Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 118

ಹಬ್ಬದ ಗೀತೆ

ನೆಹೆ 8:14-18; ಯೆಶಾ 12

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;

ಆತನು ಒಳ್ಳೆಯವನು.

ಆತನ ಕೃಪೆಯು ಶಾಶ್ವತವಾಗಿದೆ.

ಇಸ್ರಾಯೇಲರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಆರೋನನ ಮನೆತನದವರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಯೆಹೋವನ ಭಕ್ತರು, “ಆತನ ಕೃಪೆಯು ಶಾಶ್ವತ” ಎಂದು ಹೇಳಲಿ.

ಇಕ್ಕಟ್ಟಿನಲ್ಲಿ ಯೆಹೋವನಿಗೆ ಮೊರೆಯಿಟ್ಟೆನು;

ಆತನು ಸದುತ್ತರವನ್ನು ದಯಪಾಲಿಸಿ, ನನ್ನನ್ನು ವಿಶಾಲವಾದ ಸ್ಥಳದಲ್ಲಿ ನೆಲೆಸುವಂತೆ ಮಾಡಿದನು.

ಯೆಹೋವನು ನನ್ನ ಕಡೆ ಇದ್ದಾನೆ; ಭಯಪಡೆನು.

ಮನುಷ್ಯನು ನನಗೆ ಏನು ಮಾಡಾನು?

ಯೆಹೋವನು ನನಗೆ ಇದ್ದಾನೆ;

ಆತನೇ ನನಗೆ ಸಹಾಯಕನು;

ನನ್ನ ವೈರಿಗಳಿಗಾಗುವ ಶಿಕ್ಷೆಯನ್ನು ನೋಡುವೆನು.

ಮನುಷ್ಯರಲ್ಲಿ ಭರವಸವಿಡುವುದಕ್ಕಿಂತ,

ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

ಪ್ರಭುಗಳಲ್ಲಿ ಭರವಸವಿಡುವುದಕ್ಕಿಂತ,

ಯೆಹೋವನನ್ನು ಆಶ್ರಯಿಸುವುದು ಒಳ್ಳೆಯದು.

ಜನಾಂಗದವರೆಲ್ಲಾ ನನ್ನನ್ನು ಸುತ್ತಿಕೊಂಡರು;

ಯೆಹೋವನ ಬಲದಿಂದ1 ಅವರನ್ನು ಸಂಹರಿಸುವೆನು.

ಅವರು ನನ್ನನ್ನು ಸುತ್ತಲೂ ಮುತ್ತಿದರು;

ಯೆಹೋವನ ಹೆಸರಿನ ಬಲದಿಂದ ಅವರನ್ನು ಸಂಹರಿಸುವೆನು.

ಅವರು ಜೇನು ನೊಣಗಳಂತೆ ನನ್ನನ್ನು ಕವಿದರೂ;

ಮುಳ್ಳಿನ ಬೆಂಕಿಯಂತೆ ಕ್ಷಣದಲ್ಲಿ ಅಳಿದುಹೋಗುವರು.

ಯೆಹೋವನ ಹೆಸರಿನಿಂದ ಅವರನ್ನು ಸಂಹರಿಸುವೆನು.

ವೈರಿಯೇ, ನನ್ನನ್ನು ಬೀಳುವಂತೆ ಮಾಡಿದಿ;

ಆದರೆ ಯೆಹೋವನು ನನಗೆ ಸಹಾಯ ಮಾಡಿದನು.

ನನ್ನ ಬಲವು, ಕೀರ್ತನೆಯು ಯೆಹೋವನೇ;

ಆತನಿಂದ ನನಗೆ ರಕ್ಷಣೆಯುಂಟಾಯಿತು.

ಉತ್ಸಾಹಧ್ವನಿಯು, ಜಯಘೋಷವು ನೀತಿವಂತರ ಗುಡಾರಗಳಲ್ಲಿವೆ;

ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

ಯೆಹೋವನ ಬಲಗೈ ಉನ್ನತವಾಗಿದೆ;

ಯೆಹೋವನ ಬಲಗೈ ಪರಾಕ್ರಮವನ್ನು ನಡೆಸುತ್ತದೆ.

