Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 50

ದೇವರು ಸದಾಚಾರವನ್ನೇ ಮೆಚ್ಚುವನು

ಆಸಾಫನ ಕೀರ್ತನೆ.

ಬಲಿಷ್ಠ ದೇವರಾದ ಯೆಹೋವನು

ಪೂರ್ವದಿಂದ ಪಶ್ಚಿಮ ದಿಕ್ಕಿನವರೆಗೂ ಇರುವ ಭೂನಿವಾಸಿಗಳೆಲ್ಲರನ್ನೂ,

ತನ್ನ ಸನ್ನಿಧಿಯಲ್ಲಿ ಬರಬೇಕೆಂದು ಕರೆಯುತ್ತಾನೆ.

ಅತ್ಯಂತ ರಮಣೀಯವಾದ ಚೀಯೋನಿನಲ್ಲಿರುವ,

ದೇವರು ಪ್ರಕಾಶಿಸುತ್ತಾನೆ.

ನಮ್ಮ ದೇವರು ಪ್ರತ್ಯಕ್ಷನಾಗುವನು,

ಎಷ್ಟು ಮಾತ್ರವೂ ಸುಮ್ಮನಿರುವುದಿಲ್ಲ;

ಆತನ ಮುಂಭಾಗದಲ್ಲಿ ಬೆಂಕಿ ಪ್ರಜ್ವಲಿಸುತ್ತದೆ;

ಆತನ ಸುತ್ತಲು ಬಿರುಗಾಳಿ ಬೀಸುತ್ತದೆ.

ಆತನು ತನ್ನ ಪ್ರಜೆಗಳ ನ್ಯಾಯವಿಚಾರಣೆಯಲ್ಲಿ ಭೂಮ್ಯಾಕಾಶಗಳನ್ನು

ಸಾಕ್ಷಿಗಳನ್ನಾಗಿ ನೇಮಿಸುತ್ತಾನೆ.

“ನನ್ನೊಡನೆ ಯಜ್ಞದ ಮೂಲಕ ಒಡಂಬಡಿಕೆಯನ್ನು ಮಾಡಿಕೊಂಡ ನನ್ನ ಭಕ್ತರನ್ನು

ನನ್ನ ಬಳಿಗೆ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸುತ್ತಾನೆ.

ದೇವರು ತಾನೇ ನ್ಯಾಯಾಧಿಪತಿ;

ಆತನು ನೀತಿಸ್ವರೂಪನೆಂದು ಆಕಾಶಮಂಡಲವು ಘೋಷಿಸುತ್ತದೆ. ಸೆಲಾ

ಆತನು ಆಜ್ಞಾಪಿಸುವುದು ಏನೆಂದರೆ, “ಪ್ರಜೆಗಳಿರಾ, ಇಸ್ರಾಯೇಲ್ಯರೇ,

ದೇವರಾದ ನಾನೇ ನಿಮ್ಮ ದೇವರು;

ನಿಮಗೆ ಖಂಡಿತವಾಗಿ ಹೇಳುತ್ತೇನೆ” ಕೇಳಿರಿ.

ನಾನು ನಿಮ್ಮ ಯಜ್ಞದ ವಿಷಯದಲ್ಲಿ ತಪ್ಪೆಣಿಸುವುದಿಲ್ಲ;

ಸರ್ವಾಂಗಹೋಮಗಳನ್ನು ನೀವು ನಿತ್ಯವೂ ನನಗೆ ಸಮರ್ಪಿಸುತ್ತೀರಲ್ಲಾ.

ಆದರೂ ನಿಮ್ಮ ಮನೆಗಳಿಂದ ನನಗೆ ಹೋರಿ ಬೇಕಾಗಿಲ್ಲ;

ನಿಮ್ಮ ದೊಡ್ಡಿಗಳಿಂದ ಹೋತ ಬೇಕಿಲ್ಲ.

ಕಾಡಿನಲ್ಲಿರುವ ಸರ್ವಮೃಗಗಳೂ,

ಗುಡ್ಡಗಳಲ್ಲಿರುವ ಸಾವಿರಾರು ಪಶುಗಳೂ ನನ್ನವೇ. 1

ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆ;

ಅಡವಿಯ ಜೀವಜಂತುಗಳೆಲ್ಲಾ ನನಗೆ ಗೊತ್ತುಂಟು.

ನನಗೆ ಹಸಿವೆಯಿದ್ದರೆ ನಿಮಗೆ ತಿಳಿಸುವುದಿಲ್ಲ;

ಏಕೆಂದರೆ ಲೋಕವೂ ಅದರಲ್ಲಿರುವುದೆಲ್ಲವೂ ನನ್ನದಲ್ಲವೇ.

