Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 86

ಶತ್ರಪೀಡಿತನ ವಿಜ್ಞಾಪನೆ

ದಾವೀದನ ಕೀರ್ತನೆ.

ಕೀರ್ತ 25

ಯೆಹೋವನೇ, ಕಿವಿಗೊಡು; ನನಗೆ ಸದುತ್ತರವನ್ನು ದಯಪಾಲಿಸು;

ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ.

ನಾನು ನಿನ್ನ ಭಕ್ತನು; ನನ್ನ ಪ್ರಾಣವನ್ನು ಉಳಿಸು;

ನೀನೇ ನನ್ನ ದೇವರು; ನಿನ್ನಲ್ಲಿ ಭರವಸವಿಟ್ಟಿರುವ ನಿನ್ನ ಸೇವಕನನ್ನು ರಕ್ಷಿಸು.

ಕರ್ತನೇ, ಕರುಣಿಸು;

ದಿನವೆಲ್ಲಾ ನಿನಗೆ ಮೊರೆಯಿಡುತ್ತೇನೆ.

ಕರ್ತನೇ, ನಿನ್ನ ಸೇವಕನ ಹೃದಯವನ್ನು ಆನಂದಗೊಳಿಸು;

ನಿನ್ನನ್ನೇ ನಿರೀಕ್ಷಿಸುತ್ತಿರುವೆನಲ್ಲಾ.

ಕರ್ತನೇ, ನೀನು ಒಳ್ಳೆಯವನೂ, ಕ್ಷಮಿಸುವವನೂ,

ನಿನಗೆ ಮೊರೆಯಿಡುವವರೆಲ್ಲರಲ್ಲಿ ಕೃಪಾಪೂರ್ಣನೂ ಆಗಿದ್ದಿಯಲ್ಲಾ.

ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು;

ನನ್ನ ವಿಜ್ಞಾಪನೆಗಳ ಕೂಗನ್ನು ಲಾಲಿಸು.

ನೀನು ಸದುತ್ತರವನ್ನು ದಯಪಾಲಿಸುವಿಯೆಂದು ನಂಬಿ,

ನನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನನ್ನೇ ಕರೆಯುವೆನು.

ಕರ್ತನೇ, ದೇವರುಗಳಲ್ಲಿ ನಿನಗೆ ಸಮಾನನೇ ಇಲ್ಲ;

ನಿನ್ನ ಕೃತ್ಯಗಳಿಗೆ ಸರಿಯಾದದ್ದು ಇನ್ನೊಂದಿಲ್ಲ.

ಕರ್ತನೇ, ನಿನ್ನಿಂದುಂಟಾದ ಎಲ್ಲಾ ಜನಾಂಗಗಳು ಬಂದು,

ನಿನಗೆ ಅಡ್ಡಬಿದ್ದು ನಿನ್ನ ನಾಮವನ್ನು ಘನಪಡಿಸುವವು.

ಮಹೋನ್ನತನು, ಮಹತ್ಕಾರ್ಯಗಳನ್ನು ನಡೆಸುವವನು ನೀನು;

ನೀನೊಬ್ಬನೇ ದೇವರು.

ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು;

ನಿನ್ನ ಸತ್ಯತೆಯನ್ನು ನನ್ನ ದೃಷ್ಟಿಯಲ್ಲೇ ಇಟ್ಟುಕೊಂಡು ನಡೆಯುವೆನು.

ನಾನು ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು.

ಕರ್ತನೇ, ನನ್ನ ದೇವರೇ, ಮನಃಪೂರ್ವಕವಾಗಿ ನಿನ್ನನ್ನು ಕೊಂಡಾಡುವೆನು;

ಎಂದೆಂದಿಗೂ ನಿನ್ನ ನಾಮವನ್ನು ಘನಪಡಿಸುವೆನು.

ನೀನು ಬಹಳವಾಗಿ ಕನಿಕರಿಸಿ,

ನನ್ನ ಪ್ರಾಣವನ್ನು ಪಾತಾಳದ ತಳದಿಂದ ತಪ್ಪಿಸಿದ್ದಿಯಲ್ಲಾ.

ದೇವರೇ, ಅಹಂಕಾರಿಗಳು ನನಗೆ ವಿರುದ್ಧವಾಗಿ ಎದ್ದಿದ್ದಾರೆ;

ಬಲಾತ್ಕಾರಿಗಳ ಗುಂಪು ನನ್ನ ಪ್ರಾಣಕ್ಕಾಗಿ ಕಾದಿದೆ.

ಅವರು ನಿನ್ನನ್ನು ಲಕ್ಷಿಸುವುದಿಲ್ಲ.

ಕರ್ತನೇ, ನೀನು ಕನಿಕರವೂ, ದಯೆಯೂ ಉಳ್ಳ ದೇವರು;

ದೀರ್ಘಶಾಂತನು, ಬಹಳ ಪ್ರೀತಿಯೂ, ನಂಬಿಕೆಯೂ ಉಳ್ಳವನು.

ಕಟಾಕ್ಷವಿಟ್ಟು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ಬಲವನ್ನು ಅನುಗ್ರಹಿಸು;

ನಿನ್ನ ಸೇವಕಳ ಮಗನನ್ನು ರಕ್ಷಿಸು.

ನನಗಾಗಿ ಒಂದು ಶುಭಸೂಚನೆಯನ್ನು ತೋರಿಸು;

ನನ್ನ ಶತ್ರುಗಳು ನೋಡಿ, “ಯೆಹೋವನು ಸಹಾಯಕನಾಗಿ

ಇವನನ್ನು ಸಂತೈಸಿದ್ದಾನೆ” ಎಂದು ನಾಚಿಕೆಪಡಲಿ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.