Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

1 ಪೂರ್ವಕಾಲ ವೃತ್ತಾಂತ 15

ಮಂಜೂಷವನ್ನು ಯೆರೂಸಲೇಮಿಗೆ ತಂದದ್ದು

ದಾವೀದನ ಪಟ್ಟಣಗಳಲ್ಲಿ ದಾವೀದನು ತನಗೆ ಮನೆಗಳನ್ನು ಕಟ್ಟಿಸಿಕೊಂಡು, ದೇವರ ಮಂಜೂಷಕ್ಕೋಸ್ಕರ ಸ್ಥಳಗಳನ್ನು ಸಿದ್ಧಮಾಡಿ, ಅದರ ನಿಮಿತ್ತ ಗುಡಾರ ಹಾಕಿದನು. ಆಗ ದಾವೀದನು, “ಲೇವಿಯರ ಹೊರತಾಗಿ ಮತ್ತ್ಯಾರೂ ದೇವರ ಮಂಜೂಷವನ್ನು ಹೊರಬಾರದು. ಯೆಹೋವ ದೇವರು ದೇವರ ಮಂಜೂಷವನ್ನು ಹೊರಲೂ, ಯುಗಯುಗಕ್ಕೆ ಅವರಿಗೆ ಸೇವೆಮಾಡಲೂ ಅವರನ್ನು ಆಯ್ದುಕೊಂಡಿದ್ದಾರೆ,” ಎಂದನು.

ದಾವೀದನು ಯೆಹೋವ ದೇವರ ಮಂಜೂಷವನ್ನು ತಾನು ಅದಕ್ಕೋಸ್ಕರ ಸಿದ್ಧಮಾಡಿದ ಅದರ ಸ್ಥಳಕ್ಕೆ ತೆಗೆದುಕೊಂಡು ಬರುವ ನಿಮಿತ್ತ, ಯೆರೂಸಲೇಮಿಗೆ ಸಮಸ್ತ ಇಸ್ರಾಯೇಲರನ್ನು ಕೂಡಿಸಿ ಬರಮಾಡಿದನು.

ದಾವೀದನು ಆರೋನನ ಮಕ್ಕಳನ್ನೂ, ಲೇವಿಯರನ್ನೂ ಬರಮಾಡಿದನು.

ಕೊಹಾತನ ಪುತ್ರರಲ್ಲಿ ಮುಖ್ಯಸ್ಥನಾದ ಉರೀಯೇಲನೂ,

ಅವನ ಸಹೋದರರಾದ 120 ಮಂದಿಯೂ;

ಮೆರಾರೀಯ ಪುತ್ರರಲ್ಲಿ ಮುಖ್ಯಸ್ಥನಾದ ಅಸಾಯನೂ,

ಅವನ ಸಹೋದರರಾದ 220 ಮಂದಿಯೂ;

ಗೇರ್ಷೋಮನ ಪುತ್ರರಲ್ಲಿ ಮುಖ್ಯಸ್ಥನಾದ ಯೋಯೇಲನೂ

ಅವನ ಸಹೋದರರಾದ 130 ಮಂದಿಯೂ;

ಎಲೀಚಾಫಾನನ ಪುತ್ರರಲ್ಲಿ ಮುಖ್ಯಸ್ಥನಾದ ಶೆಮಾಯನೂ,

ಅವನ ಸಹೋದರರಾದ 200 ಮಂದಿಯೂ;

ಹೆಬ್ರೋನನ ಪುತ್ರರಲ್ಲಿ ಮುಖ್ಯಸ್ಥನಾದ ಎಲೀಯೇಲನೂ,

ಅವನ ಸಹೋದರರಾದ 80 ಮಂದಿಯೂ;

ಉಜ್ಜೀಯೇಲನ ಪುತ್ರರಲ್ಲಿ ಮುಖ್ಯಸ್ಥನಾದ ಅಮ್ಮೀನಾದಾಬನೂ,

ಅವನ ಸಹೋದರರಾದ 112 ಮಂದಿಯು.

