ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಕೀರ್ತ 9
ನ್ಯಾಯಸ್ಥಾಪಕನಾದ ಯೆಹೋವನನ್ನು ಕೊಂಡಾಡುವ ಇಬ್ರಿಯ ಅಕ್ಷರಕ್ರಮಾನುಸಾರವಾದ ಕೀರ್ತನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಮೂತ್ಲಬ್ಬೇನೆಂಬ ರಾಗ; ದಾವೀದನ ಕೀರ್ತನೆ.
ಯೆಹೋವನೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;
ನೀನು ಮಾಡಿದ ಅದ್ಭುತಕಾರ್ಯಗಳನ್ನೆಲ್ಲಾ ವರ್ಣಿಸುವೆನು.
ಪರಾತ್ಪರನಾದ ದೇವರೇ, ನಾನು ನಿನ್ನಲ್ಲಿ ಸಂತೋಷಿಸಿ ಉತ್ಸಾಹಗೊಳ್ಳುವೆನು;
ನಿನ್ನ ಹೆಸರನ್ನು ಕೀರ್ತಿಸುವೆನು.
ನನ್ನ ಹಗೆಗಳು ನಿನ್ನ ಎದುರಿನಿಂದ ಹಿಂದಿರುಗಿ ಎಡವಿಬಿದ್ದು ಹಾಳಾದರಲ್ಲಾ.
ನನ್ನ ವ್ಯಾಜ್ಯದಲ್ಲಿ ನೀನು ನ್ಯಾಯವನ್ನು ಸ್ಥಾಪಿಸಿದಿ;
ನೀನು ಆಸನಾರೂಢನಾಗಿ ನೀತಿಯಿಂದ ನ್ಯಾಯವನ್ನು ನಿರ್ಣಯಿಸುತ್ತಿ.
ನೀನು ಜನಾಂಗಗಳನ್ನು ಹೆದರಿಸಿ ದುಷ್ಟರನ್ನು ನಾಶ ಮಾಡಿದ್ದಿ,
ಅವರ ಹೆಸರನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದಿ.
ಶತ್ರುಗಳು ನಿಶ್ಶೇಷವಾದರು;
ನೀನು ಕೆಡವಿದ ಅವರ ಪಟ್ಟಣಗಳು ಸಂಪೂರ್ಣವಾಗಿ ಹಾಳಾದವು.
ಅವರ ಸ್ಮರಣೆಯೇ ಇಲ್ಲವಾಯಿತು.
ಯೆಹೋವನಾದರೋ ಯಾವಾಗಲೂ ನೆಲೆಗೊಂಡಿದ್ದು,
ನ್ಯಾಯವಿಚಾರಿಸುವುದಕ್ಕಾಗಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ.
ಆತನೇ ನೀತಿಗನುಸಾರವಾಗಿ ಲೋಕಕ್ಕೆ ನ್ಯಾಯ ತೀರಿಸುವವನು;
ಆತನು ಜನಾಂಗಗಳಿಗೆ ಸತ್ಯಕ್ಕನುಸಾರವಾಗಿ ತೀರ್ಪುಕೊಡುವನು.
ಯೆಹೋವನು ಕುಗ್ಗಿದವರಿಗೆ ಆಶ್ರಯವೂ,
ಆಪತ್ಕಾಲದಲ್ಲಿ ದುರ್ಗವೂ ಆಗಿರುವನು.
ಯೆಹೋವನೇ, ನಿನ್ನ ನಾಮಮಹಿಮೆಯನ್ನು ಬಲ್ಲವರು
ನಿನ್ನಲ್ಲಿ ಭರವಸವಿಡುವರು;
ಏಕೆಂದರೆ ನಿನ್ನ ಮೊರೆಹೋಗುವವರನ್ನು ನೀನು ಕೈಬಿಡುವವನಲ್ಲ.
