Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 135

ಸೃಷ್ಟಿಪಾಲಕನಾಗಿರುವ ಏಕದೇವರಿಗೆ ಸ್ತೋತ್ರ

ಕೀರ್ತ 136

ಯೆಹೋವನಿಗೆ ಸ್ತೋತ್ರ!

ಯೆಹೋವನ ನಾಮವನ್ನು ಸ್ತುತಿಸಿರಿ.

ಯೆಹೋವನ ಸೇವಕರೇ,

ಯೆಹೋವನ ಮಂದಿರದಲ್ಲಿಯೂ,

ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ,

ಆತನನ್ನು ಕೀರ್ತಿಸಿರಿ.

ಯೆಹೋವನಿಗೆ ಸ್ತೋತ್ರ!

ಯೆಹೋವನು ಒಳ್ಳೆಯವನು.

ಆತನ ನಾಮವನ್ನು ಕೊಂಡಾಡಿರಿ;

ಆತನು ಕೃಪಾಪೂರ್ಣನು.

ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ,

ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.

ಯೆಹೋವನು ದೊಡ್ಡವನೆಂದೂ,

ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.

ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ,

ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ

ತನಗೆ ಬೇಕಾದದ್ದನ್ನು ಮಾಡುತ್ತಾನೆ.

ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ;

ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ;

ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.

ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ,

ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.

ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ,

ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು,

ಮಹತ್ಕಾರ್ಯಗಳನ್ನು ನಡೆಸಿದನು.

ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು;

ಬಲಿಷ್ಠ ರಾಜರನ್ನು ಕೊಂದುಹಾಕಿದನು.

ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ,

ಬಾಷಾನಿನ ಅರಸನಾದ ಓಗನೂ ಇದ್ದರು.

ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.

ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು;

ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.

ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು;

ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.

ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು,

ತನ್ನ ಸೇವಕರನ್ನು ಕನಿಕರಿಸುವನು.

ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ;

ಅವು ಮನುಷ್ಯರ ಕೈಕೆಲಸವಷ್ಟೇ.

ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ,

ಕಣ್ಣಿದ್ದರೂ ನೋಡುವುದಿಲ್ಲ,

ಕಿವಿಯಿದ್ದರೂ ಕೇಳುವುದಿಲ್ಲ,

ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.

ಅವುಗಳನ್ನು ಮಾಡುವವರು,

ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.

ಇಸ್ರಾಯೇಲನ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ;

ಆರೋನನ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ.

ಲೇವಿಯ ಮನೆತನದವರೇ,

ಯೆಹೋವನನ್ನು ಕೊಂಡಾಡಿರಿ;

ಯೆಹೋವನ ಭಕ್ತರೇ,

ಯೆಹೋವನನ್ನು ಕೊಂಡಾಡಿರಿ.

ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ,

ಕೀರ್ತಿ ಉಂಟಾಗಲಿ,

ಯೆಹೋವನಿಗೆ ಸ್ತೋತ್ರ!

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.