ಆಗ ದಾವೀದನು ಚಾದೋಕನು, ಅಬಿಯಾತರನು ಎಂಬ ಯಾಜಕರನ್ನೂ; ಉರೀಯೇಲನು, ಅಸಾಯನು, ಯೋಯೇಲನು, ಶೆಮಾಯನು, ಎಲೀಯೇಲನು, ಅಮ್ಮೀನಾದಾಬನು ಎಂಬ ಲೇವಿಯರನ್ನೂ ಕರೆಕಳುಹಿಸಿ ಅವರಿಗೆ, “ನೀವು ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ್ದರಿಂದ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ನಾನು ಅದಕ್ಕೋಸ್ಕರ ಸಿದ್ಧಮಾಡಿದ ಸ್ಥಳಕ್ಕೆ ನೀವು ತರುವ ಹಾಗೆ ನಿಮ್ಮನ್ನೂ, ನಿಮ್ಮ ಸಹೋದರರನ್ನೂ ಪರಿಶುದ್ಧ ಮಾಡಿಕೊಳ್ಳಿರಿ. ಏಕೆಂದರೆ ನೀವು ಮೊದಲು ಹಾಗೆ ಮಾಡದೆ ಇದ್ದುದರಿಂದ, ಕೋಪದಿಂದ ಯೆಹೋವ ದೇವರಾದ ನಮ್ಮ ದೇವರು ನಮ್ಮಲ್ಲಿ ಒಂದು ಒಡಕು ಬರುವಂತೆ ಮಾಡಿದರು. ಏಕೆಂದರೆ ನ್ಯಾಯದ ಪ್ರಕಾರ ನಾವು ಅವರನ್ನು ಹುಡುಕಲಿಲ್ಲ,” ಎಂದು ಹೇಳಿದನು. ಇಸ್ರಾಯೇಲಿನ ದೇವರಾದ ಯೆಹೋವ ದೇವರ ಮಂಜೂಷವನ್ನು ತರುವುದಕ್ಕೆ ಯಾಜಕರೂ, ಲೇವಿಯರೂ ತಮ್ಮನ್ನು ಪರಿಶುದ್ಧ ಮಾಡಿಕೊಂಡರು. ಮೋಶೆಯು ಆಜ್ಞಾಪಿಸಿದ ಯೆಹೋವ ದೇವರ ವಾಕ್ಯದ ಪ್ರಕಾರ ಲೇವಿಯರು ಕೋಲುಗಳನ್ನು ಹಾಕಿ, ದೇವರ ಮಂಜೂಷವನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡು ಹೋದರು.

ಇದಲ್ಲದೆ ದಾವೀದನು ವಾದ್ಯಗಳನ್ನೂ ವಿಶೇಷವಾದ ವೀಣೆಗಳನ್ನೂ, ಕಿನ್ನರಿಗಳನ್ನೂ, ತಾಳಗಳನ್ನೂ ಬಾರಿಸಿ ಸಂತೋಷದಿಂದ ಸ್ವರವನ್ನೂ ಎತ್ತುವ ಹಾಗೆ, ತಮ್ಮ ಸಹೋದರರಲ್ಲಿ ಹಾಡುಗಾರರನ್ನು ನೇಮಿಸುವುದಕ್ಕೆ ಲೇವಿಯರ ಪ್ರಧಾನರಿಗೆ ಆಜ್ಞಾಪಿಸಿದನು.

ಹಾಗೆಯೇ ಲೇವಿಯರು ಯೋಯೇಲನ ಮಗನಾದ ಹೇಮಾನನನ್ನೂ, ಅವನ ಸಹೋದರರಲ್ಲಿ ಬೆರೆಕ್ಯನ ಮಗನಾದ ಆಸಾಫನನ್ನೂ, ಮೆರಾರೀಯ ಪುತ್ರರ ಸಂಬಂಧಿಕರಲ್ಲಿ ಕೂಷಾಯನ ಮಗ ಏತಾನನನ್ನೂ ನೇಮಿಸಿದರು. ಅವರ ಸಂಗಡ ಎರಡನೆಯ ದರ್ಜೆಯವರಾದ ತಮ್ಮ ಸಹೋದರರಾಗಿರುವ ಜೆಕರ್ಯನನ್ನೂ ಬೇನನನ್ನೂ ಯಾಜೀಯೇಲನನ್ನೂ, ಶೆಮೀರಾಮೋತನನ್ನೂ ಯೆಹೀಯೇಲನನ್ನೂ, ಉನ್ನೀಯನ್ನೂ, ಎಲೀಯಾಬನನ್ನೂ, ಬೆನಾಯನನ್ನೂ, ಮಾಸೇಯನನ್ನೂ, ಮತ್ತಿತ್ಯನನ್ನೂ, ಎಲೀಫೆಲೇಹುನನ್ನೂ ಮಿಕ್ನೇಯನನ್ನೂ ದ್ವಾರಪಾಲಕರಾದ ಓಬೇದ್ ಏದೋಮನನ್ನೂ ಯೆಹೀಯೇಲನನ್ನೂ ನೇಮಿಸಿದರು.

