Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಪೂರ್ವಕಾಲ ವೃತ್ತಾಂತ 8

ಸೊಲೊಮೋನನ ಇತರ ಚಟುವಟಿಕೆಗಳು

ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ, ಹೀರಾಮನು ಸೊಲೊಮೋನನಿಗೆ ತಿರುಗಿ ಕೊಟ್ಟ ಪಟ್ಟಣಗಳನ್ನು ಸೊಲೊಮೋನನು ಕಟ್ಟಿಸಿ, ಇಸ್ರಾಯೇಲರನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು. ಸೊಲೊಮೋನನು ಹಮಾತ್ ಚೋಬವನ್ನು ವಶಪಡಿಸಿಕೊಂಡನು. ಅವನು ಮರುಭೂಮಿಯಲ್ಲಿರುವ ತದ್ಮೋರ್ ಪಟ್ಟಣವನ್ನೂ, ಹಮಾತಿನಲ್ಲಿರುವ ಉಗ್ರಾಣದ ಪಟ್ಟಣಗಳನ್ನೂ ಕಟ್ಟಿಸಿದನು. ಇವುಗಳಲ್ಲದೆ, ಮೇಲಿನ ಬೇತ್ ಹೋರೋನ್ ಮತ್ತು ಕೆಳಗಿನ ಬೇತ್ ಹೋರೋನ್ ಪಟ್ಟಣಗಳನ್ನು ಪುನಃ ನಿರ್ಮಿಸಿದನು. ಈ ಪಟ್ಟಣಗಳು ಬಲವಾದ ಗೋಡೆಗಳು, ಬಾಗಿಲುಗಳು ಮತ್ತು ಅಗುಳಿಗಳು ಉಳ್ಳ ಕೋಟೆ ಪಟ್ಟಣಗಳಾಗಿ ಸೊಲೊಮೋನನು ಕಟ್ಟಿಸಿದನು. ಅಲ್ಲದೆ, ಬಾಲಾತ್ ಪಟ್ಟಣವನ್ನೂ, ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.

ಸೊಲೊಮೋನನು ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು. ಆದರೆ ಸೊಲೊಮೋನನು ತನ್ನ ಕೆಲಸಕ್ಕಾಗಿ ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಆದರೆ ಅವರು ಯುದ್ಧಭಟರಾಗಿಯೂ, ಅಧಿಪತಿಗಳಲ್ಲಿ ಪ್ರಧಾನರಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇರುವಂತೆ ಮಾಡಿದನು. ಇವರು ಅರಸನಾದ ಸೊಲೊಮೋನನ ಅಧಿಪತಿಗಳಲ್ಲಿ ಪ್ರಧಾನರಾಗಿದ್ದರು, ಇವರು ಇನ್ನೂರೈವತ್ತು ಮಂದಿ ಆಳುಗಳ ಮೇಲೆ ಅಧಿಕಾರಿಗಳಾಗಿದ್ದರು.

ಸೊಲೊಮೋನನು, “ಯೆಹೋವ ದೇವರ ಒಡಂಬಡಿಕೆಯ ಮಂಜೂಷವಿದ್ದ ಸ್ಥಳಗಳು ಪರಿಶುದ್ಧವಾಗಿರುವುದರಿಂದ, ನನ್ನ ಹೆಂಡತಿಯು ಇಸ್ರಾಯೇಲಿನ ಅರಸನಾದ ದಾವೀದನ ಅರಮನೆಯಲ್ಲಿ ವಾಸವಾಗಿರಕೂಡದು,” ಎಂದು ಹೇಳಿ ಸೊಲೊಮೋನನು ಫರೋಹನ ಮಗಳನ್ನು ದಾವೀದನ ಪಟ್ಟಣದಲ್ಲಿರಿಸದೆ ತಾನು ಆಕೆಗೋಸ್ಕರ ಕಟ್ಟಿಸಿದ ಅರಮನೆಯಲ್ಲಿ ಅವಳನ್ನು ಇರಿಸಿದನು.

