Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಸಮುಯೇಲ 8

ದಾವೀದನ ವಿಜಯಗಳು

ಇದರ ತರುವಾಯ ದಾವೀದನು ಫಿಲಿಷ್ಟಿಯರ ಮೇಲೆ ದಾಳಿಮಾಡಿ ಅವರನ್ನು ಸೋಲಿಸಿ, ಅವರಿಂದ ಮೇತೆಗ್ ಅಮ್ಮಹವನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.

ಹಾಗೆಯೇ ದಾವೀದನು ಮೋವಾಬ್ಯರನ್ನು ಸಹ ಸೋಲಿಸಿದನು. ಸೆರೆಯಾಳುಗಳನ್ನು ನೆಲದ ಮೇಲೆ ಹಗ್ಗದಿಂದ ಅಳತೆ ಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ, ಒಂದು ಪಾಲನ್ನು ಉಳಿಸಿದನು. ಹೀಗೆ ಮೋವಾಬ್ಯರು ದಾವೀದನಿಗೆ ಅಧೀನರಾಗಿ ಕಪ್ಪಕೊಡುವವರಾದರು.

ಇದಲ್ಲದೆ ದಾವೀದನು ಯೂಫ್ರೇಟೀಸ್ ನದಿಯ ಬಳಿಯಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸುವದಕ್ಕೆ ಹೋಗುತ್ತಿರುವಾಗ, ಚೋಬದ ಅರಸನಾದ ರೆಹೋಬನ ಮಗ ಹದದೆಜೆರನನ್ನು ಸೋಲಿಸಿದನು. ದಾವೀದನು ಅವನಿಂದ ಸಾವಿರ ರಥಗಳನ್ನೂ, ಏಳು ಸಾವಿರ ರಾಹುತರನ್ನೂ, ಇಪ್ಪತ್ತು ಸಾವಿರ ಕಾಲಾಳುಗಳನ್ನೂ ವಶಪಡಿಸಿಕೊಂಡನು. ನೂರು ರಥಗಳಿಗೆ ಕುದುರೆಗಳನ್ನು ಉಳಿಸಿ, ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ಯಿಸಿಬಿಟ್ಟನು.

ದಮಸ್ಕದ ಅರಾಮ್ಯರು ಚೋಬದ ಅರಸ ಹದದೆಜೆರನಿಗೆ ಸಹಾಯಮಾಡಲು ಬಂದಾಗ, ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸಂಹರಿಸಿಬಿಟ್ಟನು. ತರುವಾಯ ದಾವೀದನು ದಮಸ್ಕದ ಅರಾಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಹೀಗೆ ಅರಾಮ್ಯರು ದಾವೀದನಿಗೆ ಅಧೀನರಾಗಿ, ಕಪ್ಪವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.

ದಾವೀದನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು, ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ, ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯಧಿಕವಾಗಿ ಕಂಚನ್ನು ತೆಗೆದುಕೊಂಡು ಬಂದನು.

ದಾವೀದನು ಹದದೆಜೆರನ ಸಮಸ್ತ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನವನ್ನು ಹಮಾತಿನ ಅರಸನಾದ ತೋವು ಕೇಳಿದಾಗ, ಅವನು ಅರಸನಾದ ದಾವೀದನ ಕ್ಷೇಮಸಮಾಚಾರವನ್ನು ವಿಚಾರಿಸಲೂ, ಹದದೆಜೆರನ ವಿರುದ್ಧ ಯುದ್ಧಮಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಅವನನ್ನು ಅಭಿನಂದಿಸಿ, ಹರಸುವಂತೆ, ತೋವು ತನ್ನ ಪುತ್ರನಾದ ಯೋರಾಮನನ್ನು ಬೆಳ್ಳಿ, ಬಂಗಾರ, ಕಂಚಿನ ಪಾತ್ರೆಗಳ ಸಹಿತವಾಗಿ ದಾವೀದನ ಬಳಿಗೆ ಕಳುಹಿಸಿದನು; ಏಕೆಂದರೆ ಹದದೆಜೆರನಿಗೆ ತೋವಿಯ ಸಂಗಡ ಯುದ್ಧಗಳಿದ್ದವು.

ಅರಸನಾದ ದಾವೀದನು ಚಿನ್ನ, ಬೆಳ್ಳಿ ಮತ್ತು ಕಂಚಿನ ಎಲ್ಲಾ ವಸ್ತುಗಳನ್ನು ಯೆಹೋವ ದೇವರಿಗೆ ಸಮರ್ಪಿಸಿದನು. ಜೊತೆಗೆ ಅವನು ಸೋತ ಎಲ್ಲಾ ದೇಶಗಳಿಂದ ವಶಪಡಿಸಿಕೊಂಡ ವಸ್ತುಗಳನ್ನೂ ಅರ್ಪಿಸಿದನು. ಅಂದರೆ, ಅರಾಮ್ಯರು, ಮೋವಾಬ್ಯರು, ಅಮ್ಮೋನ್ಯರು, ಫಿಲಿಷ್ಟಿಯರು, ಅಮಾಲೇಕ್ಯರು ಮತ್ತು ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಿಂದ ಪಡೆದ ಕೊಳ್ಳೆಯನ್ನೂ ಯೆಹೋವ ದೇವರಿಗೆ ಪ್ರತಿಷ್ಠೆ ಮಾಡಿದನು.

ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂದಿರುಗಿದಾಗ ಪ್ರಖ್ಯಾತಿ ಹೊಂದಿದನು.

ಸಮಸ್ತ ಎದೋಮಿನಲ್ಲಿ ಕಾವಲುದಂಡುಗಳನ್ನು ಇಟ್ಟನು. ಇದರಿಂದ, ಎದೋಮ್ಯರೆಲ್ಲರು ದಾವೀದನಿಗೆ ಅಧೀನರಾದರು. ದಾವೀದನು ಹೋದಲ್ಲೆಲ್ಲಾ ಯೆಹೋವ ದೇವರು ಅವನಿಗೆ ಜಯಕೊಟ್ಟರು.

ದಾವೀದನ ಅಧಿಕಾರಿಗಳು

ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ ತನ್ನ ಸಮಸ್ತ ಜನರಿಗೂ ನೀತಿ ನ್ಯಾಯಗಳಿಂದ ನಡೆಸುತ್ತಿದ್ದನು. ಚೆರೂಯಳ ಮಗ ಯೋವಾಬನು ಸೈನ್ಯದ ಅಧಿಪತಿಯಾಗಿದ್ದನು. ಅಹೀಲೂದನ ಮಗ ಯೆಹೋಷಾಫಾಟನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನಾಗಿದ್ದನು. ಅಹೀಟೂಬನ ಮಗ ಚಾದೋಕನೂ ಅಬಿಯಾತರನ ಮಗ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು. ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಮುಖ್ಯಸ್ಥನಾಗಿದ್ದನು. ದಾವೀದನ ಪುತ್ರರು ಸಮಾಲೋಚಕರಾಗಿದ್ದರು1.

Source notes (1)
  1. Footnote ಅಥವಾ, ಯಾಜಕ ನೋಡಿರಿ 1 ಪೂರ್ವ 18:17

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.