Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 48

ಚೀಯೋನನ್ನು ರಕ್ಷಿಸಿದ್ದಕ್ಕಾಗಿ ಯೆಹೋವನನ್ನು ಕೊಂಡಾಡುವುದು

ಹಾಡು; ಕೋರಹೀಯರ ಕೀರ್ತನೆ.

ಕೀರ್ತ 46

ಯೆಹೋವನು ಮಹೋನ್ನತನು;

ನಮ್ಮ ದೇವರು ತನ್ನ ಪರಿಶುದ್ಧ ಪರ್ವತ ನಗರದಲ್ಲಿ ಸರ್ವಸ್ತುತಿಗೆ ಪಾತ್ರನಾಗಿದ್ದಾನೆ.

ರಾಜಾಧಿರಾಜನ ಪಟ್ಟಣವಿರುವ ಚೀಯೋನ್ ಪರ್ವತವು

ಉತ್ತರದಿಕ್ಕಿನಲ್ಲಿ ಉನ್ನತವಾಗಿಯೂ, ರಮ್ಯವಾಗಿಯೂ,

ಭೂಲೋಕದಲ್ಲೆಲ್ಲಾ ಕಂಗೊಳಿಸುತ್ತಿರುವುದು.

ದೇವರು ಅದರ ಕೊತ್ತಲುಗಳಲ್ಲಿ,

ತಾನೇ ಭದ್ರವಾದ ಬುರುಜೆಂದು ಕೀರ್ತಿಪಡೆದನು.

ರಾಜರು ಕೂಡಿಕೊಂಡರು;

ಅವರು ಒಗ್ಗಟ್ಟಾಗಿ ಬಂದರು.

ನೋಡಿ ಬೆರಗಾದರು;

ತಲ್ಲಣಿಸಿ ಓಡಿಹೋದರು.

ಕಂಪನವೂ ಹೆರುವವಳಂತೆ,

ವೇದನೆಯೂ ಅವರಿಗೆ ಉಂಟಾಯಿತು.

ದೇವರೇ, ನೀನು ಬಿರುಗಾಳಿಯಿಂದ ತಾರ್ಷಿಷ್ ದೇಶದ

ದೊಡ್ಡ ದೊಡ್ಡ ಹಡಗುಗಳನ್ನು ಒಡೆದುಬಿಟ್ಟಂತಾಯಿತು.

ನಾವು ಕಿವಿಯಿಂದ ಕೇಳಿದಂತೆಯೇ ಈಗ ಕಣ್ಣಾರೆ ಕಂಡೆವು;

ನಮ್ಮ ದೇವರೂ ಸೇನಾಧೀಶನೂ ಆಗಿರುವ

ಯೆಹೋವನ ಸಂಸ್ಥಾನದಲ್ಲಿ ಆತನ ಮಹತ್ತನ್ನು ನೋಡಿದ್ದೇವೆ.

ದೇವರು ಅದನ್ನು ಶಾಶ್ವತವಾಗಿ ಸ್ಥಾಪಿಸುವನು. ಸೆಲಾ

ದೇವರೇ, ನಾವು ನಿನ್ನ ಆಲಯದಲ್ಲಿ,

ನಿನ್ನ ಪ್ರೀತಿಯನ್ನು ಸ್ಮರಿಸುತ್ತೇವೆ;

ದೇವರೇ, ನಿನ್ನ ನಾಮದ ಘನತೆಗೆ ತಕ್ಕಂತೆಯೇ,

ಲೋಕವೆಲ್ಲಾ ನಿನ್ನನ್ನು ಹೊಗಳುವುದು.

ನಿನ್ನ ಬಲಗೈ ನೀತಿಯನ್ನು ನೆರವೇರಿಸಿತು.

ಚೀಯೋನ್ ಪಟ್ಟಣದವರು1 ಹರ್ಷಿಸಲಿ;

ನೀನು ನ್ಯಾಯವನ್ನು ನಿರ್ಣಯಿಸಿದ್ದರಿಂದ,

ಯೆಹೂದ ಸೀಮೆಯ ನಿವಾಸಿಗಳು ಆನಂದಪಡಲಿ.

ಚೀಯೋನ್ ಸಂಸ್ಥಾನದ ಸುತ್ತಲೂ ಸಂಚರಿಸಿ,

ಅದರ ಬುರುಜುಗಳನ್ನು ಲೆಕ್ಕಿಸಿರಿ.

ಅದರ ಪ್ರಾಕಾರಗಳನ್ನು ಚೆನ್ನಾಗಿ ನೋಡಿರಿ;

ಅದರ ಕೊತ್ತಲುಗಳನ್ನು ಸೂಕ್ಷ್ಮವಾಗಿ ಗಮನಿಸಿರಿ.

ಆಗ ನೀವು ನಿಮ್ಮ ಮುಂದಣ ಸಂತತಿಯವರಿಗೆ,

ದೇವರು ಇಂಥವನು; ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು,

ನಿರಂತರವೂ ನಮ್ಮನ್ನು ನಡೆಸುವವನಾಗಿದ್ದಾನೆ ಎಂದು ತಿಳಿಸುವಿರಿ.

Source notes (1)
  1. Footnote ಚೀಯೋನ್ ಪಟ್ಟಣದವರು ಮೂಲತಃ ಚೀಯೋನ್ ಪುತ್ರಿಯರು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.