ಚೀಯೋನಿನಲ್ಲಿ ವಾಸಿಸುವ ಯೆಹೋವನನ್ನು ಕೀರ್ತಿಸಿರಿ;
ಆತನ ಮಹತ್ಕಾರ್ಯಗಳನ್ನು ಜನಾಂಗಗಳಲ್ಲಿ ಪ್ರಕಟಿಸಿರಿ.
ಆತನು ಕುಗ್ಗಿದವರ ಮೊರೆಯನ್ನು ಮರೆಯದೆ
ಪ್ರಾಣಾಪರಾಧಕ್ಕೆ ಮುಯ್ಯಿತೀರಿಸುವವನಾಗಿ ಅವರನ್ನು ಜ್ಞಾಪಕಮಾಡಿಕೊಳ್ಳುವನು.
ಯೆಹೋವನೇ, ಮರಣದ್ವಾರದೊಳಗೆ ಸೇರದಂತೆ;
ನನ್ನನ್ನು ಉದ್ಧರಿಸುವವನೇ, ಕನಿಕರಿಸು;
ಹಗೆಗಳಿಂದ ನನಗುಂಟಾದ ಬಾಧೆಯನ್ನು ಲಕ್ಷ್ಯಕ್ಕೆ ತಂದುಕೋ.
ಆಗ ನಾನು ನಿನ್ನ ಸ್ತೋತ್ರವನ್ನು ಪ್ರಸಿದ್ಧಪಡಿಸುವೆನು;
ನಿನ್ನಿಂದಾದ ರಕ್ಷಣೆಗಾಗಿ ಚೀಯೋನೆಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು.
ಜನಾಂಗಗಳವರು ತಾವು ಮಾಡಿದ ಕುಣಿಯಲ್ಲಿ ತಾವೇ ಬಿದ್ದು ಹೋದರು;
ಅವರು ಹಾಸಿದ ಬಲೆಯಲ್ಲಿ ಅವರ ಕಾಲೇ ಸಿಕ್ಕಿಕೊಂಡಿತು.
ಯೆಹೋವನು ನ್ಯಾಯತೀರಿಸುವವನಾಗಿ ತನ್ನನ್ನು ಪ್ರಕಟಿಸಿಕೊಂಡಿದ್ದಾನೆ;
ದುಷ್ಟರು ತಾವೇ ಕಲ್ಪಿಸಿದ ಕುಯುಕ್ತಿಯಲ್ಲಿ ಸಿಕ್ಕಿಕೊಂಡಿದ್ದಾರಲ್ಲಾ. ಹಿಗ್ಗಾಯೋನ್ ಸೆಲಾ
ದುಷ್ಟರು ಅಂದರೆ ದೇವರನ್ನು ಅಲಕ್ಷ್ಯಮಾಡುವ ಜನಾಂಗಗಳವರೆಲ್ಲಾ
ಪಾತಾಳಕ್ಕೆ ಇಳಿದುಹೋಗುವರು.
ದಿಕ್ಕಿಲ್ಲದವರು ಕಡೆಯವರೆಗೆ ಮರೆಯಲ್ಪಡುವುದಿಲ್ಲ;
ದೀನರ ನಿರೀಕ್ಷೆಯು ಕೆಡುವುದೇ ಇಲ್ಲ.
ಯೆಹೋವನೇ, ಏಳು; ಮನುಷ್ಯಮಾತ್ರದವರು ಬಲಗೊಳ್ಳಬಾರದು.
ಜನಾಂಗಗಳಿಗೆ ನಿನ್ನ ಸನ್ನಿಧಿಯಲ್ಲಿ ತೀರ್ಪು ಉಂಟಾಗಲಿ.
ಯೆಹೋವನೇ, ಅವರಿಗೆ ಭಯವನ್ನು ಹುಟ್ಟಿಸು;
ಜನಾಂಗಗಳು ತಾವು ಮನುಷ್ಯಮಾತ್ರದವರೆಂದು ತಿಳಿದುಕೊಳ್ಳಲಿ. ಸೆಲಾ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.