Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಜೆಕ 10

ಕಣಿಯವರಲ್ಲಿ ನಂಬಿಕೆ ಇಡಬಾರದು

ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ;

ಯೆಹೋವನೇ ಮಿಂಚುಗಳನ್ನು ಉಂಟುಮಾಡುತ್ತಾನೆ, ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ,

ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.

ವಿಗ್ರಹಗಳು ನುಡಿಯುವುದು ಸುಳ್ಳು; ಕಣಿಹೇಳುವವರು ದರ್ಶನವನ್ನು ಕಾಣುವುದು ಸುಳ್ಳು,

ತಿಳಿಸುವ ಕನಸುಗಳು ಮೋಸವಾದವುಗಳು, ಹೇಳುವ ಸಮಾಧಾನವು ವ್ಯರ್ಥ.

ಆದುದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ; ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.

ಇಸ್ರಾಯೇಲಿನ ನೂತನ ಬಲ

ನನ್ನ ಕೋಪವು ಕುರುಬರ ಮೇಲೆ ಧಗಧಗಿಸುತ್ತದೆ. ನಾನು ಹೋತಗಳನ್ನು1 ದಂಡಿಸುವೆನು; ಸೇನಾಧೀಶ್ವರ ಯೆಹೋವನು ತನ್ನ ಮಂದೆಯಾದ ಯೆಹೂದ ವಂಶವನ್ನು ಪರಾಂಬರಿಸಿ ಘನವಾದ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವನು. ಆ ವಂಶದಿಂದ ಮೂಲೆಗಲ್ಲು, ಆ ವಂಶದಿಂದ ಮೊಳೆ, ಆ ವಂಶದಿಂದ ಯುದ್ಧದ ಬಿಲ್ಲು, ಅಂತು ಆ ವಂಶದೊಳಗಿಂದ ಸಕಲ ಅಧಿಕಾರಿಗಳು ಉಂಟಾಗುವರು. ಇವರು ವೀರರಾಗಿ ರಣರಂಗದೊಳಗೆ ಶತ್ರುಗಳನ್ನು ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು; ಯೆಹೋವನು ನಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು; ಎದುರಿಸುವ ಸವಾರರು ಭಂಗಪಡುವರು.

ನಾನು ಯೆಹೂದ ವಂಶವನ್ನು ಬಲಗೊಳಿಸಿ ಯೋಸೇಫನ ವಂಶವನ್ನು ಉದ್ಧರಿಸುವೆನು; ನನ್ನ ಕನಿಕರವು ಅವರ ಮೇಲೆ ಇರುವುದರಿಂದ ಅವರನ್ನು ಹಿಂದಕ್ಕೆ ಬರಮಾಡುವೆನು; ಆಗ ನಾನು ಅವರನ್ನು ತಳ್ಳಿಬಿಟ್ಟಿದ್ದು ಇಲ್ಲದಂತಾಗುವುದು; ನಾನು ಅವರ ದೇವರಾದ ಯೆಹೋವನಾಗಿದ್ದೇನಲ್ಲಾ, ಅವರ ಮೊರೆಯನ್ನು ಲಾಲಿಸಿ ಸದುತ್ತರವನ್ನು ನೀಡುವೆನು.

ಚದರಿದವರ ಹಿಂದಿರುಗುವಿಕೆ

ಎಫ್ರಾಯೀಮ್ಯರು ಶೂರರಂತಿರುವರು, ದ್ರಾಕ್ಷಾರಸ ಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವುದು; ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು, ಅವರ ಹೃದಯವು ಯೆಹೋವನಲ್ಲಿ ಆನಂದಿಸುವುದು.

ನಾನು ಅವರನ್ನು ಸಿಳ್ಳುಹಾಕಿ ಕರೆದು ಕೂಡಿಸುವೆನು. ಅವರನ್ನು ವಿಮೋಚಿಸಿದೆನಲ್ಲಾ; ಅವರು ಹಿಂದೆ ವೃದ್ಧಿಯಾದಂತೆ ಮುಂದೆಯೂ ವೃದ್ಧಿಯಾಗುವರು.

ನಾನು ಅವರನ್ನು ಜನಾಂಗಗಳೊಳಗೆ ಚೆಲ್ಲಿದರೂ ಅವರು ದೂರದೇಶಗಳಲ್ಲಿ ನನ್ನನ್ನು ಸ್ಮರಿಸಿಕೊಂಡು ಸಂತಾನಸಮೇತವಾಗಿ ಬದುಕಿ ಬಾಳಿ ಹಿಂದಿರುಗಿ ಬರುವರು. ನಾನು ಅವರನ್ನು ಐಗುಪ್ತ ದೇಶದೊಳಗಿಂದ ಹಿಂದಕ್ಕೆ ಕರೆದುತರುವೆನು; ಅಶ್ಶೂರದಿಂದ ಕೂಡಿಸುವೆನು; ಗಿಲ್ಯಾದ್, ಲೆಬನೋನುಗಳ ಪ್ರಾಂತ್ಯಕ್ಕೆ ಬರಮಾಡುವೆನು; ಅವರಿಗೆ ಸಾಕಾಗುವಷ್ಟು ಸ್ಥಳ ಸಿಕ್ಕದು.

ಅವರು ಕಷ್ಟವೆಂಬ ಕಡಲನ್ನು ದಾಟಿ ಬರುವರು, ಅಲ್ಲಕಲ್ಲೋಲವಾದ ಸಮುದ್ರವನ್ನು ಭೇದಿಸಿಬಿಡುವರು, ನೈಲ್ ನದಿಯೆಲ್ಲಾ ತಳದ ತನಕ ಒಣಗುವುದು. ಅಶ್ಶೂರದ ಗರ್ವವು ತಗ್ಗಿಸಲ್ಪಡುವುದು, ಐಗುಪ್ತದ ರಾಜದಂಡವು ತಪ್ಪಿಹೋಗುವುದು. ಅವರು ಯೆಹೋವನಲ್ಲಿ ಬಲಗೊಳ್ಳುವರು, ಆತನ ಹೆಸರಿನಲ್ಲಿ ನಡೆದುಕೊಳ್ಳುವರು; ಇದು ಯೆಹೋವನ ನುಡಿ.

Source notes (1)
  1. Footnote ಹೋತಗಳನ್ನು ನಾಯಕರನ್ನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.