ನಾನು ಸಾಯುವುದಿಲ್ಲ;

ಜೀವದಿಂದಿದ್ದು ಯೆಹೋವನ ಕ್ರಿಯೆಗಳನ್ನು ಸಾರುವೆನು.

ಯೆಹೋವನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು;

ಆದರೆ ಮರಣಕ್ಕೆ ಒಪ್ಪಿಸಲಿಲ್ಲ.

ನೀತಿದ್ವಾರಗಳನ್ನು2 ತೆರೆಯಿರಿ;

ನಾನು ಒಳಗೆ ಪ್ರವೇಶಿಸಿ ಯೆಹೋವನನ್ನು ಕೊಂಡಾಡುವೆನು.

ಇದು ಯೆಹೋವನ ಮಂದಿರದ್ವಾರವು;

ಇದರೊಳಗೆ ಪ್ರವೇಶಿಸತಕ್ಕವರು ನೀತಿವಂತರೇ.

ನನಗೆ ಸದುತ್ತರವನ್ನು ದಯಪಾಲಿಸಿ ರಕ್ಷಿಸಿದಾತನೇ,

ನಿನ್ನನ್ನು ಕೊಂಡಾಡುತ್ತೇನೆ.

ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ,

ಮುಖ್ಯವಾದ ಮೂಲೆಗಲ್ಲಾಯಿತು;

ಇದು ಯೆಹೋವನಿಂದಲೇ ಆಯಿತು;

ನಮಗೆ ಆಶ್ಚರ್ಯವಾಗಿ ತೋರುತ್ತದೆ.

ಈ ದಿನವು ಯೆಹೋವನಿಂದಲೇ ನೇಮಕವಾದದ್ದು;

ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ.

ಯೆಹೋವನೇ, ದಯವಿಟ್ಟು ರಕ್ಷಿಸು;

ಯೆಹೋವನೇ, ದಯವಿಟ್ಟು ಸಾಫಲ್ಯಕೊಡು.

ಯೆಹೋವನ ಹೆಸರಿನಲ್ಲಿ ಒಳಗೆ ಬರುವವನಿಗೆ ಆಶೀರ್ವಾದ;

ಯೆಹೋವನ ಮಂದಿರದಲ್ಲಿರುವ ನಾವು ನಿಮ್ಮನ್ನು ಆಶೀರ್ವದಿಸುತ್ತೇವೆ.

ಯೆಹೋವನೇ ದೇವರು;

ಆತನು ನಮಗೆ ಪ್ರಕಾಶವನ್ನು ಅನುಗ್ರಹಿಸಿದ್ದಾನೆ.

ರೆಂಬೆಗಳನ್ನು ಹಿಡಿದುಕೊಂಡು ಮೆರವಣಿಗೆಯಾಗಿ

ಯಜ್ಞವೇದಿಯ ಕೊಂಬುಗಳ ಸಮೀಪಕ್ಕೆ ಬನ್ನಿರಿ.

ನೀನು ನನ್ನ ದೇವರು; ನಿನ್ನನ್ನು ಕೊಂಡಾಡುತ್ತೇನೆ;

ನನ್ನ ದೇವರೇ, ನಿನ್ನನ್ನು ಘನಪಡಿಸುತ್ತೇನೆ.

ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ;

ಆತನು ಒಳ್ಳೆಯವನು.

ಆತನ ಕೃಪೆಯು ಶಾಶ್ವತವಾದದ್ದು.

Source notes (2)
  1. Footnote ಬಲದಿಂದ ಅಥವಾ ಹೆಸರಿನಿಂದ.
  2. Footnote ನೀತಿದ್ವಾರಗಳನ್ನು ಅಥವಾ ದೇವಜನರು ಪ್ರವೇಶಿಸುವಂಥ ದ್ವಾರವನ್ನು ಅಥವಾ ದೇವಾಲಯದ ದ್ವಾರವನ್ನು ತೆರೆಯಿರಿ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.