ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಕೀರ್ತ 40
ರಕ್ಷಣೆಗಾಗಿ ಪ್ರಾರ್ಥಿಸುವುದು
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ದಾವೀದನ ಕೀರ್ತನೆ.
ನಾನು ಯೆಹೋವನಿಗಾಗಿ ನಿರೀಕ್ಷಿಸಿಯೇ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು.
ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು;
ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ,
ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
ಆತನು ನನ್ನ ಬಾಯಲ್ಲಿ ನೂತನ ಕೀರ್ತನೆಯನ್ನು ಹುಟ್ಟಿಸಿದ್ದಾನೆ;
ಅದು ನಮ್ಮ ದೇವರ ಸ್ತೋತ್ರವೇ.
ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು
ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು.
ಯಾರು 1ಅಹಂಕಾರಿಗಳ ಜೊತೆಯಲ್ಲಿಯೂ,
ಸುಳ್ಳುದೇವರನ್ನು ಹಿಂಬಾಲಿಸುವವರಲ್ಲಿಯೂ ಸೇರದೆ,
ಯೆಹೋವನನ್ನೇ ನಂಬುತ್ತಾನೋ, ಅವನೇ ಧನ್ಯನು.
ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು?
ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ,
ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ;
ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯ;
ಅವು ಅಸಂಖ್ಯಾತವಾಗಿವೆ.
ಯಜ್ಞನೈವೇದ್ಯಗಳು ನಿನಗೆ ಇಷ್ಟವಿಲ್ಲ;
ಸರ್ವಾಂಗಹೋಮಗಳನ್ನಾಗಲಿ, ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ.
ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ.
ಆಗ ನಾನು, “ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರುಳಿಯಲ್ಲಿ ಬರೆದದೆ.
ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು;
ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ” ಅಂದೆನು.
ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು,
ಧಾರಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು;
ಯೆಹೋವನೇ, ನೀನೇ ಬಲ್ಲೆ.
ನಿನ್ನ ನೀತಿಸಾಧನೆಯನ್ನು ಮರೆಮಾಡಲಿಲ್ಲ;
ನಿನ್ನ ನಂಬಿಕೆಯನ್ನೂ, ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು;
ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.
ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ;
ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.
ಏಕೆಂದರೆ ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ;
ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ,
ನನಗೆ ದಿಕ್ಕೇ ತೋರುವುದಿಲ್ಲ. ಅವು ನನ್ನ ತಲೆಯ ಕೂದಲುಗಳಿಗಿಂತಲೂ ಹೆಚ್ಚಾಗಿವೆ,
ನಾನು ಎದೆಗುಂದಿ ಹೋದೆನು.
ಯೆಹೋವನೇ, ದಯವಿಟ್ಟು ನನ್ನನ್ನು ರಕ್ಷಿಸು;
ಯೆಹೋವನೇ, ಬೇಗನೆ ಬಂದು ಸಹಾಯಮಾಡು.
ನನ್ನ ಪ್ರಾಣವನ್ನು ತೆಗೆಯುವುದಕ್ಕೆ ಸಮಯನೋಡುವವರು,
ಆಶಾಭಂಗಪಟ್ಟು ಅವಮಾನಹೊಂದಲಿ;
ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಅಪಮಾನದಿಂದ ಹಿಂದಿರುಗಿ ಓಡಲಿ.
ಆಹಾ, ಆಹಾ ಎಂದು ನನ್ನನ್ನು ಪರಿಹಾಸ್ಯಮಾಡುವವರು,
ತಮಗೆ ಆಗುವ ಅವಮಾನದಿಂದ ವಿಸ್ಮಯಗೊಳ್ಳಲಿ.
ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ;
ನಿನ್ನ ಜಯದಲ್ಲಿ ಆನಂದಿಸುವವರು, “ಯೆಹೋವನು ಮಹೋನ್ನತನು” ಎಂದು ಯಾವಾಗಲೂ ಹೇಳುವವರಾಗಲಿ.
ನಾನಾದರೋ ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ;
ಕರ್ತನೇ ನನ್ನ ಹಿತಚಿಂತಕನು.
ನನ್ನ ದೇವರೇ, ನೀನೇ ನನಗೆ ಸಹಾಯಕನೂ, ರಕ್ಷಕನೂ ಆಗಿದ್ದೀ;
ತಡಮಾಡಬೇಡ.
Source notes (1)
- Footnote ಅಥವಾ ವಿಗ್ರಹಗಳ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.