Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಅರಸುಗಳು 11

ಅತಲ್ಯಳು ಹಾಗೂ ಯೋವಾಷ್

ಅಹಜ್ಯನ ತಾಯಿಯಾದ ಅತಲ್ಯಳು ತನ್ನ ಮಗನು ಸತ್ತು ಹೋದದ್ದನ್ನು ಕಂಡಾಗ, ಅವಳು ಎದ್ದು ರಾಜಸಂತಾನದವರನ್ನೆಲ್ಲಾ ನಾಶಮಾಡಲು ಆರಂಭಿಸಿದಳು. ಆದರೆ ಅರಸನಾದ ಯೆಹೋರಾಮನ1 ಮಗಳೂ ಅಹಜ್ಯನ ಸಹೋದರಿಯೂ ಆದ ಯೆಹೋಷೆಬಳು ಹತರಾಗುವುದಕ್ಕಿದ್ದ ಅರಸನ ಮಕ್ಕಳ ಮಧ್ಯದಿಂದ ಅಹಜ್ಯನ ಮಗನಾದ ಯೋವಾಷನನ್ನು ಕದ್ದುಕೊಂಡು ಹೋಗಿ ಅವನು ಹತನಾಗದ ಹಾಗೆ ಅವನನ್ನೂ ಅವನ ದಾದಿಯನ್ನೂ ಅತಲ್ಯಳಿಗೆ ಕಾಣದ ಹಾಗೆ ಮಲಗುವ ಕೋಣೆಯಲ್ಲಿ ಬಚ್ಚಿಟ್ಟಳು. ಹೀಗೆ ಅವನು ಯೆಹೋಷೆಬಳ ಸಂಗಡ ಆರು ವರ್ಷ ಯೆಹೋವ ದೇವರ ಆಲಯದಲ್ಲಿ ಗುಪ್ತವಾಗಿದ್ದನು, ಈ ಆರು ವರ್ಷ ಅತಲ್ಯಳು ದೇಶವನ್ನು ಆಳುತ್ತಾ ಇದ್ದಳು.

ಏಳನೆಯ ವರ್ಷದಲ್ಲಿ ಯೆಹೋಯಾದಾವನು ಶತಾಧಿಪತಿಯಾದವರನ್ನೂ, ಕಾರಿ ಎಂಬ ಸಿಪಾಯಿಗಳ ಅಧಿಪತಿಗಳನ್ನೂ ಕಾವಲುಗಾರರ ಸಹಿತವಾಗಿ ಕರೆಯಿಸಿ, ತನ್ನ ಬಳಿಗೆ ಯೆಹೋವ ದೇವರ ಆಲಯಕ್ಕೆ ಕರೆದುಕೊಂಡು ಬಂದನು. ಅವರ ಸಂಗಡ ಒಡಂಬಡಿಕೆಯನ್ನು ಮಾಡಿ, ಯೆಹೋವ ದೇವರ ಆಲಯದಲ್ಲಿ ಅವರಿಂದ ಪ್ರಮಾಣ ತೆಗೆದುಕೊಂಡು, ಅನಂತರ ಅವನಿಗೆ ಅರಸನ ಮಗನನ್ನು ತೋರಿಸಿದನು. ಅವರಿಗೆ, “ನೀವು ಮಾಡಬೇಕಾದದ್ದೇನೆಂದರೆ, ಸಬ್ಬತ್ ದಿನದಲ್ಲಿ ಪ್ರವೇಶಿಸುವ ನಿಮ್ಮಲ್ಲಿರುವ ಮೂರನೇ ಒಂದು ಭಾಗವು ಅರಮನೆಯ ಕಾವಲುಗಾರರಾಗಿರಬೇಕು. ಇನ್ನೊಂದು ಭಾಗವು ಸೂರ್ ಎಂಬ ಬಾಗಿಲ ಬಳಿಯಲ್ಲಿಯೂ, ಮತ್ತೊಂದು ಭಾಗವು ಕಾವಲಿನ ಹಿಂದೆ ಇರುವ ಬಾಗಿಲ ಬಳಿಯಲ್ಲಿಯೂ ಇರಿ. ಹೀಗೆಯೇ ದೇವಾಲಯ ಕಾವಲು ಮುರಿಯದ ಹಾಗೆ ಅದನ್ನು ಕಾಯಿರಿ. ಇದಲ್ಲದೆ ಸಬ್ಬತ್ ದಿನದಲ್ಲಿ ಹೊರಡುವ ನಿಮ್ಮೆಲ್ಲರಲ್ಲಿ ಎರಡು ಭಾಗ ಯೆಹೋವ ದೇವರ ಆಲಯದಲ್ಲಿರುವ ಅರಸನನ್ನು ಕಾಯುವವರಾಗಿರಿ. ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅರಸನ ಸುತ್ತಲೂ ಇರಬೇಕು. ಯಾವನಾದರೂ ನಿಮ್ಮ ಸಾಲುಗಳಲ್ಲಿ ನುಗ್ಗುವಂಥವನನ್ನು ಸಂಹರಿಸಬೇಕು. ಆದರೆ ಅರಸನು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ನೀವು ಅವನ ಜೊತೆಯಲ್ಲಿಯೇ ಇರಬೇಕು,” ಎಂದು ಆಜ್ಞಾಪಿಸಿದನು.

