ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಪ.ಗೀ. 8
ನಲ್ಲೆ
ನೀನು ನನ್ನ ತಾಯಿಯ ಹಾಲನ್ನು ಕುಡಿದ ನನ್ನ ಅಣ್ಣನ ಹಾಗಿದ್ದರೆ ಎಷ್ಟೋ ಚೆನ್ನಾಗಿತ್ತು!
ನಾನು ನಿನ್ನನ್ನು ಹೊರಗೆ ಕಂಡೊಡನೆ ಮುದ್ದಿಟ್ಟರೂ ಯಾರೂ ಹೀನೈಸುತ್ತಿರಲಿಲ್ಲ.
ನಿನ್ನನ್ನು ನನ್ನ ತಾಯಿಯ ಮನೆಗೆ ಕರೆದುಕೊಂಡು ಹೋಗುತ್ತಿದ್ದೆನು,
ಅಲ್ಲಿ ಆಕೆಯು ನಿನಗೆ1 ಉಪದೇಶ ಮಾಡಬಹುದಾಗಿತ್ತು;
ದ್ರಾಕ್ಷಿಯ ಮಿಶ್ರಪಾನವನ್ನು ಕೊಡುತ್ತಿದ್ದೆ,
ನನ್ನ ದಾಳಿಂಬೆಯ ಸವಿರಸವನ್ನು ನಿನಗೆ ಕುಡಿಸುತ್ತಿದ್ದೆನು.
ಆಗ ನಿನ್ನ ಎಡಗೈ ನನಗೆ ತಲೆದಿಂಬಾಗಿ ಬಲಗೈ ನನ್ನನ್ನು ತಬ್ಬುತ್ತಿತ್ತು.
ಯೆರೂಸಲೇಮಿನ ಮಹಿಳೆಯರೇ,
ಆತನು ತಾನಾಗಿ ಎಚ್ಚರಗೊಳ್ಳುವವರೆಗೆ ಯಾರೂ ನನ್ನ ಪ್ರಿಯನನ್ನು ಎಚ್ಚರಿಸದಿರಿ,
ಆತನ ವಿಶ್ರಾಂತಿಗೆ ಯಾರೂ ಭಂಗ ಮಾಡದಿರಿ ಎಂದು
ವನದ ಜಿಂಕೆ ಹರಿಣಗಳ ಮೇಲೆ ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.
ಸ್ತ್ರೀಯರು
ನಲ್ಲನನ್ನು ಒರಗಿಕೊಂಡು ಅಡವಿಯಿಂದ ಬರುವ ಇವಳು ಯಾರು?
ಎಬ್ಬಿಸಿದೆನಲ್ಲಾ ನಿನ್ನನ್ನು ಆ ಸೇಬಿನ ಮರದಡಿಯಲ್ಲಿ
ಇಗೋ, ಅಲ್ಲಿ ನಿನ್ನ ತಾಯಿ ನಿನ್ನನ್ನು ಗರ್ಭಧರಿಸಿದ್ದು, ಅಲ್ಲೇ ನಿನ್ನನ್ನು ಪ್ರಸವವೇದನೆಯಿಂದ ಹೆತ್ತಳು.
ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ.
ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ,
ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ,
ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.
ನಂದಿಸಲಾರವು ಪ್ರೀತಿಯನ್ನು ಜಲರಾಶಿಗಳು,
ಮುಣುಗಿಸಲಾರವು ಅದನ್ನು ಪ್ರವಾಹಗಳು.
ಪ್ರೀತಿಯನ್ನು ಗಳಿಸಲು ಮನೆಮಾರುಗಳನ್ನು ಮಾರಿದರೂ ಸಿಗುವುದು ಅವನಿಗೆ 2ತಿರಸ್ಕಾರ.
ಆರನೆಯ ಗೀತೆ - ಸೋದರರು
ಸ್ತನಬಾರದ ತಂಗಿಯು ನಮಗುಂಟು;
ಅವಳನ್ನು ವರಿಸಲು ಯಾರಾದರು ಬಂದರೆ ಅವಳ ಹಿತಕ್ಕೆ ಏನು ಮಾಡೋಣ?
ಅವಳು ಕೋಟೆಯಾದರೆ ಅದರ ಮೇಲೆ ಬೆಳ್ಳಿಯ ಬುರುಜನ್ನು ಕಟ್ಟುವೆವು,
ಬಾಗಿಲಾದರೆ ದೇವದಾರು ಹಲಗೆಗಳಿಂದ ಭದ್ರಪಡಿಸುವೆವು.
ನಲ್ಲೆ
ನಾನು ಕೋಟೆ; ನನ್ನ ಸ್ತನಗಳು ಅದರ ಬುರುಜುಗಳು,
ಹೀಗಿದ್ದು ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು.3
ಸೊಲೊಮೋನನು ಬಾಲ್ಹಾಮೋನಿನಲ್ಲಿ ಇದ್ದ ತನ್ನ ದ್ರಾಕ್ಷಿ ತೋಟವನ್ನು ಗುತ್ತಿಗೆಗೆ ಕೊಟ್ಟನು,
ಪ್ರತಿಯೊಬ್ಬ ಗುತ್ತಿಗೆದಾರ ತೆರಬೇಕಾಗಿತ್ತು ಸಾವಿರ ಬೆಳ್ಳಿ ನಾಣ್ಯಗಳನ್ನು4.
ಸೊಲೊಮೋನನೇ, ಆ ಸಾವಿರ ಬೆಳ್ಳಿ ನಾಣ್ಯ ನಿನಗಿರಲಿ,
ಅದರ ಮೇಲ್ವಿಚಾರಕರಿಗೆ ಇನ್ನೂರು ನಾಣ್ಯ ಸೇರಲಿ;
ನನ್ನದೇ ಆಗಿರುವ ನನ್ನ ತೋಟವು ನನ್ನ ವಶದಲ್ಲಿಯೇ ಇದೆ.
ನಲ್ಲ
ಉದ್ಯಾನದಲ್ಲಿ ವಾಸಿಸುವವಳೇ
ಗೆಳೆಯರು ನಿನ್ನ ಧ್ವನಿ ಕೇಳಬೇಕೆಂದಿದ್ದಾರೆ,
ನನಗೂ ಆ ಧ್ವನಿ ಕೇಳಿಸಲಿ.
ನಲ್ಲೆ
ಸುಗಂಧಸಸ್ಯದ ಪರ್ವತಗಳಲ್ಲಿ ಜಿಂಕೆಯಂತೆಯೂ,
ಪ್ರಾಯದ ಹರಿಣದಂತೆಯೂ ತ್ವರೆಮಾಡಿ ಬಾ ನನ್ನಿನಿಯನೇ.
Source notes (4)
- Footnote ಆಕೆಯು ನಿನಗೆ ಅಥವಾ ನೀನು ನನಗೆ.
- Footnote ಅವನಿಗೆ ಅಥವಾ ಅದಕ್ಕೆ.
- Footnote ಅವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿತ್ತು. ಅಥವಾ ಆಗ ನನ್ನ ಪ್ರಿಯನು ನಾನು ಪ್ರೌಢಳೆಂದು ಯೋಚಿಸುತ್ತಾನೆ.
- Footnote ಬೆಳ್ಳಿ ನಾಣ್ಯಗಳನ್ನು ಒಂದು ಬೆಳ್ಳಿ ನಾಣ್ಯವು ಒಂದು ದಿನ ಕೂಲಿಗೆ ಸಮ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.