Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಪೂರ್ವಕಾಲ ವೃತ್ತಾಂತ 36

ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದಲಾಗಿ ಅರಸನನ್ನಾಗಿ ಮಾಡಿದರು.

ಯೆಹೂದ್ಯ ಪ್ರಾಂತ್ಯದ ಅರಸನಾದ ಯೆಹೋವಾಹಾಜನು

ಯೆಹೋವಾಹಾಜನು ಅರಸನಾದಾಗ ಇಪ್ಪತ್ತಮೂರು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಈಜಿಪ್ಟ್ ಅರಸನು ಯೆರೂಸಲೇಮಿನಲ್ಲಿ ಅವನನ್ನು ಸಿಂಹಾಸನದಿಂದ ತೆಗೆದುಹಾಕಿ, ಯೆಹೂದ್ಯರು ಅವನಿಗೆ ಮೂರು ಸಾವಿರದ ನಾಲ್ಕುನೂರು ಕಿಲೋಗ್ರಾಂ ಬೆಳ್ಳಿಯನ್ನೂ, ಮೂವತ್ತ ನಾಲ್ಕು ಕಿಲೋಗ್ರಾಂ ಬಂಗಾರವನ್ನೂ ದಂಡ ತೆರುವಂತೆ ಮಾಡಿದನು. ಇದಲ್ಲದೆ ಈಜಿಪ್ಟ್ ಅರಸನು ಯೆಹೋವಾಹಾಜನ ಸಹೋದರನಾದ ಎಲ್ಯಾಕೀಮನನ್ನು ಯೆಹೂದದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿ, ಅವನಿಗೆ ಯೆಹೋಯಾಕೀಮನೆಂಬ ಹೆಸರನ್ನಿಟ್ಟನು. ನೆಕೋವನು ಎಲ್ಯಾಕೀಮನ ಸಹೋದರನಾದ ಯೆಹೋವಾಹಾಜನನ್ನು ತೆಗೆದುಕೊಂಡು ಈಜಿಪ್ಟಿಗೆ ಒಯ್ದನು.

ಯೆಹೂದ್ಯರ ಅರಸನಾದ ಯೆಹೋಯಾಕೀಮನು

ಯೆಹೋಯಾಕೀಮನು ಅರಸನಾದಾಗ ಇಪ್ಪತ್ತೈದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಆದರೆ ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬಿಲೋನಿಗೆ ಒಯ್ಯುವುದಕ್ಕಾಗಿ ಅವನಿಗೆ ಕಂಚಿನ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಯೆಹೋವ ದೇವರ ಆಲಯದ ಪಾತ್ರೆಗಳಲ್ಲಿ ಕೆಲವನ್ನು ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಬಾಬಿಲೋನಿನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು.

ಯೆಹೋಯಾಕೀಮನ ಇತರ ಕ್ರಿಯೆಗಳೂ, ಅವನು ಮಾಡಿದ ಅಸಹ್ಯಗಳೂ, ಅವನಲ್ಲಿ ಕಂಡುಕೊಂಡದ್ದೂ, ಇಸ್ರಾಯೇಲ್ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. ಅವನಿಗೆ ಬದಲಾಗಿ ಅವನ ಮಗ ಯೆಹೋಯಾಖೀನನು ಅರಸನಾದನು.

ಯೆಹೂದ್ಯರ ಅರಸನಾದ ಯೆಹೋಯಾಕೀನನು

ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರ್ಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ, ಅವನನ್ನೂ ಮತ್ತು ಯೆಹೋವ ದೇವರ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಬರಮಾಡಿ, ಅವನ ಸಹೋದರನಾದ1 ಚಿದ್ಕೀಯನನ್ನು ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಅರಸನನ್ನಾಗಿ ಮಾಡಿದನು.

ಯೆಹೂದ್ಯ ಪ್ರಾಂತ್ಯದ ಅರಸನಾದ ಚಿದ್ಕೀಯನು

ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು, ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನು ತನ್ನ ದೇವರಾದ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ, ಯೆಹೋವ ದೇವರು ಹೇಳಿದ ಮಾತುಗಳಂತೆ ಪ್ರವಾದಿಯಾದ ಯೆರೆಮೀಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿಬಿದ್ದನು. ಹೇಗೆಂದರೆ ಅವನು ಇಸ್ರಾಯೇಲಿನ ಯೆಹೋವ ದೇವರ ಕಡೆಗೆ ತಿರುಗದೆ, ಹಟಮಾರಿಯಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ, ಜನರೂ ಜನಾಂಗಗಳ ಅಸಹ್ಯಗಳನ್ನು ಹಿಂಬಾಲಿಸಿ ಬಹಳವಾಗಿ ಅಪನಂಬಿಗಸ್ತರಾಗಿ, ಯೆಹೋವ ದೇವರು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

