ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಕೀರ್ತ 62
ದೇವರ ಆಶ್ರಯದಲ್ಲಿರುವವರ ಮನಶ್ಯಾಂತಿ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದುತೂನನ ರೀತಿಯಲ್ಲಿ ಹಾಡತಕ್ಕದ್ದು; ದಾವೀದನ ಕೀರ್ತನೆ.
ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು.
ನನ್ನ ರಕ್ಷಣೆಯು ಆತನಿಂದಲೇ.
ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ;
ನಾನು ಕದಲಿದರೂ ಬೀಳೆನು.
ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು,
ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ
ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ?
ಅವನನ್ನು ಉನ್ನತಸ್ಥಾನದಿಂದ ದೊಬ್ಬುವುದೇ ಅವರ ಆಲೋಚನೆ.
ಸುಳ್ಳಾಡುವುದು ಅವರಿಗೆ ಅತಿಸಂತೋಷ;
ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ
ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು.
ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ.
ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ;
ನಾನು ಕದಲುವುದಿಲ್ಲ.
ನನ್ನ ರಕ್ಷಣೆಗೂ, ಮಾನಕ್ಕೂ ದೇವರೇ ಆಧಾರ;
ನನಗೆ ಬಲವಾದ ದುರ್ಗವೂ, ಆಶ್ರಯವೂ ದೇವರಲ್ಲಿಯೇ.
ಜನರೇ, ಯಾವಾಗಲೂ ಆತನನ್ನೇ ನಂಬಿ,
ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ;
ದೇವರು ನಮ್ಮ ಆಶ್ರಯವು. ಸೆಲಾ
ನರರು ಬರೀ ಉಸಿರೇ;
ನರಾಧಿಪತಿಗಳು ಬರೀ ಮಾಯವೇ.
ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಹಗುರ.
ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ;
ಸುಲಿಗೆಯಿಂದ ಗಳಿಸಿ ಅಹಂಕಾರಪಡಬೇಡಿರಿ;
ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ.
ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ,
ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.
ಕರ್ತನೇ, ನೀನು ಪ್ರೀತಿಸ್ವರೂಪನಾಗಿ
ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.