ಯಾಜಕನಾದ ಯೆಹೋಯಾದಾವನು ಆಜ್ಞಾಪಿಸಿದ ಪ್ರಕಾರ ಶತಾಧಿಪತಿಗಳು ಮಾಡಿದರು. ಪ್ರತಿ ಮನುಷ್ಯನು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಬರತಕ್ಕ ಸಿಪಾಯಿಗಳನ್ನು ಯೆಹೋಯಾದಾವನ ಬಳಿಗೆ ಕರೆದುಕೊಂಡು ಬಂದರು. ಆಗ ಯಾಜಕನು ಯೆಹೋವ ದೇವರ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ, ಗುರಾಣಿಗಳನ್ನೂ ಶತಾಧಿಪತಿಗಳಿಗೆ ಕೊಟ್ಟನು. ಕಾವಲುಗಾರರಲ್ಲಿ ಪ್ರತಿ ಮನುಷ್ಯನು ತನ್ನ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡು ಬಲಿಪೀಠದ ಬಳಿಯಲ್ಲಿಯೂ, ಆಲಯದ ಬಳಿಯಲ್ಲಿಯೂ, ಆಲಯದ ಬಲಗಡೆಯ ಮೊದಲುಗೊಂಡು, ಆಲಯದ ಎಡಗಡೆಯವರೆಗೂ ಅರಸನ ಸುತ್ತಲೂ ನಿಂತುಕೊಂಡರು.

ಆಗ ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆತಂದು, ಅವನ ತಲೆಯ ಮೇಲೆ ಕಿರೀಟವನ್ನಿಟ್ಟು, ಕೈಗೆ ದೇವರ ನಿಯಮ ಗ್ರಂಥವನ್ನು ಕೊಟ್ಟು, ಅರಸನನ್ನಾಗಿ ಮಾಡಿ ಅವನನ್ನು ಅಭಿಷೇಕಿಸಿದರು. ಕೂಡಲೆ ಜನರು ಚಪ್ಪಾಳೆ ಹೊಡೆದು, “ಅರಸನು ಚಿರಂಜೀವಿಯಾಗಿರಲಿ!” ಎಂದು ಹರಸಿದರು.

ಅತಲ್ಯಳು ಕಾವಲುಗಾರರ ಮತ್ತು ಜನರ ಶಬ್ದವನ್ನೂ ಕೇಳಿದಾಗ, ಯೆಹೋವ ದೇವರ ಆಲಯದಲ್ಲಿ ಜನರ ಬಳಿಗೆ ಬಂದಳು. ಅಲ್ಲಿ ಅರಸನು ಪದ್ಧತಿಯ ಪ್ರಕಾರ ಕಂಬದ ಬಳಿಯಲ್ಲಿ ನಿಂತಿದ್ದನು. ಪ್ರಧಾನರೂ, ತುತೂರಿ ಊದುವವರೂ ಅರಸನ ಬಳಿಯಲ್ಲಿ ನಿಂತಿದ್ದರು. ಇದಲ್ಲದೆ ದೇಶದ ಜನರೆಲ್ಲರೂ ಸಂತೋಷಪಟ್ಟು ತುತೂರಿಗಳನ್ನು ಊದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ತನ್ನ ವಸ್ತ್ರಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.

