Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
1 ಪೂರ್ವಕಾಲ ವೃತ್ತಾಂತ 5
ರೂಬೇನ್
ಇಸ್ರಾಯೇಲಿನ ಚೊಚ್ಚಲಮಗನಾದ ರೂಬೇನನ ಪುತ್ರರು ಇವರು: ಅವನು ಚೊಚ್ಚಲ ಮಗನಾಗಿದ್ದನು. ಆದರೆ ಅವನು ತನ್ನ ತಂದೆಯ ಹಾಸಿಗೆಯನ್ನು ಅಪವಿತ್ರ ಮಾಡಿದ್ದರಿಂದ ಅವನ ಚೊಚ್ಚಲುತನದ ಹಕ್ಕು ಇಸ್ರಾಯೇಲಿನ ಮಗ ಯೋಸೇಫನ ಪುತ್ರರಿಗೆ ಕೊಡಲಾಗಿತ್ತು. ಆದ್ದರಿಂದ ಈ ವಂಶಾವಳಿಯು ಚೊಚ್ಚಲುತನದ ಪ್ರಕಾರ ಬರೆದಿರುವುದಿಲ್ಲ. ಯೆಹೂದನು ತನ್ನ ಸಹೋದರರಿಗಿಂತ ಪ್ರಬಲವುಳ್ಳವನಾದನು. ಅವನಿಂದ ಮುಖ್ಯ ಅಧಿಕಾರಿಯು ಹುಟ್ಟಿದನು. ಆದರೆ ಚೊಚ್ಚಲುತನವು ಯೋಸೇಫನದಾಗಿತ್ತು. ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಪುತ್ರರು:
ಹನೋಕ್, ಪಲ್ಲೂ, ಹೆಚ್ರೋನನು, ಕರ್ಮೀ.
ಯೋಯೇಲನ ವಂಶಜರು:
ಅವನ ಮಗ ಶೆಮಾಯನು; ಅವನ ಮಗ ಗೋಗನು;
ಅವನ ಮಗ ಶಿಮ್ಮೀಯಿ. ಅವನ ಮಗ ಮೀಕಾಯನು;
ಅವನ ಮಗ ರೆವಾಯನು, ಅವನ ಮಗ ಬಾಳನು.
ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರಿನಿಂದ ಸೆರೆಯಾಗಿ ಒಯ್ದ ಅವನ ಮಗ ಬೇರನು; ಅವನೇ ರೂಬೇನ್ಯರಲ್ಲಿ ನಾಯಕನಾಗಿದ್ದನು.
ಇವನ ಸಹೋದರರು ತಮ್ಮ ಸಂತತಿಗಳಲ್ಲಿ ವಂಶಗಳ ವಂಶಾವಳಿಯನ್ನು ಲೆಕ್ಕಿಸಿದ ಅವನ ಮುಖ್ಯಸ್ಥರು ಯಾರೆಂದರೆ,
ಯೆಹಿಯೇಲ್, ಜೆಕರ್ಯ, ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ.
ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು. ಗಿಲ್ಯಾದಿನ ದೇಶದಲ್ಲಿ ಅವನ ಪಶುಗಳು ಹೆಚ್ಚಾದುದರಿಂದ, ಅವನು ಪೂರ್ವದಿಕ್ಕಿನಲ್ಲಿ ಯೂಫ್ರೇಟೀಸ್ ನದಿ ಮೊದಲ್ಗೊಂಡು ಮರುಭೂಮಿಯ ಪ್ರದೇಶದವರೆಗೂ ವಾಸವಾಗಿದ್ದನು.
ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು.
ಗಾದ್
ಗಾದನ ಮಕ್ಕಳು ಅವರಿಗೆದುರಾಗಿ ಬಾಷಾನ್ ದೇಶದಲ್ಲಿ ಸಲ್ಕದವರೆಗೂ ವಾಸವಾಗಿದ್ದರು.
ಬಾಷಾನಿನಲ್ಲಿ ಮುಖ್ಯನಾದವನು ಯೋಯೇಲನು, ಎರಡನೆಯವನು ಶಾಫಾಮನು, ಅನಂತರ ಯನ್ನೈ, ಶಾಫಾಟನು.
ಕುಟುಂಬಗಳಾಗಿ ಅವರ ಬಂಧುಗಳು:
ಮೀಕಾಯೇಲನು, ಮೆಷುಲ್ಲಾಮನು, ಶೆಬನು, ಯೋರೈನು, ಯಕ್ಕಾನನು, ಜೀಯನು, ಏಬೆರನು; ಒಟ್ಟು ಏಳುಮಂದಿ.
ಇವರು ಹೂರಿಯ ಮಗ ಅಬೀಹೈಲನ ಪುತ್ರರು: ಈ ಹೂರೀಯು ಯಾರೋಹನ ಮಗನು, ಅವನು ಗಿಲ್ಯಾದನ ಮಗನು, ಅವನು ಮೀಕಾಯೇಲನ ಮಗನು, ಅವನು ಯೆಷೀಷೈಯನ ಮಗನು, ಅವನು ಯಹ್ದೋವಿನ ಮಗನು, ಅವನು ಬೂಜನ ಮಗನು.
ಅಬ್ದಿಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರದ ಮುಖ್ಯಸ್ಥನು.
ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.
