Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 92

ದೇವರ ನೀತಿಸಾಧನೆಗಳನ್ನು ಹೊಗಳುವುದು

ಕೀರ್ತನೆ; ಸಬ್ಬತ್ ದಿನದ ಗೀತೆ.

ಯೆಹೋವನೇ, ನಿನ್ನನ್ನು ಕೊಂಡಾಡುವುದೂ,

ಪರಾತ್ಪರನಾದ ದೇವರೇ, ನಿನ್ನ ನಾಮವನ್ನು ಸಂಕೀರ್ತಿಸುವುದೂ ಯುಕ್ತವಾಗಿದೆ.

ವೀಣೆ, ಸ್ವರಮಂಡಲಗಳಿಂದಲೂ, ಕಿನ್ನರಿಯ ಘನಸ್ವರದಿಂದಲೂ,

ಹೊತ್ತಾರೆಯಲ್ಲಿ ನಿನ್ನ ಪ್ರೇಮವನ್ನೂ,

ರಾತ್ರಿಯಲ್ಲಿ ನಿನ್ನ ಸತ್ಯವನ್ನೂ ವರ್ಣಿಸುವುದು ಉಚಿತವಾಗಿದೆ.

ಯೆಹೋವನೇ, ನಿನ್ನ ಕ್ರಿಯೆಗಳಿಂದ ನನ್ನನ್ನು ಸಂತೋಷಪಡಿಸಿದ್ದಿ;

ನಿನ್ನ ಕೆಲಸಗಳಿಗಾಗಿ ಉತ್ಸಾಹಧ್ವನಿ ಮಾಡುತ್ತೇನೆ.

ಯೆಹೋವನೇ, ನಿನ್ನ ಕೃತ್ಯಗಳು ಎಷ್ಟೋ ಶ್ರೇಷ್ಠವಾಗಿವೆ;

ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.

ಪಶುಪ್ರಾಯನು ಅರಿಯನು;

ಮೂರ್ಖನು ಇದನ್ನು ಗ್ರಹಿಸಿಕೊಳ್ಳನು.

ದುಷ್ಟರು ಹುಲ್ಲಿನಂತೆ ಬೆಳೆಯುವುದೂ,

ಕೆಡುಕರು ಹೂವಿನಂತೆ ಮೆರೆಯುವುದೂ ತೀರಾ ಹಾಳಾಗುವುದಕ್ಕಾಗಿಯೇ.

ಯೆಹೋವನೇ, ನೀನಾದರೋ ಸದಾ ಉನ್ನತಸ್ಥಾನದಲ್ಲಿರುತ್ತೀ.

ಯೆಹೋವನೇ, ಇಗೋ ನಿನ್ನ ಶತ್ರುಗಳು!

ಅವರೆಲ್ಲಾ ನಾಶವಾಗುತ್ತಿದ್ದಾರೆ. ಅಧರ್ಮಿಗಳೆಲ್ಲಾ ಚದರಿಹೋಗುವರು.

ಆದರೆ ನನ್ನ ಕೊಂಬನ್ನು1 ಕಾಡುಕೋಣದ ಕೊಂಬಿನಂತೆ2 ಎತ್ತಿದ್ದಿ; 3

ಚೈತನ್ಯತೈಲದಿಂದ ನನ್ನನ್ನು ಅಭಿಷೇಕಿಸಿದ್ದಿ.

ನನ್ನ ಶತ್ರುಗಳಿಗುಂಟಾದ ದುರ್ಗತಿಯನ್ನು ಕಣ್ಣಾರೆ ಕಂಡಿದ್ದೇನೆ;

ನನಗೆ ವಿರುದ್ಧವಾಗಿ ಎದ್ದವರ ವಿಪತ್ತನ್ನು ಕಿವಿಯಾರೆ ಕೇಳಿದ್ದೇನೆ.

ನೀತಿವಂತರು ಖರ್ಜೂರದ ಮರದಂತೆ ಬೆಳೆಯುವರು;

ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಯಾಗುವರು.

ಯೆಹೋವನ ಆಲಯದಲ್ಲಿ ಸಸಿಗಳಂತೆ ನೆಡಲ್ಪಟ್ಟವರು,

ನಮ್ಮ ದೇವರ ಅಂಗಳದಲ್ಲಿ ಚೆನ್ನಾಗಿ ಬೆಳೆಯುವರು.

ಮುಪ್ಪಿನಲ್ಲಿಯೂ ಫಲಿಸುವರು;

ಪುಷ್ಟಿಯಾಗಿದ್ದು ಶೋಭಿಸುವರು.

ಹೀಗೆ ಅವರು ಯೆಹೋವನ ಸತ್ಯಸಂಧತೆಗೆ ದೃಷ್ಟಾಂತರಾಗಿರುವರು.

ಆತನೇ ನನ್ನ ಬಂಡೆಯು; ಆತನು ನಿರ್ವಂಚಕನು.

Source notes (3)
  1. Footnote ಕೊಂಬನ್ನು ಅಥವಾ ಬಲ.
  2. Footnote ಕೊಂಬಿನಂತೆ ಅಥವಾ ಬಲ.
  3. Footnote ಅಥವಾ ನೀನು ನನ್ನನ್ನು ಸಂತೋಷವುಳ್ಳವನಾಗಿರುವಂತೆ ಆಶೀರ್ವದಿಸಿದ್ದೀ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.