ಆಗ ಸೊಲೊಮೋನನು ದ್ವಾರಾಂಗಳದ ಮುಂದೆ ತಾನು ಕಟ್ಟಿಸಿದ ಯೆಹೋವ ದೇವರ ಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸಿದನು. ದಿನಂಪ್ರತಿ ಮೋಶೆಯ ಆಜ್ಞೆಯ ಪ್ರಕಾರ ವಿಶ್ರಾಂತಿಯ ದಿನಗಳಲ್ಲಿಯೂ ಅಮಾವಾಸ್ಯೆಗಳಲ್ಲಯೂ ವರುಷಕ್ಕೆ ಮೂರು ಸಾರಿ ಪವಿತ್ರ ಹಬ್ಬಗಳಾದ ಹುಳಿಯಿಲ್ಲದ ರೊಟ್ಟಿಗಳ ಹಬ್ಬದಲ್ಲಿಯೂ ವಾರಗಳ ಹಬ್ಬದಲ್ಲಿಯೂ ಗುಡಾರಗಳ ಹಬ್ಬದಲ್ಲಿಯೂ ಬಲಿಗಳನ್ನು ಅರ್ಪಿಸಿದನು. ಅವನು ತನ್ನ ತಂದೆಯಾದ ದಾವೀದನ ಕ್ರಮದ ಪ್ರಕಾರ, ಅವರ ಸೇವೆಗೆ ಯಾಜಕ ವರ್ಗಗಳವರನ್ನೂ ಪ್ರತಿ ದಿವಸಕ್ಕೆ ಬೇಕಾದ ಕಾರ್ಯದ ಪ್ರಕಾರ, ಯಾಜಕರ ಮುಂದೆ ಸ್ತುತಿಸುವುದಕ್ಕೂ, ಸೇವೆ ಮಾಡುವುದಕ್ಕೂ ತಮ್ಮ ವಿಚಾರಗಳಲ್ಲಿ ಲೇವಿಯರನ್ನೂ, ಸೇವೆಯ ಬಾಗಿಲಲ್ಲಿ ತಮ್ಮ ವರ್ಗಗಳ ಸರದಿಯ ಪ್ರಕಾರವಾಗಿ ದ್ವಾರಪಾಲಕರನ್ನೂ ನೇಮಿಸಿದನು. ಏಕೆಂದರೆ ದೇವರ ಮನುಷ್ಯನಾದ ದಾವೀದನು ಹಾಗೆಯೇ ನೇಮಿಸಿದ್ದನು. ಅವರು ಯಾವ ಕಾರ್ಯದಲ್ಲಾದರೂ, ಬೊಕ್ಕಸಗಳಲ್ಲಾದರೂ ಅರಸನು ಯಾಜಕರಿಗೂ ಲೇವಿಯರಿಗೂ ಹೇಳಿದ ಆಜ್ಞೆಯನ್ನು ಮೀರಲಿಲ್ಲ.

ಯೆಹೋವ ದೇವರ ಆಲಯದ ಅಸ್ತಿವಾರ ಹಾಕಿದ ದಿವಸದವರೆಗೂ ಅದನ್ನು ಕಟ್ಟಿಸಿ ತೀರಿಸುವವರೆಗೂ ಸೊಲೊಮೋನನ ಕೆಲಸವೆಲ್ಲಾ ಮುಗಿದು, ಯೆಹೋವ ದೇವರ ಆಲಯವು ಸಿದ್ಧವಾಯಿತು.

ಆಗ ಸೊಲೊಮೋನನು ಎದೋಮ್ ದೇಶದ ಸಮುದ್ರತೀರದ ಬಳಿಯಲ್ಲಿರುವ ಎಚ್ಯೋನ್ ಗೆಬೆರ್, ಏಲೋತ್ ಎಂಬ ಊರುಗಳಿಗೆ ಹೊರಟುಹೋದನು. ಹೀರಾಮನು ತನ್ನ ಸೇವಕರ ಮುಖಾಂತರ ಹಡಗುಗಳನ್ನೂ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಅವನ ಬಳಿಗೆ ಕಳುಹಿಸಿದನು. ಅವರು ಸೊಲೊಮೋನನ ಸೇವಕರ ಸಂಗಡ ಓಫೀರಿಗೆ ಹೋಗಿ, ಅಲ್ಲಿಂದ ಅರಸನಾದ ಸೊಲೊಮೋನನಿಗೆ 15,000 ಕಿಲೋಗ್ರಾಂ ಬಂಗಾರವನ್ನು ತೆಗೆದುಕೊಂಡು ಬಂದರು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.