Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಪೇತ್ರನು 3

ಕರ್ತ ಯೇಸುವಿನ ದಿನವು

ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ. ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ನಮಗೆ ಕರ್ತ ಹಾಗೂ ರಕ್ಷಕ ಆಗಿರುವವರು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ.

ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು, “ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?” ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು. ಆದರೆ ಪೂರ್ವಕಾಲದಲ್ಲಿ ದೇವರ ವಾಕ್ಯದಿಂದ ಆಕಾಶವು ಅಸ್ತಿತ್ವಕ್ಕೆ ಬಂದಿತು ಎಂತಲೂ ಜಲದಿಂದ ಜಲದ ಮೂಲಕ ಭೂಮಿಯು ಉಂಟಾಯಿತೆಂಬುದನ್ನು ಅವರು ಬೇಕೆಂತಲೇ ಮರೆತುಬಿಡುತ್ತಾರೆ. ಈ ಜಲದಿಂದ ಆ ಸಮಯದಲ್ಲಿ ಜಗತ್ತು ಪ್ರಳಯದಲ್ಲಿ ನಾಶವಾಯಿತು. ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.

ಆದರೆ ಪ್ರಿಯರೇ, ಕರ್ತದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ. ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.

ಆದರೂ ಕರ್ತ ಯೇಸುವಿನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.

ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು. ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿಹತ್ತಿ ಲಯವಾಗಿ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ? ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.

ಆದಕಾರಣ ಪ್ರಿಯ ಸ್ನೇಹಿತರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವುದರಿಂದ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಅವರಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವರಾಗಿರಿ. ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ. ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ವಿಷಯಗಳು ತಿಳಿಯುವುದಕ್ಕೆ ಕಷ್ಟವಾಗಿವೆ. ಪವಿತ್ರ ವೇದದ ಮಿಕ್ಕಾದ ಭಾಗಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ವಿದ್ಯಾಹೀನರೂ ಚಪಲಚಿತ್ತರೂ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.

ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವುದರಿಂದ ನಿಯಮರಹಿತರ ಸೆಳೆಯುವಿಕೆಗೆ ಮರುಳಾಗಿ ನಿಮ್ಮ ಸ್ಥಿರತೆಯಿಂದ ಬಿದ್ದುಹೋಗದಂತೆ ಎಚ್ಚರಿಕೆಯಿಂದಿರಿ. ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ.

ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.