ಸಂಗೀತಗಾರರಾದ ಹೇಮಾನನೂ, ಆಸಾಫನೂ, ಏತಾನನೂ ಕಂಚಿನ ತಾಳಗಳನ್ನು ಬಾರಿಸುವವರು. ಜೆಕರ್ಯ, ಅಜಿಯೇಲ್, ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಮಾಸೇಯ, ಬೆನಾಯ ಎಂಬವರನ್ನು ಅಲಮೋತ್ ಎಂಬ ತಾರಸ್ಥಾಯಿಯ ವೀಣೆಗಳನ್ನು ಬಾರಿಸುವುದಕ್ಕೆ ಆರಿಸಿಕೊಂಡರು. ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ಓಬೇದ್ ಏದೋಮ್, ಯೆಹೀಯೇಲ್, ಅಜಜ್ಯ ಎಂಬವರನ್ನು ಶೆಮಿನಿಥ್ ಎಂಬ ಮಂದ್ರಸ್ಥಾಯಿಯ ಕಿನ್ನರಿಗಳನ್ನು ಬಾರಿಸುವುದಕ್ಕೂ ನೇಮಿಸಿಕೊಂಡರು. ಆದರೆ ಲೇವಿಯರ ಪ್ರಧಾನನಾದ ಕೆನನ್ಯನು ಹಾಡುವುದಕ್ಕೆ ನೇಮಕವಾದನು. ಅವನು ಸಂಗೀತದಲ್ಲಿ ನಿಪುಣನಾದ್ದರಿಂದ ಅವನು ಮುಖ್ಯಸ್ಥನಾಗಿದ್ದನು.

ಬೆರೆಕ್ಯ, ಎಲ್ಕಾನಾ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು. ಯಾಜಕರಾದ ಶೆಬನ್ಯ, ಯೋಷಾಫಾಟ್, ನೆತನೆಯೇಲ್, ಅಮಾಸೈಯೂ, ಜೆಕರ್ಯನೂ, ಬೆನಾಯನೂ, ಎಲೀಯೆಜೆರನೂ ದೇವರ ಮಂಜೂಷದ ಮುಂದೆ ತುತೂರಿಗಳನ್ನು ಊದುತ್ತಾ ಇದ್ದರು. ಓಬೇದ್ ಏದೋಮನೂ, ಯೆಹೀಯನೂ ಮಂಜೂಷಕ್ಕೆ ದ್ವಾರಪಾಲಕರಾಗಿದ್ದರು.

ಹೀಗೆಯೇ ದಾವೀದನೂ, ಇಸ್ರಾಯೇಲಿನ ಹಿರಿಯರೂ, ಸಹಸ್ರಾಧಿಪತಿಗಳೂ ಸಂತೋಷವಾಗಿ ಓಬೇದ್ ಏದೋಮನ ಮನೆಯೊಳಗಿಂದ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ತರಲು ಹೋದರು. ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬರುತ್ತಿದ್ದ ಲೇವಿಯರಿಗೆ ದೇವರು ಸಹಾಯ ಮಾಡಿದ್ದರಿಂದ, ಅವರು ಏಳು ಹೋರಿಗಳನ್ನೂ, ಏಳು ಟಗರುಗಳನ್ನೂ ಬಲಿಯಾಗಿ ಅರ್ಪಿಸಿದರು. ದಾವೀದನೂ, ಮಂಜೂಷವನ್ನು ಹೊರುವ ಲೇವಿಯರೂ, ಹಾಡುಗಾರರೂ, ಸಂಗೀತಗಾರರ ನಾಯಕನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದಲ್ಲದೆ ದಾವೀದನು ನಾರಿನ ಏಫೋದನ್ನು ಧರಿಸಿಕೊಂಡಿದ್ದನು. ಹೀಗೆ ಇಸ್ರಾಯೇಲರೆಲ್ಲರೂ ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಆರ್ಭಟದಿಂದಲೂ, ಕೊಂಬಿನ ಶಬ್ದದಿಂದಲೂ, ತುತೂರಿಗಳಿಂದಲೂ, ತಾಳಗಳಿಂದಲೂ ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಾ ತೆಗೆದುಕೊಂಡು ಬಂದರು.

ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ದಾವೀದನ ಪಟ್ಟಣದಲ್ಲಿ ಪ್ರವೇಶಿಸುವಾಗ, ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ನೋಡಿ, ಕುಣಿಯುತ್ತಾ, ಹಾಡುತ್ತಾ ಇರುವ ಅರಸನಾದ ದಾವೀದನನ್ನು ಕಂಡು, ತನ್ನ ಹೃದಯದಲ್ಲಿ ಅವನನ್ನು ತಿರಸ್ಕರಿಸಿದಳು.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.