ಆಗ ಯಾಜಕನಾದ ಯೆಹೋಯಾದಾವನು ಸೈನ್ಯದ ಮೇಲೆ ಇರುವ ಶತಾಧಿಪತಿಗಳಿಗೆ, “ಅವಳನ್ನು ಯೆಹೋವ ದೇವರ ಆಲಯದಲ್ಲಿ ಕೊಲ್ಲಬೇಡಿರಿ, ಎರಡು ಸಾಲು ಸಿಪಾಯಿಗಳು ಅವಳನ್ನು ನಡುವೆ ಸಾಗಿಸಿಕೊಂಡು ಹೋಗಿ ಹೊರಗೆ ತಳ್ಳಲಿ ಮತ್ತು ಅವಳನ್ನು ಹಿಂಬಾಲಿಸುವಂಥವರನ್ನು ಖಡ್ಗದಿಂದ ಕೊಂದುಹಾಕಿರಿ,” ಎಂದು ಆಜ್ಞಾಪಿಸಿದನು. ಆಗ ಅವರು ಅವಳನ್ನು ಅಧೀನಕ್ಕೆ ತೆಗೆದುಕೊಂಡು, ಕುದುರೆಗಳು ಅರಸನ ಮನೆಯೊಳಕ್ಕೆ ಬರುವ ಮಾರ್ಗದಲ್ಲಿ ಅವಳನ್ನು ಕೊಂದುಹಾಕಿದರು.

ಅನಂತರ ಯೆಹೋವ ದೇವರ ಜನರಾಗಿರುವಂತೆ ಯೆಹೋಯಾದಾವನು ಯೆಹೋವ ದೇವರಿಗೂ, ಅರಸನಿಗೂ, ಜನರಿಗೂ ಮಧ್ಯೆ ಒಡಂಬಡಿಕೆ ಮಾಡಿದನು. ಹಾಗೆಯೇ ಅರಸನಿಗೂ, ಜನರಿಗೂ ಮಧ್ಯದಲ್ಲಿ ಒಡಂಬಡಿಕೆ ಮಾಡಿಸಿದನು. ದೇಶದ ಜನರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಅದನ್ನು ಕೆಡವಿಹಾಕಿ, ಅದರ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ತುಂಡುತುಂಡಾಗಿ ಒಡೆದುಬಿಟ್ಟು, ಬಲಿಪೀಠಗಳ ಮುಂದೆ ಬಾಳನ ಯಾಜಕನಾದ ಮತ್ತಾನನನ್ನು ಕೊಂದುಹಾಕಿದರು.

ಆಗ ಯಾಜಕನಾದ ಯೆಹೋಯಾದಾವನು ಯೆಹೋವ ದೇವರ ಆಲಯಕ್ಕೆ ಕಾವಲುಗಾರರನ್ನು ನೇಮಿಸಿದನು. ಅವನು ಶತಾಧಿಪತಿಗಳನ್ನೂ, “ಕಾರಿ” ಎಂಬ ಸಿಪಾಯಿಗಳ ಅಧಿಕಾರಿಗಳನ್ನೂ, ಕಾವಲುಗಾರರನ್ನೂ, ದೇಶದ ಜನರೆಲ್ಲರನ್ನೂ ಕರೆದುಕೊಂಡು ಹೋಗಿ, ಅರಸನನ್ನು ಯೆಹೋವ ದೇವರ ಆಲಯದಿಂದ ಕಾವಲುಗಾರರ ಬಾಗಿಲ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಬಂದು, ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. ಅತಲ್ಯಳನ್ನು ಅರಮನೆಯ ಬಳಿಯಲ್ಲಿ ಖಡ್ಗದಿಂದ ಕೊಂದುಹಾಕಿದ್ದರಿಂದ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.

ಯೋವಾಷ್2 ಅರಸನಾದಾಗ ಏಳು ವರ್ಷದವನಾಗಿದ್ದನು.

Source notes (2)
  1. Footnote ಯೆಹೋರಾಮ ಅಥವಾ ಯೋರಾಮ
  2. Footnote ಯೋವಾಷ್ ಅಥವಾ ಯೆಹೋವಾಷ್

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.