ಇವರೆಲ್ಲರು ಯೆಹೂದದ ಅರಸನಾದ ಯೋತಾಮನ ದಿವಸಗಳಲ್ಲಿಯೂ, ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ದಿವಸಗಳಲ್ಲಿಯೂ ವಂಶಾವಳಿಯ ಪಟ್ಟಿಯಲ್ಲಿ ಲಿಖಿತರಾದರು.
ರೂಬೇನ್ಯರಲ್ಲಿಯೂ, ಗಾದ್ಯರಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ, ಗುರಾಣಿಯನ್ನೂ, ಖಡ್ಗವನ್ನೂ ಹಿಡಿಯುವುದಕ್ಕೆ ಬಿಲ್ಲೆಸೆಯುವುದಕ್ಕೆ ಯುದ್ಧದಲ್ಲಿ ಪ್ರವೀಣರಾದ ಪರಾಕ್ರಮಶಾಲಿಗಳಾದ ಯುದ್ಧಕ್ಕೆ ಹೊರಡುವವರು 44,760 ಮಂದಿಯಾಗಿದ್ದರು. ಇವರು ಹಗ್ರೀಯರಾದ ಯೆಟೂರನು, ನಾಫೀಷನು, ನೊದಾಬನು ಎಂಬವರ ವಿರುದ್ಧ ಯುದ್ಧಮಾಡಿದರು. ಇವರು ಅವರಿಗೆ ವಿರೋಧವಾಗಿ ಸಹಾಯ ಹೊಂದಿದ್ದರಿಂದ, ಹಗ್ರೀಯರೂ, ಅವರ ಸಂಗಡ ಕೂಡಿದ್ದವರೆಲ್ಲರೂ ಇವರ ಕೈವಶವಾದರು. ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು, ಅವರಲ್ಲಿ ಭರವಸೆ ಇಟ್ಟಿದ್ದರಿಂದ, ದೇವರು ಅವರ ಮನವಿಯನ್ನು ಕೇಳಿದರು. ಅವರು ವೈರಿಗಳಿಂದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಐವತ್ತು ಸಾವಿರ ಒಂಟೆಗಳನ್ನು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳನ್ನು, ಎರಡು ಸಾವಿರ ಕತ್ತೆಗಳನ್ನು ಅಲ್ಲದೆ, ಒಂದು ಲಕ್ಷ ಜನರನ್ನು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದರು. ಏಕೆಂದರೆ ಯುದ್ಧವು ದೇವರಿಂದ ಉಂಟಾದ ಕಾರಣ, ಅನೇಕ ಜನರು ಹತರಾದರು. ಇವರು ಸೆರೆಯಾಗಿ ಹೋಗುವ ಕಾಲದವರೆಗೂ ಅವರ ಸ್ಥಳದಲ್ಲಿ ವಾಸವಾಗಿದ್ದರು.
ಮನಸ್ಸೆಯ ಅರ್ಧ ಗೋತ್ರದ ಜನರು
ಮನಸ್ಸೆಯ ಅರ್ಧ ಗೋತ್ರದ ಜನರು ದೇಶದಲ್ಲಿ ವಾಸಮಾಡಿ, ಬಾಷಾನ್ ಮೊದಲುಗೊಂಡು ಬಾಳ್ ಹೆರ್ಮೋನ್, ಸೆನೀರ್, ಹೆರ್ಮೋನ್ ಬೆಟ್ಟದವರೆಗೂ ಹಬ್ಬಿಕೊಂಡರು.
ಅವರ ಪಿತೃಗಳ ಮನೆಯಲ್ಲಿರುವ ಯಜಮಾನರು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರಿಯೇಲ್, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್. ಇವರು ಪರಾಕ್ರಮಶಾಲಿಗಳಾಗಿಯೂ, ಹೆಸರುಗೊಂಡವರಾಗಿಯೂ, ತಮ್ಮ ಪಿತೃಗಳ ಮನೆಯಲ್ಲಿ ಯಜಮಾನರಾಗಿಯೂ ಇದ್ದರು. ಆದರೆ ಅವರು ತಮ್ಮ ಪಿತೃಗಳ ದೇವರಿಗೆ ದ್ರೋಹಿಗಳಾಗಿದ್ದರು. ದೇವರು ತಮ್ಮ ಮುಂದೆ ನಾಶಮಾಡಿದ ಆ ದೇಶದ ಜನರ ದೇವರುಗಳ ಹಿಂದೆ ಜಾರರಾಗಿ ಹೋದರು. ಆದಕಾರಣ ಇಸ್ರಾಯೇಲಿನ ದೇವರು ಅಸ್ಸೀರಿಯದ ಅರಸನಾದ ಪೂಲನ ಆತ್ಮವನ್ನೂ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸರನ ಆತ್ಮವನ್ನೂ ಪ್ರೇರಿಸಿದ್ದರಿಂದ, ಅವರು ಅವರನ್ನು ಸೆರೆಯಾಗಿ ಒಯ್ದರು. ಆ ರೂಬೇನ್ಯರನ್ನೂ, ಗಾದ್ಯರನ್ನೂ, ಮನಸ್ಸೆಯ ಅರ್ಧ ಗೋತ್ರದವರನ್ನೂ ಹಲಹ, ಹಾಬೋರ್, ಹಾರ, ಎಂಬ ಪ್ರಾಂತಗಳಿಗೂ ಗೋಜಾನ್ ನದಿಯ ಪ್ರದೇಶಗಳಿಗೂ ತೆಗೆದುಕೊಂಡು ಹೋದರು. ಅವರು ಇಂದಿನವರೆಗೂ ಅಲ್ಲಿಯೇ ಇದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.