯೆಹೋವ ದೇವರು ಅವನನ್ನು ನಮ್ಮ ಕೈಗೆ ಕೊಟ್ಟುಬಿಟ್ಟಿದ್ದರಿಂದ, ಅವನನ್ನೂ ಅವನ ಮಕ್ಕಳನ್ನೂ ಅವನ ಜನರೆಲ್ಲರನ್ನೂ ಸೋಲಿಸಿದೆವು. ಆ ಕಾಲದಲ್ಲಿ ಅವನ ಪಟ್ಟಣಗಳನ್ನೆಲ್ಲಾ ತೆಗೆದುಕೊಂಡು, ಪ್ರತಿಯೊಂದು ಪಟ್ಟಣದ ಗಂಡಸರನ್ನೂ ಹೆಂಗಸರನ್ನೂ ಚಿಕ್ಕವರನ್ನೂ ನಿರ್ಮೂಲ ಮಾಡಿದೆವು. ಒಬ್ಬರನ್ನೂ ಉಳಿಸಲಿಲ್ಲ. ಪಶುಗಳನ್ನು ಮಾತ್ರ ನಮಗೆ ತೆಗೆದುಕೊಂಡು, ಪಟ್ಟಣಗಳನ್ನು ಸೂರೆಮಾಡಿದೆವು. ಅರ್ನೋನಿನ ತೀರದಲ್ಲಿರುವ ಅರೋಯೇರ್ ಹಳ್ಳದ ಪಟ್ಟಣವು ಮೊದಲ್ಗೊಂಡು ಗಿಲ್ಯಾದಿನವರೆಗೂ ಒಂದು ಪಟ್ಟಣವಾದರೂ ನಮಗೆ ಅಸಾಧ್ಯವಾಗಿರಲಿಲ್ಲ. ನಮ್ಮ ದೇವರಾದ ಯೆಹೋವ ದೇವರು ಅವುಗಳನ್ನೆಲ್ಲಾ ನಮ್ಮ ಕೈಗೆ ಒಪ್ಪಿಸಿದರು. ಅಮ್ಮೋನಿಯರ ದೇಶದ ಯಬ್ಬೋಕ್ ನದಿಯ ಬಳಿಯಲ್ಲಿರುವ ಸ್ಥಳವನ್ನೂ ಪರ್ವತ ಪಟ್ಟಣವನ್ನೂ ನಮ್ಮ ದೇವರಾದ ಯೆಹೋವ ದೇವರು ನಮಗೆ ಬೇಡವೆಂದ ಕಾರಣ, ಆ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.