Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
1 ಪೂರ್ವಕಾಲ ವೃತ್ತಾಂತ 10
ಸೌಲನ ಅಂತ್ಯವು
ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು. ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು. ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು; ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
ಆಗ ಸೌಲನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ, ನೀನು ನಿನ್ನ ಖಡ್ಗವನ್ನು ಹಿರಿದು ನನ್ನನ್ನು ತಿವಿ,” ಎಂದನು.
ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು. ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು. ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಮನೆಯವರೆಲ್ಲರೂ ಒಟ್ಟಾಗಿ ಅದೇ ದಿನ ಸತ್ತರು.
ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ ತಗ್ಗಿನಲ್ಲಿ ವಾಸವಾಗಿದ್ದ ಇಸ್ರಾಯೇಲರೆಲ್ಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಪುತ್ರರನ್ನೂ ಕಂಡರು. ಅವರು ಅವನನ್ನು ಸುಲಿದುಕೊಂಡು ಅವನ ತಲೆಯನ್ನೂ, ಅವನ ಆಯುಧಗಳನ್ನೂ ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು. ಸೌಲನ ಆಯುಧಗಳನ್ನು ತಮ್ಮ ದೇವರುಗಳ ಮಂದಿರದಲ್ಲಿ ಇಟ್ಟು, ಅವನ ತಲೆಯನ್ನು ದಾಗೋನನ ಆಲಯದಲ್ಲಿ ನೇತುಹಾಕಿದರು.
ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ, ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಒಂದು ಏಲಾ ಮರದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.
ಹೀಗೆಯೇ ಸೌಲನು ಯೆಹೋವ ದೇವರಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಯೆಹೋವ ದೇವರ ವಾಕ್ಯವನ್ನು ಕೈಗೊಳ್ಳದೆ, ಅದಕ್ಕೆ ವಿರೋಧವಾಗಿ ನಡೆದು, ಯೆಹೋವ ದೇವರನ್ನು ವಿಚಾರಿಸದೆ, ಯಕ್ಷಿಣಿಗಾರರನ್ನು ವಿಚಾರಿಸಿದ್ದರಿಂದ, ಯೆಹೋವ ದೇವರು ಅವನನ್ನು ಕೊಂದುಹಾಕಿ, ರಾಜ್ಯವನ್ನು ಇಷಯನ ಮಗನಾದ ದಾವೀದನ ಕಡೆಗೆ ತಿರುಗಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.