Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 52

ದುಷ್ಟಾಧಿಕಾರಿಯ ದುರ್ಸ್ವಭಾವದ ಖಂಡನೆ

ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ ದಾವೀದನು ರಚಿಸಿದ ಪದ್ಯ.

1

ಪರಾಕ್ರಮಿಯೇ, ನೀನು ಕೆಡುಕುಮಾಡಿ ಹಿಗ್ಗುವುದೇನು?

ದೇವರ ಕೃಪೆಯು ಯಾವಾಗಲೂ ಇರುವುದು.

ಮೋಸಗಾರನೇ, ನಿನ್ನ ನಾಲಿಗೆಯು ಹರಿತವಾದ ಕ್ಷೌರಕತ್ತಿಯಂತೆ

ಅಪಾಯಗಳನ್ನೇ ಕಲ್ಪಿಸುತ್ತದೆ.

ಉಪಕಾರಕ್ಕಿಂತಲೂ ಅಪಕಾರವೇ ನಿನಗೆ ಇಷ್ಟ;

ನೀತಿಯನ್ನು ಬಿಟ್ಟು ಅನೀತಿಯನ್ನು ಸ್ಥಾಪಿಸುವುದೇ ನಿನಗೆ ಸಂತೋಷ. ಸೆಲಾ

ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.

ದೇವರು ನಿನ್ನನ್ನು ಎಂದಿಗೂ ಏಳದಂತೆ ಕೆಡವಿಬಿಡುವನು;

ನಿನ್ನನ್ನು ಹಿಡಿದು ಗುಡಾರದೊಳಗಿಂದ ಕಿತ್ತು ಬೀಸಾಡುವನು;

ಆತನು ನಿನ್ನನ್ನು ಜೀವಲೋಕದಿಂದ ಬೇರು ಸಹಿತವಾಗಿ ಕಿತ್ತುಹಾಕುವನು.

ನೀತಿವಂತರು ಅದನ್ನು ನೋಡಿ ಭಯಪಡುವರು;

ಅವರು ಪರಿಹಾಸ್ಯಮಾಡುತ್ತಾ,

“ನೋಡಿರಿ, ದೇವರನ್ನು ಆಶ್ರಯಿಸಿಕೊಳ್ಳದೆ, ತನ್ನ ಅಧಿಕವಾದ ಐಶ್ವರ್ಯದಲ್ಲಿ ಭರವಸವಿಟ್ಟು, 2

ತನ್ನ ದುಷ್ಟತ್ವವೇ ತನಗೆ ಬಲವೆಂದು ನಂಬಿಕೊಂಡ ಮೂಢನು ಇವನೇ” ಎಂದು ಹೇಳುವರು.

ಆದರೆ ನಾನು ದೇವಾಲಯದ ಸೊಗಸಾದ ಎಣ್ಣೇ ಮರದಂತಿರುವೆನು;

ದೇವರ ಕೃಪೆಯನ್ನು ಯುಗಯುಗಾಂತರಗಳಲ್ಲಿಯೂ ನಂಬಿಕೊಂಡಿರುವೆನು.

ದೇವರೇ, ನಿನ್ನ ಉಪಕಾರಕ್ಕಾಗಿ ಯಾವಾಗಲೂ ನಿನ್ನನ್ನು ಸ್ತುತಿಸುವೆನು;

ನಿನ್ನ ನಾಮವು ಸರ್ವೋತ್ತಮವೆಂದು ನಿನ್ನ ಭಕ್ತರ ಮುಂದೆ ಹೊಗಳುವೆನು.

Source notes (2)
  1. Footnote ಅಥವಾ ಓ ಪರಾಕ್ರಮಿಯೇ, ನೀನು ದೇವರ ಮನುಷ್ಯನಿಗೆ ಮಾಡಿದ ಕಾರ್ಯದ ಬಗ್ಗೆ ಹಿಗ್ಗುವದೇನು?
  2. Footnote ಅಥವಾ ತನ್ನ ದುಷ್ಟಕಾರ್ಯಗಳಲ್ಲಿ ಆಧಿಕ ಬಲಿಷ್ಠನಾಗುತ್ತಾ ಬಂದನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.