ಯೆರೂಸಲೇಮಿನ ಬೀಳುವಿಕೆ

ಅವರ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸೇವಕರನ್ನು ಅವನ ಬಳಿಗೆ ಪುನಃ ಕಳುಹಿಸಿದರು. ತಮ್ಮ ಜನರ ಮೇಲೆಯೂ, ತಮ್ಮ ನಿವಾಸ ಸ್ಥಾನದ ಮೇಲೆಯೂ ಅವರು ಕನಿಕರಪಟ್ಟರು. ಆದರೆ ಯೆಹೋವ ದೇವರ ಕೋಪವು ತಮ್ಮ ಜನರಿಗೆ ವಿರೋಧವಾಗಿ ಏಳುವವರೆಗೂ, ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ, ದೇವರ ವಾಕ್ಯಗಳನ್ನು ತಿರಸ್ಕರಿಸಿ, ದೇವರ ಪ್ರವಾದಿಗಳಿಗೆ ಅಪಹಾಸ್ಯ ಮಾಡಿದರು. ಆದ್ದರಿಂದ ದೇವರು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದರು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಖಡ್ಗದಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ, ಕನ್ಯಾಸ್ತ್ರೀಯ ಮೇಲಾದರೂ, ಅತಿವೃದ್ಧನ ಮೇಲಾದರೂ ಕನಿಕರಪಡಲಿಲ್ಲ. ದೇವರು ಸಮಸ್ತ ಜನರನ್ನು ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿದರು. ಇದಲ್ಲದೆ ದೊಡ್ಡವೂ, ಸಣ್ಣವೂ ಆದ ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳು ಆಲಯದ ಬೊಕ್ಕಸಗಳು, ಅರಸನ ಬೊಕ್ಕಸಗಳು, ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬಿಲೋನಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟುಬಿಟ್ಟು, ಯೆರೂಸಲೇಮಿನ ಗೋಡೆಯನ್ನು ಕೆಡವಿಹಾಕಿ, ಅದರ ಅರಮನೆಗಳನ್ನು ಸುಟ್ಟುಬಿಟ್ಟು, ಅದರ ಬೆಲೆಯುಳ್ಳ ಸಲಕರಣೆಗಳನ್ನೆಲ್ಲಾ ನಾಶಮಾಡಿದರು.

ಇದಲ್ಲದೆ ಖಡ್ಗದಿಂದ ತಪ್ಪಿಸಿಕೊಂಡವರನ್ನು ಅವನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು. ಅವರು ಅಲ್ಲಿ ಪಾರಸಿಯ ಸಾಮ್ರಾಜ್ಯ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು. ಹೀಗೆ ಯೆರೆಮೀಯನ ಮುಖಾಂತರವಾಗಿ ಹೇಳಿಸಿದ ಯೆಹೋವ ದೇವರ ವಾಕ್ಯವು ನೆರವೇರಿತು. ದೇಶವು ಅದರ ಸಬ್ಬತ್ ದಿನಗಳನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು, ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಾ ಇತ್ತು.

ಆದರೆ ಪಾರಸಿಯ ಅರಸ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವ ದೇವರು ಯೆರೆಮೀಯನ ಮುಂಖಾತರ ಹೇಳಿದ ವಾಕ್ಯವು ಈಡೇರುವ ಹಾಗೆ ಯೆಹೋವ ದೇವರು ಪಾರಸಿಯ ಅರಸ ಕೋರೆಷನ ಆತ್ಮವನ್ನು ಪ್ರೇರೇಪಿಸಿದ್ದರಿಂದ, ಅವನು ತನ್ನ ಸಮಸ್ತ ರಾಜ್ಯದಲ್ಲಿ ಡಂಗುರದಿಂದಲೂ, ಪತ್ರಗಳಿಂದಲೂ ಸಾರಿ ಹೇಳಿದ್ದೇನೆಂದರೆ,

“ಪಾರಸಿಯ ಅರಸ ಕೋರೆಷನು ಹೀಗೆ ಹೇಳುತ್ತಾನೆ:

“ ‘ಪರಲೋಕದ ದೇವರಾದ ಯೆಹೋವ ದೇವರು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾರೆ ಮತ್ತು ಅವರು ಯೆಹೂದ ದೇಶದ ಯೆರೂಸಲೇಮಿನಲ್ಲಿ ತಮಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾರೆ. ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತೀರೋ, ಅಂಥವರು ಸ್ವಂತನಾಡಿಗೆ ಹೋಗಬಹುದು. ದೇವರಾದ ಯೆಹೋವ ದೇವರು ಅವರ ಸಂಗಡ ಇರಲಿ!’ ” ಎಂದನು.

Source notes (1)
  1. Footnote ಹೀಬ್ರೂ ಭಾಷೆಯಲ್ಲಿ ಸಂಬಂಧಿ ಎಂದು ಅರ್ಥ

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.