Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
1 ತಿಮೊಥೆಯನಿಗೆ 4
ಮುಂಬರುವ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಗೊಟ್ಟು ವಿಶ್ವಾಸದಲ್ಲಿ ಬಿದ್ದುಹೋಗುವರೆಂದು ಪವಿತ್ರಾತ್ಮ ದೇವರು ಸ್ಪಷ್ಟವಾಗಿ ಹೇಳುತ್ತಾರೆ. ಅವರು ಕಪಟಿಗಳೂ ಸುಳ್ಳಾಡುವವರೂ ತಮ್ಮ ಮನಸ್ಸಾಕ್ಷಿಯ ಮೇಲೆ ಬರೆಯುಳ್ಳವರಾದರೂ ಆಗಿದ್ದು ಮದುವೆಯಾಗಬಾರದೆಂತಲೂ ಯಾರು ನಂಬುವವರಾಗಿದ್ದು ಸತ್ಯವನ್ನು ತಿಳಿದುಕೊಂಡಿದ್ದಾರೋ ಅವರು ಕೃತಜ್ಞತಾಸ್ತುತಿ ಮಾಡಿ ತಿನ್ನುವುದಕ್ಕೋಸ್ಕರ ದೇವರು ಸೃಷ್ಟಿಸಿದ ಆಹಾರವನ್ನು ತಿನ್ನಬಾರದೆಂತಲೂ ಆಜ್ಞಾಪಿಸುತ್ತಾರೆ. ದೇವರು ಸೃಷ್ಟಿಸಿದ್ದೆಲ್ಲವೂ ಒಳ್ಳೆಯದಾಗಿದೆ. ಕೃತಜ್ಞತೆ ಮಾಡಿ ಸ್ವೀಕರಿಸುವ ಯಾವುದನ್ನೂ ತಿರಸ್ಕರಿಸಬೇಕಾಗಿಲ್ಲ. ಅದು ದೇವರ ವಾಕ್ಯದಿಂದಲೂ ಪ್ರಾರ್ಥನೆಯಿಂದಲೂ ಪವಿತ್ರವಾಗುತ್ತದೆ.
ಈ ವಿಷಯಗಳನ್ನು ಸಹೋದರರಿಗೆ ತಿಳಿಸುವವನಾದರೆ ನೀನು ಅನುಸರಿಸುತ್ತಿರುವ ನಂಬಿಕೆಯ ಮತ್ತು ಸುಬೋಧನೆಯ ವಾಕ್ಯಗಳಲ್ಲಿ ಪೋಷಣೆ ಹೊಂದುವವನಾಗಿ ಕ್ರಿಸ್ತ ಯೇಸುವಿನ ಒಳ್ಳೆಯ ಸೇವಕನಾಗಿರುವೆ. ಪ್ರಾಪಂಚಿಕ ಹಾಗೂ ಅಜ್ಜಿ ಕಥೆಗಳನ್ನು ನಿರಾಕರಿಸಿ ನೀನು ದೇವಭಕ್ತಿಯನ್ನು ಅಭ್ಯಾಸ ಮಾಡಿಕೋ. ದೇಹ ಸಾಧನೆಯೂ ಸ್ವಲ್ಪಮಟ್ಟಿಗೆ ಲಾಭಕರವಾಗಿದೆ. ಭಕ್ತಿಯಾದರೋ ಎಲ್ಲಾ ವಿಧದಲ್ಲಿಯೂ ಲಾಭಕರವಾದದ್ದು. ಅದಕ್ಕೆ ಈಗಲೂ ಮುಂದೆಯೂ ಜೀವ ವಾಗ್ದಾನ ಉಂಟು. ಈ ಮಾತು ನಂಬತಕ್ಕದ್ದೂ ಪೂರ್ಣ ಅಂಗೀಕಾರಕ್ಕೆ ಯೋಗ್ಯವಾದದ್ದೂ ಆಗಿದೆ. ಇದಕ್ಕಾಗಿ ನಾವು ಕಷ್ಟಪಡುತ್ತೇವೆ ಮತ್ತು ಪ್ರಯಾಸ ಪಡುತ್ತೇವೆ. ಏಕೆಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕ ಆಗಿರುವ ಜೀವಸ್ವರೂಪರಾದ ದೇವರನ್ನು ನಾವು ನಿರೀಕ್ಷಿಸಿದ್ದೇವೆ.
ಈ ವಿಷಯಗಳನ್ನು ಆಜ್ಞಾಪಿಸಿ ಬೋಧಿಸು. ನಿನ್ನ ಯೌವನವನ್ನೂ ಯಾರೂ ತಾತ್ಸಾರ ಮಾಡದಿರಲಿ. ಆದರೆ ನಂಬುವವರಿಗೆ ನುಡಿಯಲ್ಲಿ, ನಡೆಯಲ್ಲಿ, ಪ್ರೀತಿಯಲ್ಲಿ, ವಿಶ್ವಾಸದಲ್ಲಿ, ಶುದ್ಧತ್ವದಲ್ಲಿ ನೀನೇ ಆದರ್ಶನಾಗಿರು. ನಾನು ಬರುವ ತನಕ ಓದುವುದರಲ್ಲಿಯೂ ಎಚ್ಚರಿಸುವುದರಲ್ಲಿಯೂ ಬೋಧಿಸುವುದರಲ್ಲಿಯೂ ಲಕ್ಷ್ಯಕೊಡು. ನಿನ್ನಲ್ಲಿರುವ ವರವನ್ನು ಅಲಕ್ಷ್ಯ ಮಾಡಬೇಡ. ಅದು ಸಭೆಯ ಹಿರಿಯರು ಪ್ರವಾದನೆಯ ಮೂಲಕ ನಿನ್ನ ಮೇಲೆ ಹಸ್ತಗಳನ್ನಿಟ್ಟಾಗ ನಿನಗೆ ಕೊಡಲಾಯಿತಲ್ಲವೇ?
ಈ ವಿಷಯಗಳನ್ನು ಧ್ಯಾನಿಸುವವನಾಗಿರು. ಇವುಗಳಲ್ಲಿಯೇ ನೆಲೆಗೊಂಡಿರು. ಹೀಗೆ ನಿನ್ನ ಪ್ರಗತಿಯು ಎಲ್ಲರಿಗೂ ಪ್ರಕಟವಾಗುವುದು. ನಿನ್ನ ವಿಷಯದಲ್ಲಿಯೂ ಉಪದೇಶದ ವಿಷಯದಲ್ಲಿಯೂ ಎಚ್ಚರಿಕೆಯಾಗಿರು. ನೀನು ಇವುಗಳಲ್ಲಿಯೇ ನಿರತನಾಗಿರು. ಹೀಗೆ ಮಾಡುವುದರಿಂದ ನೀನು ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸುವೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.