ನಾನು ಹೋರಿಗಳ ಮಾಂಸವನ್ನು ತಿನ್ನುವುದೂ,

ಹೋತಗಳ ರಕ್ತವನ್ನು ಕುಡಿಯುವುದೂ ಉಂಟೇ?

ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ;

ವಾಗ್ದಾನ ಮಾಡಿದ ಹರಕೆಗಳನ್ನು ಪರಾತ್ಪರನಾದ ದೇವರಿಗೆ ಸಲ್ಲಿಸಿರಿ.

ಕಷ್ಟಕಾಲದಲ್ಲಿ ನನಗೆ ಮೊರೆಯಿಡಿರಿ, ಬಿಡಿಸುವೆನು;

ಆಗ ನನ್ನನ್ನು ಕೊಂಡಾಡುವಿರಿ.

ದುಷ್ಟರಿಗಾದರೋ ದೇವರು ಹೇಳುವುದು ಏನೆಂದರೆ,

“ನನ್ನ ವಿಧಿಗಳನ್ನು ಹೇಳುವುದಕ್ಕೆ ನಿಮಗೇನು ಬಾಧ್ಯತೆ ಉಂಟು?

ನನ್ನ ಒಡಂಬಡಿಕೆಯನ್ನು ನಿಮ್ಮ ಬಾಯಲ್ಲಿ ಉಚ್ಚರಿಸುವುದೇಕೆ?

ನೀವೋ ನನ್ನ ಸುಶಿಕ್ಷಣವನ್ನು ಹಗೆಮಾಡುತ್ತೀರಲ್ಲಾ;

ನನ್ನ ಆಜ್ಞೆಯನ್ನು ಉಲ್ಲಂಘಿಸುತ್ತೀರಿ.

ನೀವು ಕಳ್ಳರೊಡನೆ ಸೇರಿ ಅವರಿಗೆ ಸಮ್ಮತಿ ನೀಡುತ್ತೀರಿ;

ಜಾರರ ಒಡನಾಟದಲ್ಲಿ ನೀವು ಸಂತೋಷದಿಂದ ಇರುತ್ತೀರಿ.

ನಿಮ್ಮ ಬಾಯಿಯನ್ನು ಕೇಡಿಗೆ ಒಪ್ಪಿಸುತ್ತೀರಿ;

ನಾಲಿಗೆಯು ಮೋಸವನ್ನು ನೇಯುತ್ತದೆ.

ನೀವು ಕುಳಿತುಕೊಂಡು ನಿಮ್ಮ ಸಹೋದರರ ವಿರುದ್ಧವಾಗಿ ಮಾತನಾಡುತ್ತೀರಿ;

ನಿಮ್ಮ ಒಡಹುಟ್ಟಿದವರನ್ನು ದೂರುತ್ತೀರಿ.

ನೀವು ಹೀಗೆ ಮಾಡಿದರೂ ನಾನು ಮೌನವಾಗಿದ್ದೆನು.

ಆದುದರಿಂದ, ‘ದೇವರೂ ನಮ್ಮಂಥವನೇ’ ಎಂದು ತಿಳಿದುಕೊಂಡಿರಿ.

ಈಗಲಾದರೋ ನಾನು ಎಲ್ಲವನ್ನು,

ನಿಮ್ಮ ಮುಂದೆ ವಿವರಿಸಿ ನಿಮ್ಮನ್ನು ಅಪರಾಧಿಗಳೆಂದು ಸ್ಥಾಪಿಸುವೆನು.

ದೇವರನ್ನು ಬಿಟ್ಟವರೇ, ಇದನ್ನು ಮನದಟ್ಟು ಮಾಡಿಕೊಳ್ಳಿರಿ;

ಇಲ್ಲವಾದರೆ ನಿಮ್ಮನ್ನು ಹರಿದುಬಿಟ್ಟೇನು.

ನಿಮ್ಮನ್ನು ತಪ್ಪಿಸುವವರು ಯಾರೂ ಇರುವುದಿಲ್ಲ.

ಯಾರು ಸ್ತುತಿಯಜ್ಞವನ್ನು ಸಮರ್ಪಿಸುತ್ತಾರೋ ಅವರೇ ನನ್ನನ್ನು ಗೌರವಿಸುವವರು;

ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವವರಿಗೆ ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.”

Source notes (1)
  1. Footnote ಅಥವಾ ಆಕಾಶದ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.